ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ನಲುಗಿದ ಮಹಾನಗರಿ: ಕಟ್ಟೆಯೊಡೆದ ಆಕ್ರೋಶ

ನಿದ್ರೆ ಇಲ್ಲದೆ ರಾತ್ರಿ ಕಳೆದ ನಾಗರಿಕರು: ಮನೆಗಳಿಗೆ ನುಗ್ಗಿದ ನೀರು l ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಕಿಡಿ
Last Updated 19 ಮೇ 2022, 1:46 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳವಾರ ರಾತ್ರಿ ಸುರಿದ ‘ಮಹಾ’ ಮಳೆಗೆ ಮಹಾನಗರಿಯೇ ಜಲದಿಗ್ಭಂದನಕ್ಕೆ ಒಳಗಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಸ್ಮಾರ್ಟ್‌ ರಸ್ತೆಗಳು ಹೊಳೆಯಂತಾದವು, ಬಡಾವಣೆಗಳೆಲ್ಲವೂ ನದಿಗಳಾದವು, ಬಹುತೇಕ ಬಡಾವಣೆ
ಗಳ ನೆಲ ಮಹಡಿ ಮನೆಗಳಿಗೆ ನೀರು ಪ್ರವಾಹದಂತೆ ನುಗ್ಗಿತು. ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ನೀರಿನಲ್ಲಿ ತೇಲಾಡಿದರೆ, ಮನೆಯ ಹೊರಗಿದ್ದ ಕಾರು, ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳು ನೀರಿನಲ್ಲಿ ಮುಳಗಿದವು. ಮಂಗಳವಾರ ಇಡೀ ರಾತ್ರಿ ನಿರಂತರವಾಗಿ ಸುರಿದ ಮಹಾಮಳೆ ಸಿಲಿಕಾನ್ ಸಿಟಿಯ ಜನರನ್ನು ಕ್ಷಣಮಾತ್ರದಲ್ಲೇ ಬೀದಿಗೆ ತಂದು ನಿಲ್ಲಿಸಿತು. ವರುಣನ ಆರ್ಭಟಕ್ಕೆ ನಲುಗಿದ ಜನ, ಮನೆಯಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರಹಾಕಲು ಮುಂಜಾನೆ ತನಕ ಹರಸಾಹಸಪಟ್ಟರು.

ಶ್ರೀರಾಮಪುರ ಮೆಟ್ರೊ ನಿಲ್ದಾಣದೊಳಗೆ ಮಳೆ ನೀರು ನುಗ್ಗಿತ್ತು. ಆನೆಪಾಳ್ಯ ಮತ್ತು ಬಸವೇಶ್ವರನಗರ
ದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಡಾಲರ್ಸ್‌ ಕಾಲೊನಿಯಂತಹ ಪ್ರತಿಷ್ಠಿತ ಬಡಾವಣೆಯಲ್ಲೂ ನಿವಾಸಿಗಳು ಸಂಕಷ್ಟ ಅನುಭವಿಸಿದರು.

ದೊಡ್ಡನೆಕ್ಕುಂದಿಯಲ್ಲಿರುವ ಅಕ್ಮೆ ಬ್ಯಾಲೇಟ್‌ ವಸತಿ ಸಮುಚ್ಚಯದ ನೆಲ ಮಹಡಿಗೆ ನೀರು ನುಗ್ಗಿದ್ದರಿಂದ ಸುಮಾರು 300ಕ್ಕೂ ಹೆಚ್ಚು ಕಾರುಗಳು ಮುಳುಗಡೆಯಾಗಿದ್ದವು.ಎಚ್‌ಬಿಆರ್‌ ಬಡಾವಣೆಯಲ್ಲಿರುವ ಎಸ್‌ಎಲ್‌ವಿ ವಸತಿ ಸಮುಚ್ಚಯದ ನೆಲಮಹಡಿ ಕೂಡ ಕೆರೆಯಂತಾಗಿತ್ತು. ಕಾರು ಮತ್ತು ದ್ವಿಚಕ್ರವಾಹನಗಳು ನೀರಿನಲ್ಲಿ ಮುಳುಗಿದ್ದವು. ವಾಹನಗಳು ಕೆಟ್ಟುನಿಂತಿದ್ದರಿಂದ ಬುಧವಾರ ಕಚೇರಿ ಹಾಗೂ ಇತರೆ ಕೆಲಸಗಳಿಗೆ ಹೋಗಲಾಗದೆ ನಿವಾಸಿಗಳು ಪರಿತಪಿಸುವಂತಾಗಿತ್ತು.

‘ವಸತಿ ಸಮುಚ್ಚಯವು ತಗ್ಗು ಪ್ರದೇಶದಲ್ಲಿದೆ. ಹೀಗಾಗಿ ಪ್ರತಿ ಬಾರಿ ಮಳೆ ಸುರಿದಾಗಲೂ ನೆಲ ಮಹಡಿಯಲ್ಲಿ ನೀರು ಶೇಖರಣೆಯಾಗುತ್ತದೆ. ಮಕ್ಕಳು, ವೃದ್ಧರು ಮನೆಯಿಂದ ಹೊರಬರುವುದಕ್ಕೂ ಭಯ‍ಪಡಬೇಕಾದ ವಾತಾವರಣ ಸೃಷ್ಟಿಯಾಗುತ್ತದೆ. ರಾತ್ರಿಯೆಲ್ಲಾ ನೀರು ಹೊರ ಹಾಕುವ ಕೆಲಸ ಮಾಡಿದ್ದೇವೆ’ ಎಂದು ನಿವಾಸಿಗಳು ತಿಳಿಸಿದರು.

ಪ್ರಮೋದ ಲೇಔಟ್‌ನ3ನೇ ತಿರುವಿನಲ್ಲೂ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಟಿವಿ, ಬಟ್ಟೆ ಸೇರಿ ಹಲವು ವಸ್ತುಗಳು ನೀರು ಪಾಲಾಗಿದ್ದವು. ಮನೆಯಲ್ಲಿ ಸುಮಾರು 4 ಅಡಿ ನೀರು ನಿಂತಿತ್ತು.

‘14 ವರ್ಷದಿಂದ ಬಡಾವಣೆಯಲ್ಲಿ ನೆಲೆಸಿದ್ದೇವೆ. ಮಂಗಳವಾರ ಉಂಟಾದ ಪ್ರವಾಹ ಹಿಂದೆಂದೂ ಕಂಡಿರಲಿಲ್ಲ. ಮನೆಯ ಅರ್ಧಭಾಗ ಕೊಳಚೆ ನೀರಿನಿಂದ ತುಂಬಿ ಹೋಗಿತ್ತು. ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮನೆಯೊಳಗೆ ಏಕಾಏಕಿ ನೀರು ನುಗ್ಗಿದ್ದನ್ನು ಕಂಡು ಹೌಹಾರಿದೆವು. ಕ್ರಮೇಣ ಮನೆಯಲ್ಲೆಲ್ಲಾ ಕೊಳಚೆ ನೀರು ತುಂಬಿಕೊಂಡಿತು. ಅದನ್ನು ಹೊರಹಾಕಲು ರಾತ್ರಿಯೆಲ್ಲಾ ಹರಸಾಹಸಪಟ್ಟೆವು. ನೀರಿನ ಸಂಪ್‌ನಲ್ಲೂ ಕೊಳಚೆ ನೀರು ಸಂಗ್ರಹವಾಗಿತ್ತು. ಅದನ್ನು ಹೊರ ಹಾಕುವುದರಲ್ಲಿ ಸಾಕಾಗಿ ಹೋಗಿದೆ’ ಎಂದು ಪ್ರಮೋದ ಲೇಔಟ್‌ನ ಗೀತಾ ಹೇಳಿದರು.

‘ಕಚೇರಿ ಕೆಲಸ ಮುಗಿಸಿ ರಾತ್ರಿ 10.30ರ ಸುಮಾರಿಗೆ ಮನೆಗೆ ಹೋದಾಗ ಇಡೀ ರಸ್ತೆ ಹೊಳೆಯಂತಾಗಿತ್ತು. ರಾತ್ರಿ 1 ಗಂಟೆಯವರೆಗೂ ರಸ್ತೆ ಬದಿಯಲ್ಲೇ ನಿಂತುಕೊಂಡಿದ್ದೆ. ಪ್ರವಾಹ ಇಳಿದ ಬಳಿಕ ಮನೆ ತಲು‍‍‍ಪಿದೆ’ ಎಂದು ಐಟಿ ಉದ್ಯೋಗಿ ಬಿಂದು ಹೇಳಿದರು.

ಇಟ್ಟಮಡು 8ನೇ ‘ಎ’ ತಿರುವಿನಲ್ಲಿ ಮೂರು ಮನೆಗಳಿಗೆ ನೀರು ನುಗ್ಗಿತ್ತು. ಮನೆಗಳಲ್ಲಿದ್ದ ವಸ್ತುಗಳೆಲ್ಲಾ ಜಲಾವೃತವಾಗಿದ್ದವು. ‘ರಾತ್ರಿ ಇಡೀ ಬಿಬಿಎಂಪಿ, ಪೊಲೀಸ್‌ ಸಿಬ್ಬಂದಿಗೆ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸಲಿಲ್ಲ. ನೀರಿನಲ್ಲಿ ನಿಂತುಕೊಂಡೇ ರಾತ್ರಿ ಕಳೆದೆವು’ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

ಕೋರಮಂಗಲದ 6ನೇ ಬ್ಲಾಕ್‌ ಕೂಡ ಜಲಾವೃತವಾಗಿತ್ತು. ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ಟೌನ್‌ಶಿಪ್‌ನ ಜನರೂ ಮಳೆ ನೀರಿನಿಂದ ಸಂಕಷ್ಟ ಎದುರಿಸಿದರು.

‘ಮನೆಯ ನೆಲಮಹಡಿಯಲ್ಲಿ ಸುಮಾರು 5 ಅಡಿಯಷ್ಟು ನೀರು ಶೇಖರಣೆಯಾಗಿತ್ತು. ಪ್ರತಿವರ್ಷವೂ ಇದೇ ರೀತಿಯಾಗುತ್ತಿದೆ. ಇದರಿಂದ ರೋಸಿ ಹೋಗಿದ್ದೇವೆ. ಬಿಬಿಎಂಪಿ ಹಾಗೂ ಜಲಮಂಡಳಿಯವರಿಗೆ ಲೂಟಿ ಮಾಡುವುದೊಂದೆ ಗೊತ್ತು. ಅವರು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ’ ಎಂದು ಡಾಲರ್ಸ್‌ ಕಾಲೊನಿ ನಿವಾಸಿ ಲಹರಿ ವೇಲು ಕಿಡಿಕಾರಿದರು.

ವಡ್ಡರಪಾಳ್ಯ: ಸಚಿವ ಬೈರತಿ ಬಸವರಾಜ್‌ಗೆ ತರಾಟೆ

ಹೊರಮಾವು ವಡ್ಡರಪಾಳ್ಯ, ಅನುಗ್ರಹ ಲೇಔಟ್, ಕಾವೇರಿನಗರದ ಶ್ರೀಸಾಯಿ ಬಡಾವಣೆಗಳಿಗೆ ಈ ಬಾರಿಯೂ ಮಳೆ ನೀರು ನುಗ್ಗಿದ್ದು, ರೋಸಿ ಹೋಗಿರುವ ನಿವಾಸಿಗಳು ಸಚಿವ ಬೈರತಿ ಬಸವರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.

ರಾಜಕಾಲುವೆಗೆ ಅಡ್ಡಲಾಗಿರುವ ರೈಲ್ವೆ ಸೇತುವೆ ಕಿರಿದಾಗಿದ್ದು, ಅದರಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ಪ್ರತಿ ಮಳೆಯಲ್ಲೂ ವಡ್ಡರಪಾಳ್ಯ ಜಲಾವೃತವಾಗುವುದು ಸಾಮಾನ್ಯವಾಗಿದ್ದು, ಆಕಾಶದಲ್ಲಿ ಮೋಡ ಕಟ್ಟಿದರೆ ನಿವಾಸಿಗಳು ಭಯಪಡುವ ಸ್ಥಿತಿ ಇದೆ.

ಮಂಗಳ‌ವಾರ ಸುರಿದ ಮಹಾಮಳೆಯಲ್ಲಿ ವಡ್ಡರಪಾಳ್ಯ ಹಿಂದಿನ ಎಲ್ಲಾ ದಿನಗಳಿಂತ ಹೆಚ್ಚಿನ ಸಮಸ್ಯೆಗೆ ಸಿಲುಕಿತ್ತು. 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಇಡೀ ರಾತ್ರಿ ನೀರು ಹೊರ ಹಾಕಲಾಗದೆ ನಿವಾಸಿಗಳು ಪರದಾಡಿದರು. ‘ಪ್ರತಿ ಮಳೆಗೂ ಮನೆಗೆ ಬರುವ ನೀರನ್ನು ಹೊರ ಹಾಕುವುದೇ ಕೆಲಸವಾಗಿದೆ. ದವಸ –ಧಾನ್ಯವೆಲ್ಲ ನೀರುಪಾಲಾಗಿದೆ, ಮಾಡಿಟ್ಟಿದ್ದ ಅನ್ನ ಕೊಚ್ಚಿ ಹೋಯಿತು’ ಎಂದು ನಿವಾಸಿಗಳು ಕಣ್ಣೀರಿಟ್ಟರು.

ಬೆಲೆಬಾಳುವ ಗೃಹ ಉಪಯೋಗಿ ವಸ್ತುಗಳು, ಮನೆ‌ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ, ಕಾರು ಹಾಗೂ ಆಟೋರಿಕ್ಷಾಗಳು ನೀರಿನಲ್ಲಿ ‌ಮುಳುಗಿ ಹೋದವು. ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಮನೆಯ ಟೆರೇಸ್ ಮತ್ತು ಮಹಡಿ ಮೇಲೆ ಅಶ್ರಯ ಪಡೆದಿದ್ದರು.

ಮೂರು ಬಾರಿ ಪ್ರವಾಹದಂತೆ ನೀರು ನುಗ್ಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಂದು ಹೋಗುತ್ತಾರೆಯೇ ಹೊರತು ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ. ಮತ್ತೆ ಮಳೆ ಬಂದರೆ ಏನು ಮಾಡುವುದು ಎಂದು ನಿವಾಸಿ ಗೀತಾ ಅಳಲು ತೋಡಿಕೊಂಡರು.

ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಬಂದ ಬೈರತಿ ಬಸವರಾಜ್ ಅವರನ್ನು ಮಾಧ್ಯಮಗಳ ಎದುರೇ ನಿವಾಸಿಗಳು ತರಾಟೆಗೆ ತೆಗೆದುಕೊಂಡರು.

‘ಹಿಂದಿನ ಎರಡು ವರ್ಷಗಳಿಂದ ನೀಡಿರುವ ಭರವಸೆ ಏನಾಯಿತು? ಮೂರು ತಿಂಗಳ ಹಿಂದೆಯೂ ಇದೇ ಮಾತು ಹೇಳಿ ಹೋಗಿದ್ದಿರಿ. ಮತ್ತೆ ಭರವಸೆಯನ್ನೇ ನೀಡುವುದರಿಂದ ಏನು ಪ್ರಯೋಜನ’ ಎಂದು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘ರಾತ್ರಿ ಜೋರು ಮಳೆಯಾಗಿದ್ದರಿಂದ ಸಮಸ್ಯೆಯಾಗಿದೆ. ₹27 ಕೋಟಿ ಮೊತ್ತದಲ್ಲಿ ಸೇತುವೆ ವಿಸ್ತರಣೆ ಕಾಮಗಾರಿ ಆರಂಭಿಸಲು ಅನುಮತಿ ದೊರತಿದೆ. ಹದಿನೈದು ದಿನದೊಳಗೆ ಟೆಂಡರ್ ಆಹ್ವಾನಿಸಲಾಗುವುದು’ ಎಂದು ಭರವಸೆ ನೀಡಿದರು.

‘ಇಲ್ಲಿನ ಸಮಸ್ಯೆಗಳ ಕುರಿತು ಈಗಾಗಲೇ ಮುಖ್ಯಮಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಮುಂದಿನ ಫೆಬ್ರುವರಿ ಅಂತ್ಯದೊಳಗೆ ಇಲ್ಲಿನ ಸಮಸ್ಯೆ ನಿವಾರಿಸದಿದ್ದರೆ ಮತ ಕೇಳಲು ಬರುವುದಿಲ್ಲ’ ಎಂದು ಹೇಳಿದರು.

ಗೆದ್ದಲಹಳ್ಳಿಯಲ್ಲೂ ಜಲದಿಗ್ಬಂಧನ

ಹೆಣ್ಣೂರು ಸಮೀಪದ ಗೆದ್ದಲಹಳ್ಳಿಯ ನಿವಾಸಿಗಳೂ ಜಲ ದಿಗ್ಬಂಧನಕ್ಕೆ ಒಳಗಾಗಿದ್ದರು. 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಕಂಗಾಲಾಗಿದ್ದರು. ದವಸ ಧಾನ್ಯಗಳು ತೊಯ್ದು ಹೋಗಿದ್ದವು. ಪೀಠೋಪಕರಣಗಳೂ ಒದ್ದೆಯಾಗಿದ್ದವು. ಮನೆಗಳ ಸುತ್ತಮುತ್ತ ಮಂಡಿಯವರೆಗೂ ನೀರು ನಿಂತಿದ್ದರಿಂದ ಬೇರೆಡೆ ಹೋಗಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಎತ್ತರದ ಪ್ರದೇಶಗಳಲ್ಲಿನ ನಿವಾಸಿಗಳು ಸಂತ್ರಸ್ತರಿಗೆ ಆಹಾರ ಹಾಗೂ ಕುಡಿಯುವ ನೀರು ಪೂರೈಸುತ್ತಿದ್ದರು.

‘ಹಾವು ಸೇರಿದಂತೆ ಇತರೆ ಕ್ರಿಮಿಗಳು ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ. ಈಗಲೇ ಹೀಗಾದರೆ ಮಳೆಗಾಲದಲ್ಲಿ ನಮ್ಮ ಪರಿಸ್ಥಿತಿ ಹೇಗಾಗಬಹುದು. ಅದನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟ’ ಎಂದು ಅಳಲು ತೋಡಿಕೊಂಡರು.

ಊಟವಿಲ್ಲದೆ ಪರದಾಡಿದರು

ಮಳೆಯ ನೀರು ಮನೆಗೆ ನುಗ್ಗಿ ದವಸ–ಧಾನ್ಯ ಮತ್ತು ಅಡುಗೆ ಸಾಮಗ್ರಿಗಳೆಲ್ಲವೂ ನೀರುಪಾಲಾಗಿದ್ದರಿಂದ ನಿವಾಸಿಗಳು ಊಟಕ್ಕೂ ಪರದಾಡುವಂತಾಯಿತು.

‘ರಾತ್ರಿಯಿಂದ ಊಟವಿಲ್ಲ. ಕುಡಿಯಲು ನೀರೂ ಇಲ್ಲ. ಮುಂಜಾನೆಯವರೆಗೂ ಮನೆ ಸ್ವಚ್ಛಗೊಳಿಸುವುದರಲ್ಲೇ ಮಗ್ನರಾಗಿದ್ದೇವೆ. ಮತ್ತೆ ಮಳೆ ಸುರಿದರೆ ನಮ್ಮ ಕಥೆ ಮುಗಿದಂತೆ’ ಎಂದು ಪ್ರಮೋದ್ ಲೇಔಟ್‌ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ಮಹಾಲಕ್ಷ್ಮೀ ಲೇಔಟ್‌, ಹೊರಮಾವು ವಡ್ಡರಪಾಳ್ಯದಲ್ಲೂ ನಿವಾಸಿಗಳ ಸ್ಥಿತಿ ಇದೇ ರೀತಿ ಇತ್ತು. ವಡ್ಡರಪಾಳ್ಯದಲ್ಲಿ ಟ್ರ್ಯಾಕ್ಟರ್‌ನಲ್ಲಿ ಆಹಾರದ ಪೊಟ್ಟಣಗಳನ್ನು ತಂದು ಸ್ಥಳೀಯರು ಸಂತ್ರಸ್ತರಿಗೆ ವಿತರಿಸಿದರು.

ಪಶ್ಚಿಮ ವಲಯ: ಸಾವಿರ ಮನೆಗಳಿಗೆ ನೀರು

ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ವೃಷಭಾವತಿ ನಗರ, ಜೆ.ಸಿ.ನಗರ, ಕಮಲಾನಗರ, ನಂದಿನಿ ಲೇಔಟ್, ಕಂಠೀರವನಗರ ಸೇರಿ ಬಿಬಿಎಂಪಿ ಪಶ್ಚಿಮ ವಲಯವೊಂದರಲ್ಲೇ ಒಂದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.

ಬುಧವಾರ ಬೆಳಿಗ್ಗೆ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ ಶಾಸಕರೂ ಆಗಿರುವ ಅಬಕಾರಿ ಸಚಿವ ಕೆ.ಗೋಪಾಲಯ್ಯ, ‘ನನ್ನ ಕ್ಷೇತ್ರವೊಂದರಲ್ಲೇ 850ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ’ ಎಂದರು.

ಪಶ್ಚಿಮ ವಲಯ: ಸಾವಿರ ಮನೆಗಳಿಗೆ ನೀರು

ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ವೃಷಭಾವತಿ ನಗರ, ಜೆ.ಸಿ.ನಗರ, ಕಮಲಾನಗರ, ನಂದಿನಿ ಲೇಔಟ್, ಕಂಠೀರವನಗರ ಸೇರಿ ಬಿಬಿಎಂಪಿ ಪಶ್ಚಿಮ ವಲಯವೊಂದರಲ್ಲೇ ಒಂದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.

ಬುಧವಾರ ಬೆಳಿಗ್ಗೆ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ ಶಾಸಕರೂ ಆಗಿರುವ ಅಬಕಾರಿ ಸಚಿವ ಕೆ.ಗೋಪಾಲಯ್ಯ, ‘ನನ್ನ ಕ್ಷೇತ್ರವೊಂದರಲ್ಲೇ 850ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ’ ಎಂದರು.

ಕಿತ್ತುಹೋದ ರಸ್ತೆಗಳು

ಶ್ರೀನಿವಾಸನಗರದ ಸೀತಾ ವೃತ್ತದ ಬಳಿಯ ರಸ್ತೆಗೆ ಇತ್ತೀಚೆಗೆ ಹಾಕಲಾಗಿದ್ದ ಡಾಂಬರ್‌, ಒಂದೇ ಮಳೆಗೆ ಕಿತ್ತುಹೋಗಿದೆ.

ದಾಸರಹಳ್ಳಿಯ ರುಕ್ಮಿಣಿನಗರದ ರಸ್ತೆಯೊಂದಕ್ಕೆ ಕೆಲವೇ ದಿನಗಳ ಹಿಂದೆ ಹಾಕಲಾಗಿದ್ದ ಡಾಂಬರು ಹಾಗೂ 10 ದಿನಗಳ ಹಿಂದೆ ರಾಜಾಜಿನಗರದ ಪ್ರಕಾಶನಗರದಲ್ಲಿ ಹಾಕಿದ್ದ ಡಾಂಬರು ಕೊಚ್ಚಿ ಹೋಗಿದೆ. ಒಂದೇ ಮಳೆಗೆ ರಸ್ತೆಯ ಡಾಂಬರ್ ಕೊಚ್ಚಿ ಹೋಗಿರುವುದು ಕಳಪೆ ಕಾಮಗಾರಿ ಉದಾಹರಣೆ ಎಂದು ಸ್ಥಳೀಯರು ಆರೋಪಿಸಿದರು. ರಾಜರಾಜೇಶ್ವರಿ ನಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಬೆಳಿಗ್ಗೆ ಭೇಟಿ ನೀಡಿದ್ದರು. ಅವರು ಸಂಚರಿಸುವ ರಸ್ತೆಗಳನ್ನೆಲ್ಲಾ ಪೌರ ಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದರು. ಇದಕ್ಕೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ರುಕ್ಮಿಣಿನಗರ ಮತ್ತೆ ಜಲಾವೃತ

ದಾಸರಹಳ್ಳಿಯ ವ್ಯಾಪ್ತಿಯ ರುಕ್ಮಿಣಿನಗರ, ಗುಂಡಪ್ಪ ಲೇಔಟ್‌, ಬೆಲ್ಮಾರ್‌ ಲೇಔಟ್‌ನಲ್ಲಿ ಈ ಬಾರಿಯೂ ಮಳೆ ನೀರು ನಿವಾಸಿಗಳನ್ನು ಕಾಡಿತು.

ಚೊಕ್ಕಸಂದ್ರ ಕೆರೆಯಿಂದ ದೊಡ್ಡಬಿದರಕಲ್ಲು ಕೆರೆಗೆ ನೀರು ಹರಿಯುವ ರಾಜಕಾಲುವೆ ಕಿರಿದಾಗಿದ್ದು, ರಾತ್ರಿ ಏಕಾಏಕಿ ಉಕ್ಕಿದ ನೀರು ಸರಾಗವಾಗಿ ಹರಿದು ಹೋಗದೆ ಬಡಾವಣೆಗಳಿಗೆ ನುಗ್ಗಿತು.

ಮನೆಯಿಂದ ನೀರು ಹೊರಹಾಕಲು ನಿವಾಸಿಗಳು ರಾತ್ರಿ ಇಡೀ ಜಾಗರಣೆ ಮಾಡಿದರು. ಬೆಳಿಗ್ಗೆ ಸ್ಥಳಕ್ಕೆ ಬಂದು ಬಿಬಿಎಂಪಿ ಅಧಿಕಾರಿಗಳನ್ನು ನಿವಾಸಿಗಳು ತರಾಟೆಗೆ ತೆಗೆದುಕೊಂಡರು. ‘ಪ್ರತಿ ಮಳೆಯಲ್ಲೂ ನಾವು ಸಮಸ್ಯೆ ಅನುಭವಿಸುತ್ತಿದ್ದೇವೆ. ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ವಿಸ್ತರಣೆ ಮಾಡದೆ ಅಮಾಯಕರನ್ನು ಸಂಕಷ್ಟಕ್ಕೆ ತಳ್ಳುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ನೀರಿನಲ್ಲಿ ಮುಳುಗಿದ ಬಿಎಂಟಿಸಿ ಬಸ್

ಕಲ್ಯಾಣನಗರದ ಜಂಕ್ಷನ್‌ನ ಕೆಳಸೇತುವೆಯಲ್ಲಿ ಮಳೆ ನೀರಿನಲ್ಲಿ ಬಿಎಂಟಿಸಿ ಬಸ್‌ ಅರ್ಧದಷ್ಟು ಮುಳುಗಿ ಪ್ರಯಾಣಿಕರು ಪರದಾಡಿದರು.

ಬಸ್‌ನಲ್ಲಿನ ಸೀಟುಗಳು ಮುಳುಗಿದ್ದರಿಂದ ಪ್ರಯಾಣಿಕರು ಸೀಟಿನ ಮೇಲೆ ಹತ್ತಿ ನಿಂತಿದ್ದರು. ಕೆಳ ಸೇತುವೆಯಲ್ಲಿ ಹೆಚ್ಚಿನ ನೀರು ಇದ್ದುದರಿಂದ ಚಾಲಕ ಅರ್ಧದಲ್ಲೇ ಬಸ್ ನಿಲ್ಲಿಸಿದ್ದರು. ಕಚೇರಿಗಳಿಗೆ ಕೆಲಸಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಬಸ್‌ನಲ್ಲಿ ಸಿಲುಕಿ ಪರದಾಡಿದರು. ಬಸ್‌ ಮುಳುಗುವ ಭಯದಲ್ಲಿ ಕೆಲವರು ಕಣ್ಣೀರಿಟ್ಟರು. ನೀರು ಕಡಿಮೆಯಾದ ಬಳಿಕ ಬಸ್‌ ಮುಂದಕ್ಕೆ ಚಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT