ಬುಧವಾರ, ಡಿಸೆಂಬರ್ 7, 2022
21 °C

ಪ್ರಧಾನಿ ನರೇಂದ್ರ ಮೋದಿ ಭೇಟಿ: ಸಂಚಾರ ಬಂದ್‌, ಪರ್ಯಾಯ ಮಾರ್ಗಗಳಲ್ಲಿ ವಾಹನ ದಟ್ಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸಂದರ್ಭದಲ್ಲಿ ಶುಕ್ರವಾರ ನಗರದ ಪ್ರಮುಖ ಮಾರ್ಗ ಗಳನ್ನು ಬಂದ್‌ ಮಾಡಿದ್ದರ ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರು ಸಮಸ್ಯೆಗೆ ಸಿಲುಕಿದರು. 

ಮೈಸೂರು–ಚೆನ್ನೈ ನಡುವಣ ‘ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ಹಾಗೂ ‘ಕಾಶಿ ದರ್ಶನ’ ವಿಶೇಷ ರೈಲಿಗೆ ಚಾಲನೆ, ವಿಧಾನಸೌಧದ ಆವರಣದಲ್ಲಿ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘2ನೇ ಟರ್ಮಿನಲ್‌’ ಉದ್ಘಾಟನೆ, ನಾಡಪ್ರಭು ಕೆಂಪೇಗೌಡ 108 ಅಡಿ ಎತ್ತರದ ಪ್ರಗತಿಯ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು.

ಪ್ರಧಾನಿ ಅವರು ಸಂಚರಿಸಿದ ಮಾರ್ಗಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ವಾಹನಗಳ ಓಡಾಟವನ್ನು ನಿರ್ಬಂಧಿಸಿ, ಪರ್ಯಾಯ ಮಾರ್ಗದಲ್ಲಿ ತೆರಳುವಂತೆ ಸೂಚಿಸಲಾಗಿತ್ತು. ಈ ಮಾರ್ಗಗಳಲ್ಲಿ ಸಿಲುಕಿ ಸವಾರರು ಪರದಾಡಿದರು.

ವ್ಯಾಪಾರ, ದೂರದ ಊರು ಹಾಗೂ ಖಾಸಗಿ ಕಚೇರಿಗಳಿಗೆ ನಿಗದಿತ ಸಮಯಕ್ಕೆ ತೆರಳಲು ಜನರಿಗೆ ಸಾಧ್ಯವಾಗಲಿಲ್ಲ. ಮಾಹಿತಿ ತಿಳಿಯದೇ ಮೆಜೆಸಿಕ್ಟ್‌ ಕಡೆಗೆ ತೆರಳಲು ಬಂದವರು ಮಾರ್ಗ ಮಧ್ಯದಲ್ಲಿಯೇ ಸಿಲುಕಿದರು.

ಹೆಚ್ಚುವರಿ ಪೊಲೀಸ್ ಆಯುಕ್ತ, ಜಂಟಿ ಆಯುಕ್ತ, 8 ಡಿಸಿಪಿಗಳು, 13 ಎಸಿಪಿಗಳು, 50 ಇನ್‌ಸ್ಪೆಕ್ಟರ್‌ಗಳು ಭದ್ರತೆಯ ಹೊಣೆ ಹೊತ್ತಿದ್ದರು. ಟ್ರಾಫಿಕ್‌ ಪೊಲೀಸ್‌, ಕೆಎಸ್ಆರ್‌ಪಿ, ಸಿಎಆರ್ ಸಿಬ್ಬಂದಿಯನ್ನೂ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಪ್ರಧಾನಿ ಅವರು ಸಂಚರಿಸಿದ ಮಾರ್ಗಗಳಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು. ಇದರಿಂದ ಪರ್ಯಾಯ ಮಾರ್ಗದಲ್ಲಿ ಸಂಚಾರ ದಟ್ಟಣೆ ನಿಯಂ ತ್ರಿಸಲು ಪೊಲೀಸರ ಕೊರತೆ ಇತ್ತು.

ಮೇಖ್ರಿ ವೃತ್ತ, ಕಾವೇರಿ ಜಂಕ್ಷನ್, ವಿಂಡ್ಸರ್ ಮ್ಯಾನರ್, ರಮಣ ಮಹರ್ಷಿ ರಸ್ತೆ, ಬಸವೇಶ್ವರ ವೃತ್ತ, ಶಾಸಕರ ಭವನ, ಉದ್ಯೋಗ ಸೌಧ (ಕೆಪಿಎಸ್‌ಸಿ ಕಚೇರಿ), ಶೇಷಾದ್ರಿ ರಸ್ತೆ, ಆನಂದರಾವ್ ವೃತ್ತ ಮೇಲ್ಸೇತುವೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಈ ರಸ್ತೆಗಳಲ್ಲಿ ಮಧ್ಯಾಹ್ನ 3 ಗಂಟೆಯ ತನಕವೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೆಂ‍‍ಪೇಗೌಡ ಪ್ರತಿಮೆ ಬಳಿ ನಡೆದ ಸಮಾರಂಭಕ್ಕೆ ಕರೆದೊಯ್ಯಲು ನೂರಾರು ಸಂಖ್ಯೆಯಲ್ಲಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪಡೆಯಲಾಗಿತ್ತು. ವಿವಿಧ ಕ್ಷೇತ್ರಗಳಿಂದ ಕಾರ್ಯಕರ್ತರನ್ನು ಬಸ್‌ಗಳು ಕರೆ ದೊಯ್ದವು. ಇದರಿಂದ ನಗರದ ಹಲವು ಕಡೆಗೆ ಬಿಎಂಟಿಸಿ ಬಸ್‌ಗಳ ಸಂಚಾರ ಸೇವೆ ಇರಲಿಲ್ಲ. ಇದರಿಂದಾಗಿಯೂ ಪ್ರಯಾಣಿಕರು ಪರದಾಡಿದರು.

ಬಾಳೇಕುಂದ್ರಿ ಜಂಕ್ಷನ್‌ನಿಂದ ಮೆಜೆಸ್ಟಿಕ್ ಕಡೆಗೆ ಸಂಚರಿಸುವವರು, ಕನ್ನಿಂಗ್ ಹ್ಯಾಂ ರಸ್ತೆ ಮೂಲಕ ತೆರಳುವಂತೆ ಸೂಚಿಸಲಾಗಿತ್ತು. ಅಲ್ಲಿ ಕಿರಿದಾದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಮೈಸೂರು ಬ್ಯಾಂಕ್‌ ವೃತ್ತದಿಂದ ಅರಮನೆ ರಸ್ತೆಗೆ ಹೋಗುವ ವಾಹನಗಳು, ಕೆಂಪೇಗೌಡ ರಸ್ತೆಯ ಮೂಲಕ ತೆರಳಿದವು.

ಬಿಎಚ್‌ಇಎಲ್ ವೃತ್ತದಿಂದ ಮೇಖ್ರಿ ವೃತ್ತದ ಕಡೆಗೆ ಹೋಗುವವರು, ಸದಾಶಿವನಗರ ಪೊಲೀಸ್ ಠಾಣೆ-ಮಾರಮ್ಮ ದೇವಸ್ಥಾನ ವೃತ್ತ-ಮಾರ್ಗೋಸಾ ರಸ್ತೆ ಮೂಲಕ‌ ಸಂಚರಿಸಲು ಅವಕಾಶ ನೀಡಲಾಗಿತ್ತು. ಯಶವಂತಪುರ ಸೇರಿ ಮತ್ತಿತರ ಕಡೆಯಿಂದ ದೊಡ್ಡ ಸಂಖ್ಯೆಯಲ್ಲಿ ವಾಹನಗಳು ಬಂದು ದಟ್ಟಣೆ ಉಂಟಾಗಿತ್ತು.


ಶುಕ್ರವಾರ ಪ್ರಧಾನಿ ಅವರನ್ನು ಸ್ವಾಗತಿಸಲು ಸೇರಿದ್ದ ಬಿಜೆಪಿ ಕಾರ್ಯಕರ್ತರು – ಪ್ರಜಾವಾಣಿ ಚಿತ್ರಗಳು

ಕಾರ್ಯಕರ್ತರ ಹರ್ಷೋದ್ಗಾರ: ಹುರಿದುಂಬಿಸಿದ ಮೋದಿ
ಬೆಂಗಳೂರು:
‘ಪ್ರಗತಿ ಪ್ರತಿಮೆ’ ಅನಾವರಣ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಗರಕ್ಕೆ ಶುಕ್ರವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಸ್ವಾಗತಿಸಿದರು. 

ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಕಾರ್ಯಕರ್ತರು ‘ಮೋದಿ ಮೋದಿ’ ಎಂದು ಜೈಕಾರ ಹಾಕಿದರು. ಬೆಳಿಗ್ಗೆ 9ಕ್ಕೆ ಭಾರತೀಯ ವಾಯು ಪಡೆಯ ವಿಶೇಷ ವಿಮಾನದ ಮೂಲಕ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿ ಹಲವು ಸಚಿವರು ಸ್ವಾಗತಿಸಿದರು.

ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಶಾಸಕರ ಭವನದ ಆವರಣದಲ್ಲಿನ ಸಂತ ಕನಕದಾಸ ಮತ್ತು ಮಹರ್ಷಿ ವಾಲ್ಮೀಕಿ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡಿದರು. ನಂತರ ವಿಧಾನಸೌಧ ಬಳಿಯ ಕರ್ನಾಟಕ ಉದ್ಯೋಗಸೌಧದ ಬಳಿ ಪ್ರಧಾನಿ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರತ್ತ ಕೈಬೀಸಿದರು. ಅಲ್ಲಿ, ಕಾರ್ಯಕರ್ತರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

ನಂತರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ‘ವಂದೇ ಭಾರತ್’ ರೈಲು ಉದ್ಘಾಟನೆಗೂ ಮೊದಲು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಯೂ ಕಾರಿನಿಂದ ಇಳಿದು ಕಾರ್ಯಕರ್ತರತ್ತ  ಕೈಬೀಸಿದರು. ಕಾರ್ಯಕರ್ತರು ಪಕ್ಷದ ಬಾವುಟಗಳನ್ನು ಪ್ರದರ್ಶಿಸಿದರು. ‘ಕ್ರಿಯಾಶೀಲ ಬೆಂಗಳೂರಿನ ಭೇಟಿಯನ್ನು ಸ್ಮರಣೀಯವಾಗಿಸಿದ್ದಕ್ಕೆ ಧನ್ಯ ವಾದಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ನಡೆದು ಸಾಗಿದರು...
ಪ್ರಧಾನಿ ಮೋದಿ ಭೇಟಿ ವೇಳೆ ಬಸ್‌ ಹಾಗೂ ಖಾಸಗಿ ವಾಹನ ನಿರ್ಬಂಧಿಸಿದ್ದರಿಂದ ಪ್ರಯಾಣಿಕರು ನಡೆದು ಸಾಗುತ್ತಿದ್ದ ದೃಶ್ಯ ಕಂಡುಬಂತು. ಮಕ್ಕಳು ಸಹ ರಸ್ತೆ ಬದಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರು.

ಆಟೊ ಚಾಲಕರು ಬಾಡಿಗೆ ಸಿಗಲಿಲ್ಲ ಎಂದು ನೋವು ತೋಡಿಕೊಂಡರು. ‘ಎಲ್ಲ ಮಾರ್ಗ ಬಂದ್ ಮಾಡಿ ನಮ್ಮ ದುಡಿಮೆ ಕಿತ್ತುಕೊಳ್ಳಲಾಗಿದೆ’ ಎಂದು ಕಣ್ಣೀರು ಹಾಕಿದರು. ಈ ಮಾರ್ಗದಲ್ಲಿ ಬೀದಿ ಬದಿ ವ್ಯಾ‍ಪಾರಿ
ಗಳನ್ನು ತೆರವುಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು