ಸೋಮವಾರ, ಅಕ್ಟೋಬರ್ 14, 2019
24 °C
ರಸ್ತೆ ಸಂಚಾರ ಬಂದ್; ಹಿಡಿಶಾಪ ಹಾಕಿದ ಪ್ರಯಾಣಿಕರು

ಪ್ರತಿಭಟನೆ: ಹೈರಾಣಾದ ಜನ

Published:
Updated:
Prajavani

ಬೆಂಗಳೂರು: ಪ್ರತಿಭಟನೆ ಸಲುವಾಗಿ ಮೆಜೆಸ್ಟಿಕ್‌ ಆಸುಪಾಸಿನ ಕೆಲ ಮುಖ್ಯರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಈ ಪ್ರದೇಶದ ಇನ್ನುಳಿದ ರಸ್ತೆಗಳಲ್ಲಿ ಗುರುವಾರ ವಿಪರೀತ ವಾಹನ ದಟ್ಟಣೆ ಉಂಟಾಯಿತು. ಕೇವಲ 1 ಕಿ.ಮೀ ದೂರ ಸಂಚರಿಸಲು ಗಂಟೆಗಟ್ಟಲೆ ಸಮಯ ಹಿಡಿದಿದ್ದರಿಂದ ವಾಹನ ಸವಾರರು ಹೈರಾಣಾದರು.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡದ ಸರ್ಕಾರಗಳ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಸ್ಥಳದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಜೆಡಿಎಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದರು. ರೈತ ಸಂಘ ರೈಲು ನಿಲ್ದಾಣದಿಂದ ಉದ್ಯಾನದವರೆಗೆ ಮೆರವಣಿಗೆ ನಡೆಸಿತು. ಇದೇ ವೇಳೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಂದ್ ಮಾಡಿದ್ದರಿಂದ ಸುತ್ತಮುತ್ತ ದಟ್ಟಣೆ ಕಂಡುಬಂತು.

ಸ್ವಾತಂತ್ರ್ಯ ಉದ್ಯಾನ, ವಿಧಾನಸೌಧ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವಾಹನಗಳ ಓಡಾಟಕ್ಕೆ ಅವಕಾಶ ಇರಲಿಲ್ಲ. ಅಲ್ಲೆಲ್ಲ ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್‌ಗಳನ್ನು ನಿಲ್ಲಿಸಲಾಗಿತ್ತು. ಇಂಥ ರಸ್ತೆಗಳಲ್ಲಿ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.

ಗಾಂಧಿನಗರ, ಓಕಳಿಪುರ, ಮಲ್ಲೇಶ್ವರ, ರೇಸ್‌ಕೋರ್ಸ್‌ ರಸ್ತೆ, ಕೆ.ಜಿ.ರಸ್ತೆ, ಶೇಷಾದ್ರಿಪುರ, ಮಾಗಡಿ ರಸ್ತೆ, ರಾಜಾಜಿನಗರದ ರಾಜಕುಮಾರ್ ರಸ್ತೆ, ಶ್ರೀರಾಮಪುರ, ಅರಮನೆ ರಸ್ತೆ, ಕೆ.ಆರ್.ವೃತ್ತ, ಕಾರ್ಪೊರೇಷನ್ ವೃತ್ತ ಹಾಗೂ ಸುತ್ತಮುತ್ತ ರಸ್ತೆಗಳಲ್ಲೂ ದಟ್ಟಣೆ ಬಿಸಿ ತಟ್ಟಿತು. ಮೆಜೆಸ್ಟಿಕ್‌ನಿಂದ ನಗರದ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಶೇಷಾದ್ರಿ ಮೇಲ್ಸೇತುವೆಯಲ್ಲೂ ವಾಹನಗಳ ಓಡಾಟ ಬಂದ್ ಮಾಡಲಾಗಿತ್ತು. ಸೇತುವೆ ಮೇಲೆ ಸಂಚರಿಸುತ್ತಿದ್ದ ವಾಹನಗಳನ್ನು ಆನಂದ್‌ರಾವ್ ವೃತ್ತ ಹಾಗೂ ರೇಸ್‌ಕೋರ್ಸ್‌ ರಸ್ತೆಗೆ ಕಳುಹಿಸಲಾಯಿತು. ಅಲ್ಲಿಯೂ ದಟ್ಟಣೆ ಇದ್ದಿದ್ದರಿಂದ ಬೈಕ್‌ನಂತಹ ಸಣ್ಣ ವಾಹನಗಳು ಮುಂದಕ್ಕೆ ಹೋಗುವಷ್ಟೂ ಜಾಗ ಇರಲಿಲ್ಲ.

*
ನಿತ್ಯವೂ ಶೇಷಾದ್ರಿ ಸೇತುವೆಯಲ್ಲಿ ಹಾದು ಜಯನಗರಕ್ಕೆ ಕೆಲಸಕ್ಕೆ ಹೋಗುತ್ತೇನೆ. ಪ್ರತಿಭಟನೆ ಮಾಹಿತಿ ಇರಲಿಲ್ಲ. ಸೇತುವೆ ಮೇಲೆ ಬಂದು ಸಿಲುಕಿದ್ದೇನೆ.
-ರಾಘವೇಂದ್ರ, ಖಾಸಗಿ ಕಂಪನಿ ಉದ್ಯೋಗಿ

*
ನಗರದ ಹೃದಯಭಾಗದ ರಸ್ತೆಗಳಲ್ಲೇ ವಾಹನಗಳ ಸಂಚಾರ ಬಂದ್ ಮಾಡಿದರೆ ಹೇಗೆ? ದಿನಗೂಲಿ ನಂಬಿ ಬದುಕುತ್ತಿರುವ ಕಾರ್ಮಿಕ ವರ್ಗದ ಅನ್ನ ಕಸಿಯುವ ಕೆಲಸವಿದು
-ಮನೋಜ್‌ಕುಮಾರ್, ಕೂಲಿ ಕಾರ್ಮಿಕ

*
ಪ್ರತಿಭಟನೆಗಾಗಿ ರಸ್ತೆ ಬಂದ್ ಮಾಡಿದರೆ ಪರಿಸ್ಥಿತಿ ಹದಗೆಡುತ್ತದೆ. ಅಂಗಡಿಗೆ ವಸ್ತುಗಳನ್ನು ಪೂರೈಸುವ ನಾನು, ಹೀಗೆ ರಸ್ತೆಯಲ್ಲೇ ನಿಂತು ಹಿಡಿಶಾಪ ಹಾಕಬೇಕಾಗುತ್ತದೆ.
-ಬಷೀರ್, ಶ್ರೀರಾಮಪುರ ನಿವಾಸಿ 

Post Comments (+)