ಬೆಂಗಳೂರು: ಈದ್ ಮಿಲಾದ್ ಹಬ್ಬ ಹಾಗೂ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ನಗರದ ಬಹುತೇಕ ರಸ್ತೆಗಳಲ್ಲಿ ಗುರುವಾರ ವಿಪರೀತ ದಟ್ಟಣೆ ಉಂಟಾಯಿತು.
ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದ ಚಾಮರಾಜಪೇಟೆ, ಶಿವಾಜಿನಗರ, ಕೆ.ಜಿ.ಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮೆರವಣಿಗೆ ನಡೆಯಿತು. ಹೆಚ್ಚಿನ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಹೊರಟಿದ್ದ ರಸ್ತೆಯಲ್ಲಿ ಕೆಲ ಗಂಟೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.
ರಿಚ್ಮಂಡ್ ವೃತ್ತ, ಕಾರ್ಪೊರೇಷನ್ ವೃತ್ತ, ರೆಸಿಡೆನ್ಸಿ ರಸ್ತೆ, ಮೆಜೆಸ್ಟಿಕ್, ಕೆ.ಆರ್. ವೃತ್ತ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ವಿಪರೀತ ದಟ್ಟಣೆ ಕಂಡುಬಂತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ದಟ್ಟಣೆಯಲ್ಲಿ ಸಿಲುಕಿ ಜನರು ಸುಸ್ತಾದರು.
ಬಸ್‌ಗಳಲ್ಲಿ ಹೊರಟಿದ್ದ ಕೆಲ ಪ್ರಯಾಣಿಕರು, ಅರ್ಧದಲ್ಲೇ ಇಳಿದು ನಿಗದಿತ ಸ್ಥಳದತ್ತ ನಡೆದುಕೊಂಡು ಹೋದರು.
ಹೆಬ್ಬಾಳ, ನಾಗವಾರ, ಹೆಣ್ಣೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಹಬ್ಬದ ಅಂಗವಾಗಿ ಮೆರವಣಿಗೆಗಳು ನಡೆದವು. ಹೊರವರ್ತುಲ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತು, ದಟ್ಟಣೆ ಕಂಡುಬಂತು.
ಶುಕ್ರವಾರ ಬಂದ್ ಇದ್ದು, ಶನಿವಾರ ಹಾಗೂ ಭಾನುವಾರ ರಜೆ ಇದೆ. ಹೀಗಾಗಿ, ನಗರದ ಹಲವರು, ಶುಕ್ರವಾರ ಸಂಜೆಯಿಂದಲೇ ತಮ್ಮೂರಿನತ್ತ ಹೊರಟರು. ಇದು ಸಹ ದಟ್ಟಣೆಗೆ ಕಾರಣವಾಯಿತು.
ಕೇಂದ್ರ ವಾಣಿಜ್ಯ ಪ್ರದೇಶದ (ಸಿಬಿಡಿ) ರಸ್ತೆಗಳಲ್ಲಿ ಗುರುವಾರ ಸಂಜೆಯಿಂದ ರಾತ್ರಿಯವರೆಗೂ ದಟ್ಟಣೆ ಇತ್ತು. ಕಸ್ತೂರ್ ಬಾ ರಸ್ತೆ, ರಾಜಭವನ ರಸ್ತೆ, ಕ್ವೀನ್ಸ್ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಸಂಚರಿಸಿದವು. ಜೊತೆಗೆ, ಶಾಂತಿನಗರ, ಲಾಲ್‌ಬಾಗ್ ರಸ್ತೆ, ವಿಲ್ಸನ್ ಗಾರ್ಡನ್, ನಿಮ್ಹಾನ್ಸ್ ಹಾಗೂ ಡೇರಿ ವೃತ್ತದಲ್ಲೂ ದಟ್ಟಣೆ ಇತ್ತು. ನಗರದ ಬಹುತೇಕ ಕಡೆ ಬುಧವಾರವೂ ದಟ್ಟಣೆ ಉಂಟಾಗಿತ್ತು.
ದಟ್ಟಣೆಯಲ್ಲಿ ಕುಳಿತು ಆಹಾರ ಬುಕ್ಕಿಂಗ್: ಹೊರವರ್ತುಲ ರಸ್ತೆಯಲ್ಲಿ ಉಂಟಾಗಿದ್ದ ದಟ್ಟಣೆಯಲ್ಲಿ ಸಿಲುಕಿದ್ದ ಕಾರು ಚಾಲಕರೊಬ್ಬರು ಡೊನ್ಜು ಮೂಲಕ ಆಹಾರ ಬುಕ್ಕಿಂಗ್ ಮಾಡಿದ್ದರು. ದಟ್ಟಣೆಯಲ್ಲಿ ಸಿಲುಕಿದ್ದ ಕಾರಿನ ಬಳಿ ಬಂದಿದ್ದ ಡೆಲಿವರಿ ಬಾಯ್, ಆಹಾರ ನೀಡಿ ಹೋದರು. ದಟ್ಟಣೆಯಲ್ಲಿ ಆಹಾರ ತಂದುಕೊಟ್ಟಿದ್ದ ಡೆಲಿವರಿ ಬಾಯ್ ವಿಡಿಯೊವನ್ನು ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ.
‘ಬೆಂಗಳೂರಿನ ಪರಿಸ್ಥಿತಿ ಇದು. ರಸ್ತೆಯಲ್ಲಿ ದಟ್ಟಣೆ ಉಂಟಾದರೆ, ಊಟ ತರಿಸಿ ತಿನ್ನುವಷ್ಟು ಸಮಯವಿರುತ್ತದೆ’ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.