ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ವರ್ತುಲ ರಸ್ತೆ: ದಟ್ಟಣೆ ಭಯದಲ್ಲಿ ಐ.ಟಿ ಕಂಪನಿಗಳು

ಟ್ಯಾಕ್ಸಿ, ಆಟೋರಿಕ್ಷಾ ಚಾಲಕರು, ಹೋಟೆಲ್ ಉದ್ಯಮಿಗಳಲ್ಲೂ ತಳಮಳ
Last Updated 31 ಆಗಸ್ಟ್ 2021, 22:52 IST
ಅಕ್ಷರ ಗಾತ್ರ

ಬೆಂಗಳೂರು: ಹೊರ ವರ್ತುಲ ರಸ್ತೆಯ (ಒಆರ್‌ಆರ್‌) ಸಂಚಾರ ದಟ್ಟಣೆ ಸೀಳಲು ಮೆಟ್ರೊ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗಿವೆ. ಈ ಕಾಮಗಾರಿ ಮುಗಿಯುವ ತನಕ ಸಂಚಾರ ದಟ್ಟಣೆಯ ನರಕ ನೆನಪಿಸುವ ಆತಂಕ ಹೊರ ವರ್ತುಲ ರಸ್ತೆಯ ಆಜುಬಾಜಿನ ಐ.ಟಿ ಕಂಪನಿಗಳು, ಅವುಗಳನ್ನು ನಂಬಿರುವ ಹೋಟೆಲ್ ಮತ್ತು ಟ್ಯಾಕ್ಸಿ ಉದ್ಯಮವನ್ನು ಕಾಡುತ್ತಿದೆ.

ಹೊರ ವರ್ತುಲ ರಸ್ತೆ ಎಂದ ಕೂಡಲೇ ಸಂಚಾರ ದಟ್ಟಣೆಯೇ ಕಣ್ಮುಂದೆ ಬರುತ್ತದೆ. ಐ.ಟಿ ಕಂಪನಿಗಳು ಈ ರಸ್ತೆಯ ಆಸುಪಾಸಿನಲ್ಲಿ ಕಟ್ಟಡಗಳನ್ನು ನೆಟ್ಟ ಮೇಲಂತೂ ದಟ್ಟಣೆ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿತು. ಅದರಲ್ಲೂ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರ ತನಕದ ಒಆರ್‌ಆರ್‌ನಲ್ಲಿ ದಟ್ಟಣೆ ಅಕ್ಷರಶಃ ರಕ್ಕಸನಂತೆ ಕಾಡುತ್ತಿದೆ.

ಈ ರಸ್ತೆಯಲ್ಲಿ ಈಗ ಆರಂಭವಾಗಿರುವ ಮೆಟ್ರೊ ಮಾರ್ಗದ ಕಾಮಗಾರಿಯೇ ಸಂಚಾರ ದಟ್ಟಣೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುವ ಸಾಧ್ಯತೆ ಇದೆ. ಆರು ಪಥದ ಒಆರ್‌ಆರ್‌ ರಸ್ತೆಯಲ್ಲಿ ಒಂದು ಕಡೆಗೆ ಸಾಗಲು ಮೂರು ಪಥಗಳಿವೆ. ಅದರಲ್ಲಿ ಎಡಭಾಗದ ಒಂದು ಪಥವನ್ನು ಬಸ್‌ಗಳ ಸಂಚಾರಕ್ಕಷ್ಟೇ ಕಾಯ್ದಿರಿಸಲಾಗಿದೆ. ರಸ್ತೆ ವಿಭಜಕದ ಪಕ್ಕದ ಒಂದು ಪಥಕ್ಕೆ ಮೆಟ್ರೊ ಮಾರ್ಗದ ಕಾಮಗಾರಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಉಳಿದ ಒಂದು ಪಥವಷ್ಟೇ ಖಾಸಗಿ ಬಸ್‌ಗಳು, ಕಾರುಗಳು, ಲಾರಿಗಳು, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದೆ.

ಮೆಟ್ರೊ ಮಾರ್ಗದ ಕಾಮಗಾರಿ ಮುಗಿಯಲು ಕನಿಷ್ಠ ನಾಲ್ಕೈದು ವರ್ಷ ಬೇಕಾಗಲಿದೆ. ಅಲ್ಲಿಯವರೆಗೂ ಖಾಸಗಿ ವಾಹನಗಳ ಸಂಚಾರಕ್ಕೆ ಒಂದೇ ಒಂದು ಪಥ ಮುಕ್ತವಾಗಲಿದೆ. ಸದ್ಯ ಐ.ಟಿ ಕಂಪನಿಗಳ ಉದ್ಯೋಗಿಗಳು ಬಹುತೇಕ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಪ್ರಕರಣ ಕಡಿಮೆಯಾದರೆ ಹಿಂದಿನಂತೆ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳಲಾಗುತ್ತದೆ. ಆಗ ಸಂಚಾರ ದಟ್ಟಣೆಯನ್ನು ನೆನಪಿಸಿಕೊಂಡರೆ ಭಯವಾಗುತ್ತದೆ ಎನ್ನುತ್ತಾರೆ ಟ್ಯಾಕ್ಸಿ ಚಾಲಕರು.

ಖಾಸಗಿ ವಾಹನಗಳ ಸಂಚಾರಕ್ಕೆ ಒಂದೇ ಒಂದು ಪಥ ತೆರೆದಿಟ್ಟರೆ ಒಂದು ಕಿಲೋ ಮೀಟರ್‌ ಸಾಗಬೇಕೆಂದರೆ ಕನಿಷ್ಠ 1 ಗಂಟೆಯೇ ಬೇಕಾಗಲಿದೆ. ಕೋವಿಡ್‌ ಬಳಿಕ ಬಾಡಿಗೆಯೇ ಸಿಗದ ಸ್ಥಿತಿಯಾಗಿದೆ. ಸಂಚಾರ ದಟ್ಟಣೆಯ ಭಯ ಕಾಡಿದರೆ ಜನರು ಟ್ಯಾಕ್ಸಿ ಮತ್ತು ಆಟೋರಿಕ್ಷಾಗಳನ್ನು ಹತ್ತುವುದೇ ಇಲ್ಲ. ನಮ್ಮ ಜೀವನ ಬೀದಿಗೆ ಬೀಳಲಿದೆ ಎಂದು ಟ್ಯಾಕ್ಸಿ ಚಾಲಕ ಕೃಷ್ಣಮೂರ್ತಿ ಹೇಳಿದರು.

‘ದುಬಾರಿ ಬಾಡಿಗೆ ನಿಗದಿ ಮಾಡಿಕೊಂಡು ಹೋಟೆಲ್ ಆರಂಭಿಸಿದ್ದೇವೆ. ಕೋವಿಡ್‌ ಬಳಿಕ ಜನರಿಲ್ಲದೆ ಕಷ್ಟದಲ್ಲಿ ಉದ್ಯಮ ನಡೆಸುತ್ತಿದ್ದೇವೆ. ಮೆಟ್ರೊ ಬ್ಯಾರಿಕೇಡ್‌ಗಳನ್ನು ನೋಡಿ ಭಯವಾಗುತ್ತಿದೆ ಎಂದು ಹೋಟೆಲ್ ನಡೆಸುತ್ತಿರುವ ಉದ್ಯಮಿಗಳು ಹೇಳುತ್ತಾರೆ. ಇದ್ದ ಜಮೀನು ನಮ್ಮ ಪೂರ್ವಿಕರೇ ಮಾರಾಟ ಮಾಡಿದ್ದಾರೆ. ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯೇ ಜೀವನಾಧಾರ. ಸದ್ಯ ವ್ಯಾಪಾರವೇ ಇಲ್ಲವಾಗಿದೆ. ಮೆಟ್ರೊ ಕಾಮಗಾರಿ ಮುಗಿಯುವ ತನಕ ನಮ್ಮ ಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ’ ಎಂದು ಬೆಳ್ಳಂದೂರಿನ ಹನುಮಂತಪ್ಪ ಆತಂಕ ವ್ಯಕ್ತಪಡಿಸಿದರು.

ಐ.ಟಿ ಕಂಪನಿ ಬಸ್‌ಗಳಿಗೂ ಆದ್ಯತೆ ನೀಡಬೇಕು–ಸರ್ಕಾರಕ್ಕೆ ಮನವಿ
12 ಸೀಟ್‌ಗಿಂತ ಹೆಚ್ಚು ಸಾಮರ್ಥ್ಯ ಇರುವ ಐ.ಟಿ ಕಂಪನಿ ಬಸ್‌ಗಳಿಗೂ ಬಸ್ ಆದ್ಯತಾ ಪಥದಲ್ಲಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಒಆರ್‌ಆರ್‌ಸಿಒ) ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಒಆರ್‌ಆರ್‌ ಆಸುಪಾಸಿನಲ್ಲಿ 300ಕ್ಕೂ ಹೆಚ್ಚು ಐ.ಟಿ ಕಂಪನಿಗಳಿದ್ದು, ಇಲ್ಲಿಗೆ ಬರುವ ಉದ್ಯೋಗಿಗಳಿಗೆ ಸಂಚಾರ ದಟ್ಟಣೆಯೇ ದೊಡ್ಡ ಸಮಸ್ಯೆಯಾಗಿದೆ. ಬೆಂಗಳೂರಿನ ಐ.ಟಿ ಕಂಪನಿಗಳ ವರಮಾನದಲ್ಲಿ ಶೇ 32ರಷ್ಟು ಈ ಕಂಪನಿಗಳಿಂದಲೇ ಬರುತ್ತಿದೆ. ಹೀಗಾಗಿ ಖಾಸಗಿ ಬಸ್‌ಗಳಿಗೂ ಈ ಪಥದಲ್ಲಿ ಸಂಚರಿಸಲು ಅವಕಾಶ ಬೇಕು ಎಂಬುದು ಅವರ ಮನವಿ.

‘ಬಸ್ ಪಥದಲ್ಲಿ ಕಂಪನಿ ಬಸ್‌ಗಳ ಸಂಚಾರಕ್ಕೆ ಬಿಎಂಟಿಸಿ ಒಪ್ಪಿಕೊಂಡಿದೆ. ಅವಕಾಶ ನೀಡುವುದಾಗಿ ಸರ್ಕಾರವೂ ಭರವಸೆ ನೀಡಿದೆ. ಮೆಟ್ರೊ ಮಾರ್ಗದ ಕಾಮಗಾರಿ ಆರಂಭವಾಗಿ ರಸ್ತೆ ಇನ್ನಷ್ಟು ಕಿರಿದಾಗಿದೆ. ಸರ್ಕಾರ ಕೂಡಲೇ ಒಪ್ಪಿಗೆ ನೀಡಬೇಕು. ಇಲ್ಲದಿದ್ದರೆ ಸಮಸ್ಯೆ ಉಲ್ಬಣಿಸಲಿದೆ’ ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದ ನವೀನ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT