ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಗರದಲ್ಲಿ ಭಾರಿ ವಾಹನಗಳ ‘ಅಕ್ರಮ’ ಸಂಚಾರ, ಜನರಿಗೆ ‘ಜೀವ ಭಯ’

ಅತೀ ವೇಗ, ಅಜಾಗರೂಕತೆ ಚಾಲನೆ | ನಿರ್ಬಂಧಿತ ಸಮಯದಲ್ಲೂ ಓಡಾಟ | ಹೆಚ್ಚುತ್ತಿರುವ ಅಪಘಾತಗಳು
Last Updated 19 ಮಾರ್ಚ್ 2022, 4:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ದಟ್ಟಣೆ ಹೆಚ್ಚಿರುವ ಹಾಗೂ ನಿರ್ಬಂಧಿತ ಸಮಯದಲ್ಲೂ ಭಾರಿ ವಾಹನಗಳು ‘ಅಕ್ರಮ’ವಾಗಿ ಸಂಚರಿಸುತ್ತಿದ್ದು, ಕೆಲ ಚಾಲಕರ ಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಯಿಂದ ಅಪಘಾತಗಳು ಹೆಚ್ಚುತ್ತಿವೆ. ರಸ್ತೆಯಲ್ಲಿ ಭಾರಿ ವಾಹನಗಳು ಅಡ್ಡಾದಿಡ್ಡಿ ಸಂಚರಿಸುವುದನ್ನು ನೋಡಿದರೆ, ಜೀವಭಯ ಕಾಡುತ್ತಿರುವುದಾಗಿ ಜನರು ದೂರುತ್ತಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರು, ಅತೀ ವೇಗವಾಗಿ ಬೆಳೆಯುತ್ತಿರುವ ನಗರ. ಟೆಂಡರ್‌ಶ್ಯೂರ್, ವೈಟ್‌ಟಾಪಿಂಗ್, ಸ್ಮಾರ್ಟ್‌ಸಿಟಿ
ಸೇರಿ ಹಲವು ಕಾಮಗಾರಿಗಳು ಚಾಲ್ತಿಯಲ್ಲಿವೆ. ಇದಕ್ಕೆ ಬೇಕಾದ ಜಲ್ಲಿ, ಸಿಮೆಂಟ್, ಕಾಂಕ್ರಿಟ್, ಕಬ್ಬಿಣ ಸೇರಿ ವಿವಿಧ ವಸ್ತುಗಳನ್ನು ಹೊತ್ತು ಭಾರಿ ವಾಹನಗಳು ನಗರದಲ್ಲಿ ಸಂಚರಿಸುತ್ತಿವೆ.

ನಗರದಲ್ಲಿ ಜನಸಂಖ್ಯೆಯೂ ಹೆಚ್ಚಿದ್ದು, ಅವರಿಗೆ ಅಗತ್ಯವಿರುವ ಹಾಲು, ಹಾಲಿನ ಉತ್ಪನ್ನಗಳು, ಅಡುಗೆ ಅನಿಲ ಸಿಲಿಂಡರ್, ಔಷಧಿ, ವೈದ್ಯಕೀಯ ಸಲಕರಣೆ, ವೈದ್ಯಕೀಯ ತಾಜ್ಯ, ಪೆಟ್ರೋಲ್–ಡೀಸೆಲ್ ತೈಲ ಸೇರಿ ಇತರೆ ವಸ್ತುಗಳನ್ನು ಭಾರಿ ವಾಹನಗಳು ಸಾಗಿಸುತ್ತಿವೆ.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ಭಾರಿ ವಾಹನಗಳು, ಗಡಿಭಾಗದ ಮೂಲಕ ನಗರದೊಳಗೆ ಪ್ರವೇಶಿಸುತ್ತಿವೆ. ಸಾರ್ವಜನಿಕರ ಓಡಾಟ ಹೆಚ್ಚಿರುವ ಸಮಯದಲ್ಲೇ ಭಾರಿ ವಾಹನಗಳು ಸಂಚರಿಸುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ. ಇದರಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿರುವುದಾಗಿ ಜನ ಆರೋಪಿಸುತ್ತಿದ್ದಾರೆ.

‘ಗಾತ್ರದಲ್ಲೂ ದೊಡ್ಡದಾಗಿರುವ ಭಾರಿ ವಾಹನಗಳ ಚಾಲಕರು, ಅತೀ ವೇಗದಿಂದ ಚಾಲನೆ ಮಾಡುತ್ತಾರೆ. ಅಕ್ಕ–ಪಕ್ಕದಲ್ಲಿ ಹೋಗುವ ಬೈಕ್‌ ಸವಾರರಿಗೆ ಡಿಕ್ಕಿ ಹೊಡೆಸಿ, ಅವರ ಮೈ ಮೇಲೆ ಚಕ್ರ ಹರಿಸುತ್ತಾರೆ. ಇಂಥ ಅಪಘಾತಗಳು ಮೇಲಿಂದ ಮೇಲೆ ಸಂಭವಿಸುತ್ತಿದ್ದು, ಭಾರಿ ವಾಹನಗಳ ಅಕ್ರಮ ಓಡಾಟಕ್ಕೆ ಮಾತ್ರ ಲಗಾಮು ಬಿದ್ದಿಲ್ಲ. ಹಲವೆಡೆ ವಾಹನಗಳು ಮೈ ಮೇಲೆ ಬರುತ್ತವೆ. ಜೀವಕ್ಕೆ ಹಾನಿಯಾಗುತ್ತದೆಂಬ ಕನಿಕರವೂ ಚಾಲಕರಿಗಿಲ್ಲ’ ಎಂದು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಸಂಬಂಧಿ ನಾಗರಾಜ್ ಹೇಳಿದರು.

ಪಾಲನೆಯಾಗದ ಆದೇಶ: ಮಲ್ಟಿ ಆಕ್ಸಲ್, ಆರ್ಟಿಕ್ಯುಲೇಟೆಡ್, ಟ್ರಕ್‌ ಹಾಗೂ ಲಾರಿಗಳು ಭಾರೀ ವಾಹನ ಪಟ್ಟಿಯಲ್ಲಿವೆ. ನಾಲ್ಕು ಚಕ್ರ ಹಾಗೂ ಮೂರು ಚಕ್ರ ಗೂಡ್ಸ್ ವಾಹನಗಳು, ಲಘು ಸರಕು ವಾಹನಗಳಾಗಿವೆ. ಇಂಥ ವಾಹನಗಳಿಂದ ಅಪಘಾತ ಹೆಚ್ಚಳವಾಗುತ್ತಿರು
ವುದನ್ನು ಗಮನಿಸಿದ್ದ ಹೈಕೋರ್ಟ್, ನಿಯಮ ರೂಪಿಸಲು ಪೊಲೀಸರಿಗೆ ಸೂಚನೆ ನೀಡಿತ್ತು. 2014ರಲ್ಲಿ
ಪೊಲೀಸ್ ಕಮಿಷನರ್ ಆಗಿದ್ದ ಎಂ.ಎನ್. ರೆಡ್ಡಿ, ನಿಯಮಾವಳಿ ರೂಪಿಸಿಭಾರಿ ವಾಹನಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ನಿಯಮಾವಳಿಗೆ 2015ರಲ್ಲಿ ಕೆಲ ತಿದ್ದುಪಡಿ ತಂದು ಹೊಸ ಆದೇಶ ಹೊರಡಿಸಲಾಗಿದೆ.

ಮೂರು ಟನ್‌ಗಿಂತ ಹೆಚ್ಚು ಭಾರ ಹೊರುವ ವಾಹನಗಳ ಸಂಚಾರಕ್ಕೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ಹಾಗೂ ರಾತ್ರಿ 10 ಗಂಟೆಯಿಂದ ನಸುಕಿನ 7 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದ ಅವಧಿಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧವಿದೆ. ಜೊತೆಗೆ, ವಿಧಾನಸೌಧ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಭಾರಿ ವಾಹನಗಳ ಸಂಚಾರವನ್ನು ದಿನದ 24
ಗಂಟೆಯೂ ನಿಷೇಧಿಸಲಾಗಿದೆ. ಈ ಅಂಶ ಆದೇಶದಲ್ಲಿದ್ದು, ಇದರ ಪಾಲನೆ ಆಗುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ.ನೀರು, ಕಸ, ಪೊಲೀಸ್, ಮಿಲಿಟರಿ ವಾಹನಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಗಡಿಭಾಗದ ಮೂಲಕ ಪ್ರವೇಶ: ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ವಾಹನಗಳು, ಗಡಿಭಾಗದ ಪ್ರಮುಖ ರಸ್ತೆಗಳ ಮೂಲಕ ನಗರದೊಳಗೆ ಪ್ರವೇಶಿಸುತ್ತಿವೆ. ನಿರ್ಬಂಧಿತ ಸಮಯದಲ್ಲೂ ವಾಹನಗಳು ಒಳಪ್ರವೇಶಿಸುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂಬ ದೂರುಗಳಿವೆ.

‘ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆ, ಮಾಗಡಿ ರಸ್ತೆ, ಸರ್ಜಾಪುರ ರಸ್ತೆ, ಹಳೇ ಮದ್ರಾಸ್ ರಸ್ತೆ ಹಾಗೂ ಇತರೆ ರಸ್ತೆಗಳ ಮೂಲಕ ಭಾರಿ ವಾಹನಗಳು ನಗರದೊಳಗೆ ಬರುತ್ತಿವೆ. 2015ರ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇ
ಕಾದ ಸಂಚಾರ ಪೊಲೀಸರು, ಕಾಟಾಚಾರಕ್ಕೆ ಒಂದೆರೆಡು ವಾಹನಗಳಿಗೆ ತಲಾ ₹ 500 ದಂಡ ವಿಧಿಸುತ್ತಿದ್ದಾರೆ. ಬಹು
ತೇಕ ವಾಹನಗಳನ್ನು ಒಳಗೆ ಬಿಟ್ಟು, ಅಪಘಾತ ಸಂಭವಿಸಲು ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ’ ಎಂದು ಬೈಕ್‌ ಸವಾರ ಸುಧೀಂದ್ರ ಎಂ.ಕೆ. ಆರೋಪಿಸಿದ್ದಾರೆ.

‘ದಂಡ ಪಾವತಿಸುವ ಚಾಲಕರು, ರಶೀದಿ ಬಳಸಿಯೇ ನಗರದೆಲ್ಲೆಡೆ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ವಾಹನ ತಡೆದು ನಿಲ್ಲಿಸುವ ಗೋಜಿಗೆ ಪೊಲೀಸರು ಹೋಗುತ್ತಿಲ್ಲ’ ಎಂದು ಬೈಕ್ ಸವಾರ ವೆಂಕಟೇಶ್‌ ದೂರಿದ್ದಾರೆ.

‘ದುಡ್ಡು ವಸೂಲಿಗಾಗಿ ಎಲ್ಲೆಂದರಲ್ಲಿ ತಡೆ’

‘ಸರಕು ಸಾಗಣೆ ವಾಹನಗಳು ಕಡಿಮೆ ವೇಗದಲ್ಲಿ ಸಂಚರಿಸುತ್ತವೆ. ನಗರಕ್ಕೆ ಸಂಪರ್ಕ ಕಲ್ಪಿಸುವ 110 ರಸ್ತೆಗಳಲ್ಲಿ ಪೊಲೀಸರು ಎಲ್ಲೆಂದರಲ್ಲಿ ನಿಂತು, ದುಡ್ಡು ವಸೂಲಿಗಾಗಿ ವಾಹನಗಳನ್ನು ನಿಲ್ಲಿಸುತ್ತಾರೆ. ನಿಗದಿತ ಸಮಯದಲ್ಲಿ ನಗರದೊಳಗೆ ಸಂಚರಿಸಬೇಕು ಎಂದುಕೊಂಡರೂ ಅದು ಸಾಧ್ಯವಾಗುವುದಿಲ್ಲ’ ಎಂದು ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಹೇಳಿದರು.

‘ಸರಕು ಸಾಗಣೆ ಸಂಚಾರಕ್ಕೆ ಪೊಲೀಸರೇ ಸಮಯ ನಿಗದಿ ಮಾಡಿದ್ದಾರೆ. ಈ ಬಗ್ಗೆ ನಮ್ಮೂಂದಿಗೆ ಯಾವುದೇ ಚರ್ಚೆ ಮಾಡಿಲ್ಲ. ಎಲ್ಲೆಂದರಲ್ಲಿ ವಾಹನಗಳನ್ನು ತಡೆಯುವ ಪೊಲೀಸರ ಭಯದಲ್ಲೇ ಕೆಲವೆಡೆ ಅಪಘಾತಗಳು ಸಂಭವಿಸಿವೆ. ದಟ್ಟಣೆ ಮಧ್ಯೆ ವಾಹನ ನಿಲ್ಲಿಸಿದಾಗಲೂ ಅಕ್ಕ–ಪಕ್ಕದ ವಾಹನಗಳಿಗೆ ಹಾನಿಯಾಗುತ್ತಿದೆ’ ಎಂದೂ ತಿಳಿಸಿದರು.

‘₹ 10.90 ಲಕ್ಷ ದಂಡ’

‘ನಿಯಮ ಉಲ್ಲಂಘಿಸಿ ಸಂಚರಿಸಿದ್ದ ಭಾರಿ ವಾಹನಗಳ ವಿರುದ್ಧ 2,127 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ₹ 10.90 ಲಕ್ಷ ದಂಡ ವಸೂಲಿ (2022ರ ಜನವರಿಯಿಂದ ಮಾ. 18ರವರೆಗೆ) ಮಾಡಲಾಗಿದೆ' ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘2015ರ ಆದೇಶದಂತೆ ಕ್ರಮ’

‘ಜನರ ಜೀವ ಅಮೂಲ್ಯವಾದದ್ದು. ಅದರ ರಕ್ಷಣೆಗೆ ಸಂಚಾರ ಪೊಲೀಸರು ನಿತ್ಯವೂ ಕೆಲಸ ಮಾಡುತ್ತಿದ್ದಾರೆ. ಭಾರಿ ವಾಹನಗಳ ಸಂಚಾರದ ಮೇಲೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಲಾಗಿದ್ದು, 2015ರ ಆದೇಶದನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಸಂಚಾರ ವಿಭಾಗದ (ಪೂರ್ವ) ಡಿಸಿಪಿ ಶಾಂತರಾಜು ಹೇಳಿದರು.

‘ನಗರದೊಳಗೆ ಪ್ರವೇಶಿಸುವ ಭಾರಿ ವಾಹನಗಳ ಮೇಲೆ ನಿಗಾ ಇರಿಸಲಾಗಿದೆ. ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಆಯಾ ಠಾಣೆ ಸಿಬ್ಬಂದಿ ದಂಡ ವಿಧಿಸಿ, ಎಚ್ಚರಿಕೆ ನೀಡುತ್ತಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT