ಹೆಬ್ಬಾಳ ಮೇಲ್ಸೇತುವೆ ಎಂಬ ಚಕ್ರವ್ಯೂಹದೊಳಗೆ...

7

ಹೆಬ್ಬಾಳ ಮೇಲ್ಸೇತುವೆ ಎಂಬ ಚಕ್ರವ್ಯೂಹದೊಳಗೆ...

Published:
Updated:
ನಗರದ ಹೆಬ್ಬಾಳ ಮೇಲ್ಸೆತುವೆಯ ಮೇಲೆ ಎರ್‌ಪೋರ್ಟ್ ಕಡೆಯಿಂದ ಬೆಂಗಳೂರು ನಗರಕ್ಕೆ ಹೋಗುವ ವಾಹನಗಳ ದಟ್ಟಣೆ ಹಾಗೂ ನಗರದಿಂದ ಎರ್‌ಪೋರ್ಟ್ ಕಡೆಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ವಿರಳವಾಗಿರುವುದು -ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್

ಬೆಂಗಳೂರು: ಬೆಂಕಿಪೊಟ್ಟಣದೊಳಗೆ ಒತ್ತೊತ್ತಾಗಿ ಜೋಡಿಸಿಟ್ಟ ಕಡ್ಡಿಗಳ ರೀತಿಯಲ್ಲಿ ಸಾಲುಗಟ್ಟಿದ ವಾಹನಗಳು ಆಮೆಗಿಂತಲೂ ನಿಧಾನ ವಾಗಿ ಸಾಗುತ್ತಿದ್ದವು. ಈ ಕೂಪದೊಳಗೆ ಹೊಕ್ಕ ಆಂಬುಲೆನ್ಸ್‌ ಅರಚುತ್ತಿದ್ದರೂ ಜಾಗ ಮಾಡಿಕೊಡಲು ಕಿಂಚಿತ್ತು ಸ್ಥಳಾವಕಾಶವಿರಲಿಲ್ಲ... ಇದು ಹೆಬ್ಬಾಳ ಮೇಲ್ಸೇತುವೆಯಲ್ಲಿ ಮಂಗಳವಾರ ಬೆಳಿಗ್ಗೆ ಕಂಡ ದೃಶ್ಯ.

ವಿಮಾನ ನಿಲ್ದಾಣ ರಸ್ತೆಯಲ್ಲಿ ಅತಿ ಹೆಚ್ಚು ದಟ್ಟಣೆಯ ಪ್ರದೇಶ ಹಾಗೂ ರಾಜಧಾನಿಯಲ್ಲಿ ಹೆಚ್ಚು ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಹೆಬ್ಬಾಳ ಮೇಲ್ಸೇತುವೆಯೂ ಒಂದು. ಮೇಖ್ರಿ ವೃತ್ತ ಕಡೆಯಿಂದ ವಿಮಾನನಿಲ್ದಾಣ ಕಡೆಗೆ ಹೆಬ್ಬಾಳ ಮೇಲ್ಸೇತುವೆಯಲ್ಲಿ ದ್ವಿ ಪಥ ರಸ್ತೆ ಹಾಗೂ ಅದರ ಪಕ್ಕದಲ್ಲೇ ಇರುವ ಇನ್ನೊಂದು ಏಕಪಥ ರಸ್ತೆ ಮೂಲಕ ಪ್ರಯಾಣಿಸಬಹುದು.ವಿಮಾನ ನಿಲ್ದಾಣ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವುದಕ್ಕೆ ದ್ವಿಪಥ ರಸ್ತೆ ಮಾತ್ರ ಇದೆ. ಕೆ.ಆರ್‌.ಪುರ ಹಾಗೂ ತುಮಕೂರು ಕಡೆಯಿಂದ ಬರುವ ರಸ್ತೆಯೂ ಇದಕ್ಕೆ ಸೇರಿಕೊಳ್ಳುತ್ತದೆ.

ನಗರದಿಂದ ವಿಮಾನ ನಿಲ್ದಾಣದ ಕಡೆಗೆ ಹೋಗುವ ವಾಹನಗಳ ಸಂಖ್ಯೆಗಿಂತ ವಿಮಾನ ನಿಲ್ದಾಣ ಕಡೆಯಿಂದ ನಗರದ ಕಡೆಗೆ ಪ್ರಯಾಣಿಸುವ ವಾಹನಗಳ ಸಂಖ್ಯೆಯೇ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎರಡು ವರ್ಷಗಳ ಹಿಂದೆ ಇದೇ ಮೇಲ್ಸೇತುವೆಯಲ್ಲಿ ಕೆ.ಆರ್‌.ಪುರ, ತುಮಕೂರು ರಸ್ತೆ ಕಡೆಗೆ ಹೋಗಲು ಪ್ರತ್ಯೇಕ ಪಥವನ್ನು ನಿರ್ಮಿಸಿದ್ದರಿಂದ ಈ ಕಡೆಯಲ್ಲಿ ದಟ್ಟಣೆ ತಗ್ಗಿದೆ. ಲಕ್ಷಗಟ್ಟಲೆ ವಾಹನಗಳು ಈ ಮೇಲ್ಸೇತುವೆಯನ್ನು ಬಳಸುವುದರಿಂದ ಹೆಬ್ಬಾಳ ಮೇಲ್ಸೇತುವೆಯಲ್ಲಿ ಪದೇ ಪದೇ ವಾಹನ ದಟ್ಟಣೆ ಉಂಟಾಗುತ್ತದೆ.

10 ನಿಮಿಷದ ಹಾದಿಗೆ ಅರ್ಧತಾಸು ಒದ್ದಾಟ: ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಅತಿ ಉದ್ದದ 5.35 ಕಿ.ಮೀ ಮೇಲ್ಸೇತುವೆಯಲ್ಲಿ ಸಂಚರಿಸಿ ಕೆಳಗಿಳಿಯಲು ಕೇವಲ 20 ನಿಮಿಷವಾಗುತ್ತದೆ. ಕೊಡಿಗೆಹಳ್ಳಿ ಸಿಗ್ನಲ್‌ ಬಳಿಯಿಂದ ಹೆಬ್ಬಾಳ ಮೇಲ್ಸೇತುವೆ ಪ್ರಾರಂಭದವರೆಗೆ ಸುಮಾರು 800 ಮೀಟರ್‌ಗಳಿದ್ದು, ಅದನ್ನು ಕ್ರಮಿಸಲು 5 ನಿಮಿಷವಷ್ಟೇ ಆಗುತ್ತದೆ. ಅದೇ 700 ಮೀಟರ್‌ ಉದ್ದವಿರುವ ಹೆಬ್ಬಾಳ ಮೇಲ್ಸೇತುವೆ ಪೂರ್ಣಗೊಳಿಸಲು ಕನಿಷ್ಠ 35 ನಿಮಿಷಗಳು ಬೇಕು. ಅದೇ ಮೇಲ್ಸೇತುವೆಯಲ್ಲಿ ಹೆಬ್ಬಾಳ ಬಸ್‌ ನಿಲ್ದಾಣದಿಂದ ವಿಮಾನ ನಿಲ್ದಾಣದ ಕಡೆ ಹೋಗಲು ಕೇವಲ 10 ನಿಮಿಷ ಸಾಕು.

‘ಈ ಭಾಗದಲ್ಲಿ ಅನೇಕ ಕಂಪನಿಗಳು ಹಾಗೂ ಶಾಲಾ, ಕಾಲೇಜುಗಳು ಇರುವುದರಿಂದ ಬೆಳಿಗ್ಗೆ 8 ರಿಂದ 11.30ರವರೆಗೆ ಹಾಗೂ ಸಂಜೆ 4 ರಿಂದ 9ರವರೆಗೂ ದಟ್ಟಣೆ ಹೆಚ್ಚಿರುತ್ತದೆ. ಇದಲ್ಲದೆ ‌ಶುಕ್ರವಾರದಿಂದ ಸೋಮವಾರದವರೆಗೆ ವಾಹನಗಳ ಸಂಚಾರ ದುಪ್ಪಟ್ಟಾಗುತ್ತದೆ. ಆಗ ದಟ್ಟಣೆಯ ವ್ಯಾಪ್ತಿ 2–3 ಕಿ.ಮೀಗಳ ವರೆಗೆ ವಿಸ್ತಾರಗೊಂಡಿರುತ್ತದೆ’ ಎಂದು ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಹೆಬ್ಬಾಳ ಮೇಲ್ಸೇತುವೆಯನ್ನು 2003ರಲ್ಲಿ ನಿರ್ಮಿಸಲಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎಚ್‌ಎಎಲ್‌ನಿಂದ ದೇವನಹಳ್ಳಿಗೆ ಸ್ಥಳಾಂತರಗೊಂಡ ನಂತರ ನಗರದ ಸಂಚಾರ ಮಾದರಿಯೇ ಬದಲಾಯಿತು. ಈ ಮಾರ್ಗದಲ್ಲಿ ಹೆಚ್ಚು ಅಭಿವೃದ್ಧಿಯಾಗುತ್ತಿದ್ದಂತೆ ಇಲ್ಲಿ ಓಡಾಡುವ ವಾಹನಗಳ ಸಂಖ್ಯೆಯೂ ಹೆಚ್ಚಿತು. ಆಗ ಶುರುವಾದ ಈ ದಟ್ಟಣೆಯ ಸಮಸ್ಯೆ ಈಗ ಪೆಡಂಭೂತವಾಗಿದೆ. 

2016ರಲ್ಲಿಯೇ ಟೆಂಡರ್‌: ಯಲಹಂಕದ ಕಡೆಯಿಂದ ನಗರಕ್ಕೆ ಬರುವ ವಾಹನಗಳ ಸುಗಮ ಸಂಚಾರಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೇಲ್ಸೇತುವೆಗೆ ಹೆಚ್ಚುವರಿಯಾಗಿ ಮೂರು ಪಥಗಳನ್ನು ಅಳವಡಿಸಿ ವಿಸ್ತರಿಸಲು ಯೋಜಿಸಿದೆ. 

ಪಥ ವಿಸ್ತರಣೆಗೆ ಬಿಡಿಎ 2016ರಲ್ಲಿಯೇ ಟೆಂಡರ್‌ ಅಂತಿಮ ಗೊಂಡು, ಕಾರ್ಯಾದೇಶವನ್ನೂ ನೀಡ ಲಾಗಿತ್ತು. ಆದರೆ, ಅದೇ ಸಮಯದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಚರ್ಚೆ ಪ್ರಾರಂಭವಾಗಿದ್ದರಿಂದ ಇದರ ಕೆಲಸ ಸ್ಥಗಿತಗೊಂಡಿತ್ತು.

‘2017ರ ಅಕ್ಟೋಬರ್‌ನಲ್ಲಿ ಕೆಲಸ ಪ್ರಾರಂಭವಾಗಿದ್ದು, ಈಗ ಸ್ತಂಭಗಳ ನಿರ್ಮಾಣಕ್ಕೆ ಅಡಿಪಾಯ ಹಾಕುವ ಕೆಲಸ ನಡೆಯುತ್ತಿದೆ. 2018ರಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಆದರೆ, ಕೆಲಸ ಪ್ರಾರಂಭಿಸಿದ್ದೇ ನಿಧಾನವಾಗಿದ್ದರಿಂದ ಎರಡು ವರ್ಷ ಅವಧಿ ವಿಸ್ತರಣೆಗೆ ಮನವಿ ಮಾಡಲಾಗಿದೆ’ ಎಂದು ಬಿಡಿಎ ಎಇಇ ವೆಂಕಟೇಶ್‌ ತಿಳಿಸಿದರು.

ಜತೆಗೆ ತುಮಕೂರು ರಸ್ತೆ ಕಡೆಯಿಂದ ಕೆ.ಆರ್.ಪುರ ಕಡೆ ಚಲಿಸುವ ವಾಹನ ಸವಾರರ ಅನುಕೂಲಕ್ಕಾಗಿ ಹೊರವರ್ತುಲ ರಸ್ತೆಯಲ್ಲಿ ಏಕಮುಖ ಸಂಚಾರದ 320 ಮೀಟರ್‌ ಉದ್ದದ ಕೆಳಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಕೆಳಸೇತುವೆ ಹಾಗೂ ಮೇಲ್ಸೇತುವೆ ಎರಡೂ ಸೇರಿ ಒಟ್ಟು ₹87 ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ.

 

ಬೆಳಿಗ್ಗೆಯಿಂದ ಸಂಜೆವರೆಗೂ ದಟ್ಟಣೆಯೇ

ಹೆಬ್ಬಾಳ ಜಂಕ್ಷನ್‌ನಲ್ಲಿನ ಮೇಲ್ಸೇತುವೆಯಲ್ಲಿ ಮಧ್ಯಾಹ್ನದ ಕೆಲ ಗಂಟೆಗಳು ಹೊರತುಪಡಿಸಿ ಬೆಳಗ್ಗಿನಿಂದ ರಾತ್ರಿಯವರೆಗೂ ದಟ್ಟಣೆ ಇರುತ್ತದೆ. ನಿತ್ಯ ಸರಾಸರಿ 4 ಲಕ್ಷ ವಾಹನಗಳು ಸಂಚರಿಸುತ್ತವೆ. ಈ ಜಂಕ್ಷನ್‌ ಬಳಸುವ ವಾಹನಗಳ ಪೈಕಿ ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಪ್ರಮಾಣ ಶೇ 85ರಷ್ಟಿದೆ. ನಿತ್ಯ ಸರಾಸರಿ 1.07 ಲಕ್ಷ ದ್ವಿಚಕ್ರ ವಾಹನಗಳು ಹಾಗೂ 1.20 ಲಕ್ಷ ಕಾರುಗಳು ಈ ಜಂಕ್ಷನ್‌ ಮೂಲಕ ಹಾದುಹೋಗುತ್ತವೆ ಎಂದು ಸಂಚಾರ ಪೋಲಿಸರು ಮಾಹಿತಿ ನೀಡಿದರು.

ಇಲ್ಲಿ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆ ವೇಳೆಗೆ ವಾಹನ ದಟ್ಟಣೆ ಹೆಚ್ಚಿರುತ್ತದೆ. ಮಧ್ಯಾಹ್ನ 1ರಿಂದ 2 ಗಂಟೆ ನಡುವೆ ಹಾಗೂ ಸಂಜೆ 6.30ರ ನಂತರ ವಾಹನ ದಟ್ಟಣೆ ಮತ್ತೆ ಹೆಚ್ಚಳವಾಗುತ್ತದೆ.

****

ಸಾಕಾಗಿದೆ ಈ ದಟ್ಟಣೆಯ ಒದ್ದಾಟ

ಹೆಬ್ಬಾಳ ಮೇಲ್ಸೇತುವೆಯ ನಂತರವೇ ನಮ್ಮ ಕಚೇರಿ ಇದೆ. ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸಬೇಕು. ಕೆಲಸ ಮುಗಿಸಿ ಮನೆಗೆ ಸೇರುವಷ್ಟರಲ್ಲಿ ಹೈರಾಣಾಗಿರುತ್ತೇನೆ. ಪಥ ವಿಸ್ತರಣೆ ಶೀಘ್ರವಾಗಿ ನಡೆಯಬೇಕು

ದರ್ಶನ್‌, ಉದ್ಯೋಗಿ

ಜಕ್ಕೂರು, ಯಲಹಂಕ, ಸಹಕಾರ ನಗರ ಹಾಗೂ ದೇವನಹಳ್ಳಿಯ ನಿವಾಸಿಗಳು ನಗರಕ್ಕೆ ಸಂಚರಿಸಬೇಕೆಂದರೆ ಈ ಮಾರ್ಗದ ಮೂಲಕ ಹೋಗಬೇಕು. ನಾನು ಸಹಕಾರ ನಗರದಲ್ಲಿ ವಾಸಿಸುತ್ತೇನೆ. ಸದಾ ದಟ್ಟಣೆ ಇರುವುದರಿಂದ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ ಕಡೆಗಳಿಗೆ ಹೋಗುವುದೆಂದರೆ ಹಿಂಸೆ ಎನಿಸುತ್ತದೆ.

–ದೀಪಾ, ಉದ್ಯೋಗಿ

ಕೆಲಸಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವುದು ಅನಿವಾರ್ಯ. ಆದಷ್ಟು ಶೀಘ್ರದಲ್ಲಿ ಪಥ ವಿಸ್ತರಣೆ ಮಾಡಿದರೆ, ಅನೇಕ ಉದ್ಯೋಗಿಗಳಿಗೆ ಹಾಗೂ ಇಲ್ಲಿನ ಸುತ್ತಮುತ್ತ ನಿವಾಸಿಗಳಿಗೆ ಅನುಕೂಲವಾಗುತ್ತದೆ

–ಪವನ್‌, ಉದ್ಯೋಗಿ

*****

ಕೇವಲ ಪಥ ವಿಸ್ತರಣೆ ಸಂಚಾರ ದಟ್ಟಣೆಗೆ ಪರಿಹಾರವಾಗುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಿಡಿಎ ಈ ಬಗ್ಗೆ ಜನರ ಮತ್ತು ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿ, ಸಮರ್ಪಕವಾದ ಮಾರ್ಗ ರೂಪಿಸಬೇಕು
–ವಿ.ರವಿಚಂದರ್‌, ನಗರ ಯೋಜನಾ ತಜ್ಞ

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !