ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ಬಾಳ: ರಸ್ತೆ ವಿಸ್ತರಣೆಗೆ ಜಾಗಬಿಡಲು ಒಪ್ಪಿಗೆ

ಕಾಫಿಬೋರ್ಡ್‌ ಲೇಔಟ್‌ನ ರಾಮ ಮಂದಿರ ಉದ್ಯಾನದಲ್ಲಿ ಸಭೆ
Published : 11 ಸೆಪ್ಟೆಂಬರ್ 2024, 16:02 IST
Last Updated : 11 ಸೆಪ್ಟೆಂಬರ್ 2024, 16:02 IST
ಫಾಲೋ ಮಾಡಿ
Comments

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಹೆಬ್ಬಾಳ ಕೆಂಪಾಪುರ, ಕಾಫಿಬೋರ್ಡ್‌ ಲೇಔಟ್‌ ಜೈನ್‌ ಹೆರಿಟೇಜ್‌ ಶಾಲೆಯ ಪಕ್ಕದಲ್ಲಿ ಹಲವು ವರ್ಷಗಳಿಂದ ಬಂದ್‌ ಆಗಿರುವ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿ, ಸಂಚಾರದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಸ್ಥಳೀಯ ನಿವಾಸಿಗಳು ಕಾಫಿಬೋರ್ಡ್‌ ಲೇಔಟ್‌ನ ರಾಮ ಮಂದಿರ ಉದ್ಯಾನದಲ್ಲಿ ಸಭೆ ನಡೆಸಿದರು.

ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಮತ್ತು ನಿವಾಸಿಗಳು ಹಾಗೂ ಸ್ಥಳೀಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಕಾಫಿ ಬೋರ್ಡ್‌ ಬಡಾವಣೆ ಮತ್ತು ಮರಿಯಣ್ಣಪಾಳ್ಯದಿಂದ ಕೆಂಪಾಪುರದ ವೀರಾಂಜನೇಯಸ್ವಾಮಿ ದೇವಸ್ಥಾನದ ಮೂಲಕ ಹೆಬ್ಬಾಳ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ಪಾಲಿಕೆಯ ಮಾಜಿ ಸದಸ್ಯರಾದ ಜಯಪ್ಪರೆಡ್ಡಿ ಮತ್ತು ಮಾರಿಮುತ್ತು ಅವರ ಆಸ್ತಿಗಳಿವೆ. ರಸ್ತೆ ವಿಸ್ತರಣೆಗಾಗಿ ತಮ್ಮ ಆಸ್ತಿಯಲ್ಲಿ ಸ್ವಲ್ಪಜಾಗ ಬಿಟ್ಟು ಕೊಡುವಂತೆ ಈ ಹಿಂದೆ ಸ್ಥಳೀಯ ನಿವಾಸಿಗಳು ಇಬ್ಬರಿಗೂ ಮನವಿ ಮಾಡಿದ್ದರು. ಈಗಲೂ ಸಭೆಯಲ್ಲಿ ಮತ್ತೊಮ್ಮೆ ಮನವಿ ಮಾಡಲಾಯಿತು.

ಸಭೆಯ ಮನವಿಗೆ ಸ್ಪಂದಿಸಿದ ಜಯಪ್ಪರೆಡ್ಡಿ ಅವರು, ಸಾರ್ವಜನಿಕರಿಗೆ ಒಳ್ಳೆಯದಾಗುವುದಾದರೆ ರಸ್ತೆ ವಿಸ್ತರಣೆಗಾಗಿ ತಮ್ಮ ಜಾಗದಲ್ಲಿ ಐದು ಅಡಿ ಬಿಟ್ಟುಕೊಡುವುದಾಗಿ ಘೋಷಿಸಿದರು.

ಈ ವೇಳೆ ಮಾತನಾಡಿದ ಬ್ಯಾಟರಾಯನಪುರ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ರೇಣುಕಾ ಹೆಗ್ಗಡೆ, ರಸ್ತೆ ವಿಸ್ತರಣೆಗಾಗಿ ಜಯಪ್ಪ ಅವರು ಜಾಗ ಬಿಡಲು ಒಪ್ಪಿರುವುದಕ್ಕೆ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಅದೇ ರೀತಿ ಮಾರಿಮುತ್ತು ಅವರೂ ಸಹ ರಸ್ತೆ ವಿಸ್ತರಣೆಗಾಗಿ ತಮ್ಮ ಆಸ್ತಿಯಲ್ಲಿ ಜಾಗ ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಸಭೆಗೆ ತಿಳಿಸಿದರು.

ಇಬ್ಬರೂ ಒಪ್ಪಿರುವುದರಿಂದ ಈ ಭಾಗದಲ್ಲಿ ಎರಡು ದಶಕಗಳಿಂದ ಉಂಟಾಗಿರುವ ರಸ್ತೆ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಅವರು ಹೇಳಿದರು.

ಸ್ಥಳೀಯ ಒಕ್ಕಲಿಗರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಎಸ್‌.ಜಯಪ್ರಕಾಶ್‌ ಮಾತನಾಡಿ, ಹೆಬ್ಬಾಳ ಕೆಂಪಾಪುರ ಭಾಗದಲ್ಲಿ ಸರ್ಕಾರಿ ಶಾಲೆಗಳು ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿದ್ದು, ಇಲ್ಲಿನ ಬಹುತೇಕ ರಸ್ತೆಗಳು ಕಿರಿದಾಗಿವೆ. ಇದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ‘ಪೀಕ್‌ ಅವರ್‌‘ ನಲ್ಲಿ ಸಂಚಾರದಟ್ಟಣೆಯಲ್ಲಿ ಸಿಲುಕಿ ನಿತ್ಯ ತೊಂದರೆ ಅನುಭವಿಸ ಬೇಕಾಗಿದೆ. ಇಬ್ಬರೂ ರಸ್ತೆಗೆ ಜಾಗ ಬಿಟ್ಟುಕೊಡಲು ಒಪ್ಪಿದ್ದು, ರಸ್ತೆ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದರು.

ನಗರಸಭೆ ಮಾಜಿ ಸದಸ್ಯ ಕೆ.ಎನ್‌.ಪರಮೇಶ್‌, ಬ್ಯಾಟರಾಯನಪುರ ಕ್ಷೇತ್ರದ ಜೆಡಿ(ಎಸ್‌)ನ ಹಿಂದುಳಿದವರ್ಗಗಳ ವಿಭಾಗದ ಅಧ್ಯಕ್ಷ ಕೆ.ಎಂ.ವೇಣುಗೋಪಾಲ್‌, ಕಾಂಗ್ರೆಸ್‌ ಮುಖಂಡರಾದ ಎನ್‌.ಎನ್‌.ಶ್ರೀನಿವಾಸಯ್ಯ, ರಮೇಶ್‌, ಕಾರ್ಣಿಕ್‌ ರಾಜ್‌, ಸ್ಥಳೀಯ ಮುಖಂಡರಾದ ಎ.ಎಸ್‌.ಗೋವಿಂದೇಗೌಡ, ಶ್ರೀಕಾಂತ್‌, ಗೋಪಿನಾಥ್‌, ಶಿವಕುಮಾರ್‌, ಟಿ.ಸಾಯಿನಾಥ್‌, ಚನ್ನಬಸವ ಆರಾಧ್ಯ, ಬಸವರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT