ವರ್ಷವಾದರೂ ಮುಖ್ಯ ಶಿಕ್ಷಕರಿಲ್ಲ

ಶುಕ್ರವಾರ, ಜೂಲೈ 19, 2019
24 °C
ಕಾಕೋಳು ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ

ವರ್ಷವಾದರೂ ಮುಖ್ಯ ಶಿಕ್ಷಕರಿಲ್ಲ

Published:
Updated:
Prajavani

ಹೆಸರಘಟ್ಟ: ಕಾಕೋಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವರ್ಷದಿಂದ ಮುಖ್ಯ ಶಿಕ್ಷಕರೇ ಇಲ್ಲ ಎಂದು ಪೋಷಕರು ದೂರಿದ್ದಾರೆ.

‘ಶಾಲೆಯಲ್ಲಿ ಒಂದರಿಂದ ಏಳನೇಯ ತರಗತಿಯ ತನಕ 147 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಮುಖ್ಯ ಶಿಕ್ಷಕರು ಸೇರಿ ಐದು ಜನ ಶಿಕ್ಷಕರು ಇಲ್ಲಿರಬೇಕು. ಆದರೆ, ಒಂದು ವರ್ಷದಿಂದ ಮುಖ್ಯ ಶಿಕ್ಷಕರನ್ನು ಇಲ್ಲಿ ನೇಮಿಸಿಲ್ಲ. ನಾಲ್ಕು ಶಿಕ್ಷಕರೇ ಎಲ್ಲ ತರಗತಿಗಳನ್ನು ನಡೆಸುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ವಿಜೇತ್ ಹೇಳಿದರು.

‘ಇಲಾಖೆಯು ಸಭೆ ಕರೆದರೆ ಒಬ್ಬ ಶಿಕ್ಷಕರು ಸಭೆಗೆ ಹೋಗುತ್ತಾರೆ. ಆಗ ಮೂವರು ಶಿಕ್ಷಕರು 147 ವಿದ್ಯಾರ್ಥಿಗಳಿಗೆ ಪಾಠ ಮಾಡ ಬೇಕಾಗುತ್ತದೆ. ಆಗ ಏಳು ಕೊಠಡಿಗಳ ವಿದ್ಯಾರ್ಥಿಗಳನ್ನು ಮೂರೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡುತ್ತಾರೆ. ಈ ಕ್ರಮದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿಲ್ಲ’ ಗ್ರಾಮದ ಹಿರಿಯ ನಿವಾಸಿ ರಾಮಣ್ಣ ದೂರಿದರು.

‘ಮುಖ್ಯ ಶಿಕ್ಷಕರನ್ನು ನೇಮಿಸುವಂತೆ ಯಲಹಂಕ ಕ್ಷೇತ್ರ ಶಿಕ್ಷಣಾಧಿಕಾರಿ ಅವ ರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅವರು ತಿಳಿಸಿದರು.

‘ಕಾಕೋಳು ಗ್ರಾಮದ ಸುತ್ತಮುತ್ತಲಿನ ರೈತರಿಗೆ ಇರುವುದು ಇದೊಂದೇ ಸರ್ಕಾರಿ ಶಾಲೆ. ಖಾಸಗಿ ಶಾಲೆಗಳಿಗೆ ಕಳುಹಿಸುವಷ್ಟು ಆರ್ಥಿಕ ಶಕ್ತಿ ಇಲ್ಲದವರೇ ಇಲ್ಲಿ ಹೆಚ್ಚು ಇದ್ದಾರೆ. ಭೂಮಿಯಲ್ಲಿ ಬೆಳೆಯುವ ಬೆಳೆಯೇ ಜೀವನಕ್ಕೆ ಆಧಾರವಾಗಿದೆ. ಸರ್ಕಾರಿ ಶಾಲೆಯನ್ನು ನಾವೆಲ್ಲ ಅವಲಂಬಿಸಿದ್ದೇವೆ. ಪರಿಸ್ಥಿತಿ ಹೀಗಾದರೆ ನಮ್ಮಂತಹವರ ಗತಿಯೇನು?’ ಎಂದು ಗ್ರಾಮದ ರೈತ ಮಹೇಶ್ ಬೇಸರ ವ್ಯಕ್ತಪಡಿಸಿದರು.

ಕಾಕೋಳು ಗ್ರಾಮದ ಸಿಆರ್‌ಪಿ ನಾಗರಾಜ್ ಪ್ರತಿಕ್ರಿಯಿಸಿ, ‘ಮುಖ್ಯ ಶಿಕ್ಷಕರನ್ನು ನೇಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ಶೀಘ್ರದಲ್ಲಿ ಮುಖ್ಯ ಶಿಕ್ಷಕರ ನೇಮಕ ಮಾಡಲಾಗುವುದು ಎಂಬ ಭರವಸೆ ನೀಡಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !