ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರಲ್ಲೇ ಶಿಸ್ತಿಲ್ಲವೆಂದರೆ ಗತಿಯೇನು: ಹೈಕೋರ್ಟ್‌ ಕಟು ಪ್ರಶ್ನೆ

ನೆಲಮಂಗಲ ವಕೀಲರ ಸಂಘದ ವಿವಾದ, ಎರಡು ಸಂಘಗಳು ಅಸ್ತಿತ್ವದಲ್ಲಿರುವ ಪ್ರಕರಣ
Last Updated 18 ಅಕ್ಟೋಬರ್ 2019, 20:19 IST
ಅಕ್ಷರ ಗಾತ್ರ

ಬೆಂಗಳೂರು: ‘ವಕೀಲರ ಸಂಘದ ಸದಸ್ಯರು ಶಿಸ್ತಿನಿಂದ ವರ್ತಿಸದೇ ಹೋದರೆ, ಬಡ ಕಕ್ಷಿದಾರರು ಅಶಿಸ್ತಿನ ವಕೀಲರಿಂದ ಎಂತಹ ನ್ಯಾಯವನ್ನು ತಾನೇ ನಿರೀಕ್ಷಿಸಿಯಾರು’ ಎಂದು ರಾಜ್ಯ ವಕೀಲರ ಪರಿಷತ್‌ ಅನ್ನು ಹೈಕೋರ್ಟ್‌ ಕಟುವಾಗಿ ಪ್ರಶ್ನಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವಕೀಲ ವೃಂದದಲ್ಲಿ ಎರಡು ವಕೀಲರ ಸಂಘಗಳು ಅಸ್ತಿತ್ವದಲ್ಲಿರುವ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಕುರಿತಂತೆ ನೆಲಮಂಗಲದ ಖ್ಯಾತ ಕ್ರಿಮಿನಲ್‌ ವಕೀಲ ಕೆ.ಕೇಶವಮೂರ್ತಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ, ರಾಜ್ಯ ವಕೀಲರ ಪರಿಷತ್‌ 2010ರ ಜೂನ್‌ 12ರಂದು ಹೊರಡಿಸಿದ್ದ ಮಾನ್ಯತೆಯ ಆದೇಶವನ್ನು ವಜಾಗೊಳಿಸಿದೆ.

‘ಬಡ ಕಕ್ಷಿದಾರರು ನ್ಯಾಯಾಲಯದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬರುತ್ತಾರೆ. ಹೀಗಿರುವಾಗ, ವಕೀಲರ ನಡುವಿನ ಯಾವುದೇ ಭಿನ್ನಾಭಿಪ್ರಾಯವನ್ನು ಕಾನೂನು ರೀತ್ಯಾ ಬಗೆಹರಿಸಬೇಕಾದ್ದು ವಕೀಲರ ಪರಿಷತ್‌ನ ಜವಾಬ್ದಾರಿ. ವಕೀಲರ ಪರಿಷತ್‌, ವಕೀಲರ ಸಂಘಕ್ಕೆ ತಾಯಿಯಿದ್ದಂತೆ. ತಪ್ಪೆಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪರಿಷತ್‌ ಅಂಗಳಕ್ಕೆ: ‘ಅರ್ಜಿದಾರ ಕೆ. ಕೇಶವಮೂರ್ತಿ ಹಾಗೂ ಪ್ರತಿವಾದಿಯೂ ಆದ ಪರ್ಯಾಯ ಸಂಘದ ಅಧ್ಯಕ್ಷ ಬಿ.ಆರ್.ಸುರೇಂದ್ರನಾಥ್‌ ಅವರ ಅಹವಾಲುಗಳನ್ನು ಪರಿಷತ್‌ ಕೂಲಂಕಷವಾಗಿ ಆಲಿಸಬೇಕು. ಕಾನೂನು ಪ್ರಕಾರ ಈವಿವಾದವನ್ನು ಕಟ್ಟುನಿಟ್ಟಾಗಿ ಇತ್ಯರ್ಥಪಡಿಸಬೇಕು’ ಎಂದು ನಿರ್ದೇಶಿಸಿದೆ.

ಪ್ರಕರಣವೇನು?: ನೆಲಮಂಗಲದಲ್ಲಿ 1981ರಲ್ಲಿ ಮುನ್ಸೀಫ್‌ ಕೋರ್ಟ್ ಆರಂಭವಾಯಿತು. ಈ ಸಂದರ್ಭದಲ್ಲಿ ಕೆ.ಕೇಶವಮೂರ್ತಿ, ಆಂಜನಮೂರ್ತಿ, ಶ್ಯಾಮರಾವ್‌, ಶಂಕರಯ್ಯ ಸೇರಿದಂತೆ ಸ್ಥಳೀಯ ಹಿರಿಯ ವಕೀಲರು 1987ರ ಫೆಬ್ರುವರಿ 24ರಂದು ನೆಲಮಂಗಲ ವಕೀಲರ ಸಂಘವನ್ನು ಪ್ರಾರಂಭಿಸಿದರು.

ಈ ಸಂಘಕ್ಕೆ ಪ್ರತಿಯಾಗಿ ಮಂಜುನಾಥ್‌ ಎಂಬುವರ ಹೆಸರಿನಲ್ಲಿ 2009ರಲ್ಲಿ ಮತ್ತೊಂದು ಸಂಘವನ್ನು ನೋಂದಣಿ ಮಾಡಿಸಲಾಯಿತು. ಈ ನೊಂದಣಿ ಪ್ರಶ್ನಿಸಿ ಕೇಶವಮೂರ್ತಿ ನೋಂದಣಿ ಅಧಿಕಾರಿಗಳಲ್ಲಿ ಆಕ್ಷೇಪಣೆ ಸಲ್ಲಿಸಿದರು. ಅಂತೆಯೇ ರಾಜ್ಯ ವಕೀಲರ ಪರಿಷತ್‌ಗೂ ತಕರಾರು ಸಲ್ಲಿಸಿದರು. ‘ಹಾಲಿ ಒಂದು ಸಂಘ ಅಸ್ತಿತ್ವದಲ್ಲಿ ಇರುವಾಗ ಮತ್ತೊಂದು ಸಂಘಕ್ಕೆ ಮಾನ್ಯತೆ ನೀಡಬಾರದು. ಇದು ಕಾನೂನು ಬಾಹಿರ’ ಎಂದರು.

ಇದರಿಂದ ಪ್ರಯೋಜನವಾಗದೇ ಹೋದಾಗ, ‘ಪರಿಷತ್‌ ನಮ್ಮ ಆಕ್ಷೇಪಣೆ ಪರಿಗಣಸಿಲ್ಲ’ ಎಂದು ಕೇಶವಮೂರ್ತಿ 2015ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪರಿಷತ್‌ ಅಧಿಕಾರ: ರಾಜ್ಯ ವಕೀಲರ ಪರಿಷತ್‌ನ ಅಧಿಕಾರ ಮತ್ತು ಕರ್ತವ್ಯಗಳನ್ನು ವಕೀಲರ ಕಾಯ್ದೆ–1961ರ ಕಲಂ 3ರ ಅನುಸಾರ ವಿವರಿಸಲಾಗಿದೆ.

‘ವಕೀಲರ ಸಂಘಗಳ ಮೇಲೆ ಮತ್ತು ದುರ್ನಡತೆ ತೋರುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ, ವಕೀಲರ ಹಕ್ಕುಗಳು ಮತ್ತು ಹಿತಾಸಕ್ತಿ ಕಾಯುವುದು, ವಕೀಲರ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಂತೆ ನೋಡಿಕೊಳ್ಳುವುದೂ’ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಪರಿಷತ್‌ ಹೊಂದಿದೆ.

ವಕೀಲರ ಪರಿಷತ್‌ಗೆ ಕಿವಿಮಾತು
‘ರಾಜ್ಯ ಸರ್ಕಾರ ನೀಡುವ ಕಲ್ಯಾಣ ನಿಧಿಯನ್ನು ರಾಜ್ಯ ವಕೀಲರ ಪರಿಷತ್‌ ಕಾಲಕಾಲಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ನ್ಯಾಯಪೀಠ ಪರಿಷತ್‌ಗೆ ಕಿವಿಮಾತು ಹೇಳಿದೆ.

‘ವಕೀಲರ ಕಲ್ಯಾಣ ನಿಧಿಗಾಗಿ ಕ್ರೋಡೀಕರಿಸುವ ಸ್ಟ್ಯಾಂಪ್‌ಗಳ ನಿರ್ವಹಣೆಯಲ್ಲಿ ಪರಿಷತ್‌ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ರಾಜ್ಯದ ಎಲ್ಲ ಸಂಘಗಳ ಸದಸ್ಯರ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು. ಈ ಮೂಲಕ ಪರಿಷತ್ತಿನ ಘನತೆ, ಗೌರವವನ್ನು ಎತ್ತಿಹಿಡಿಯುವಂತಾಗಬೇಕು’ ಎಂದು ವಿವರಿಸಿದೆ.

**
ಸಮಾಜ ಸುಧಾರಕರಾಗಿ ವರ್ತಿಸಬೇಕಾದ ವಕೀಲರು ಎರಡೆರಡು ವಕೀಲರ ಸಂಘಗಳನ್ನು ಕಟ್ಟಿಕೊಂಡು ಸ್ವಾರ್ಥ ಸಾಧನೆಗೆ ವ್ಯಾಜ್ಯ ನಡೆಸುವುದು ಅತ್ಯಂತ ದುರದೃಷ್ಟಕರ ಸಂಗತಿ.
–ಬಿ.ವೀರಪ್ಪ, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT