ಮಂಗಳವಾರ, ನವೆಂಬರ್ 19, 2019
29 °C
ಗೃಹ ಇಲಾಖೆಗೆ ಸೂಚನೆ

ವಿದೇಶಿಯರ ಅಕ್ರಮ ವಾಸ: ಪ್ರಧಾನ ಕಾರ್ಯದರ್ಶಿ ಹಾಜರಿಗೆ ನಿರ್ದೇಶನ

Published:
Updated:

ಬೆಂಗಳೂರು: ‘ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ನಂತರ ಜೈಲಿನಿಂದ ಬಿಡುಗಡೆಯಾಗುವ ವಿದೇಶಿಯರನ್ನು ಯಾವ ಸ್ಥಳದಲ್ಲಿ ಇರಿಸುತ್ತೀರಿ ಎಂಬ ಬಗ್ಗೆ ಖುದ್ದು ಹಾಜರಾಗಿ ವಿವರಿಸಿ’ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ಬಾಂಗ್ಲಾದ ಬಾಬುಲ್ ಖಾನ್, ತಾನಿಯಾ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರಸನ್ನ ದೇಶಪಾಂಡೆ, ‘ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಫಾರಿನರ್ಸ್ ಡಿಟೆನ್ಷನ್ ಸೆಂಟರ್ ಆರಂಭಿಸಲು ಅ. 21ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಹಾಯಕ ಸಾಲಿಸಿಟರ್ ಜನರಲ್‌ ಸಿ.ಶಶಿಕಾಂತ್ ಅವರು, ‘ಪಾಸ್‌ಪೋರ್ಟ್‌ ಇಲ್ಲದೆ ಮತ್ತು ಅಕ್ರಮವಾಗಿ ಒಳನುಸುಳಿದ ವಿದೇಶಿಯರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದಾಗ ಒಂದೆಡೆ ಕೂಡಿಡುವ ಹೊಣೆ ರಾಜ್ಯ ಸರ್ಕಾರದ್ದು. ಪ್ರಸಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕೈಗೊಂಡಿರುವ ಕ್ರಮಗಳ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದ್ದರಿಂದ ಸಮಯಾವಕಾಶ ಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ, ‘ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಇದೇ 8ರಂದು ಖುದ್ದು ಹಾಜರಾಗಬೇಕು’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಪ್ರತಿಕ್ರಿಯಿಸಿ (+)