ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಕೆರೆ ಬಹುತೇಕ ಒತ್ತುವರಿ: 2 ಕೆರೆಗಳಲ್ಲಿ ಮಾತ್ರವೇ ನೀರಿದೆ: ‘ನೀರಿ’ ವರದಿ

ಹೈಕೋರ್ಟ್‌
Last Updated 8 ನವೆಂಬರ್ 2019, 19:20 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಣ್ಮರೆಯಾಗಿರುವ 19 ಕೆರೆಗಳಲ್ಲಿ ಕೇವಲ 2 ಕೆರೆಗಳಲ್ಲಿ ಮಾತ್ರವೇ ನೀರಿದೆ. ಉಳಿದವುಗಳೆಲ್ಲಾ ಬಹುತೇಕ ಒತ್ತುವರಿ ಆಗಿವೆ!

ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧಾನ ಸಂಸ್ಥೆ (ನೀರಿ) ಹೈಕೋರ್ಟ್‌ಗೆ ನೀಡಿರುವ ಮಧ್ಯಂತರ ವರದಿಯಲ್ಲಿ ಈ ಮಹತ್ವದ ಅಂಶವನ್ನು ಉಲ್ಲೇಖಿಸಲಾಗಿದೆ.

ಈ ಸಂಬಂಧ ‘ಸಿಟಜನ್ ಆಕ್ಷ್ಯನ್ ಫೋರಂ’ ಸೇರಿದಂತೆ ವಿವಿಧ ಸಂಘಟನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ತಡೆ: ‘ಬಿಡಿಎ ಅಥವಾ ಬಿಬಿಎಂಪಿ ಇಲ್ಲವೇ ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತಿರುವ ಕೆರೆಗಳಲ್ಲಿ ಕೃತಕ ದ್ವೀಪ ಸೇರಿದಂತೆ ಯಾವುದೇ ಬಗೆಯ ನಿರ್ಮಾಣ ಕಾರ್ಯ ಕೈಗೊಳ್ಳಬಾರದು’ ಎಂದು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ವರದಿಯಲ್ಲಿನ ಮುಖ್ಯಾಂಶಗಳು:
* ಪಶ್ಚಿಮ ವಲಯದಲ್ಲಿನ ಅಂಚೆ ರಾಮಣ್ಣ ಕೆರೆ (ಗಂಗೊಡನಹಳ್ಳಿ ಕೆರೆ) ಮತ್ತು ಬೊಮ್ಮನಹಳ್ಳಿ ವಲಯದ ಬಿಳೇಕಹಳ್ಳಿ ಕೆರೆಗಳು ಕ್ರಮವಾಗಿ ಸದ್ಯ 14 ಮತ್ತು 36 ಗುಂಟೆ ವಿಸ್ತೀರ್ಣ ಹೊಂದಿವೆ. ಇವುಗಳನ್ನು ಫ್ಲವರ್ ಟ್ರೀ ಪಾರ್ಕ್ ಎಂದು ಅಭಿವೃದ್ಧಿಪಡಿಸಬಹುದು.
* ಬೊಮ್ಮನಹಳ್ಳಿ ಕೆರೆಯ ಒಟ್ಟು 22 ಎಕರೆ ಪೈಕಿ 13 ಎಕರೆಯನ್ನು ಖಾಸಗಿ ಬಡಾವಣೆಗಳು ಮತ್ತು ದೇವಾಲಯಗಳ ಉದ್ದೇಶಕ್ಕೆ ಒತ್ತುವರಿ ಮಾಡಲಾಗಿದೆ.
* ಬ್ಯಾತಗುಂಟೆ ಪಾಳ್ಯ ಕೆರೆಯಲ್ಲಿ 4 ಎಕರೆ ಪೈಕಿ 3 ಎಕರೆ ಒತ್ತುವರಿ ಆಗಿದೆ.
* ದೊರೆಸಾನಿಪಾಳ್ಯ ಕೆರೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 8 ಎಕರೆಯನ್ನು ಸಂಪೂರ್ಣ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿದೆ.
* ಇಟ್ಟಮಡು ಕೆರೆಯ 10 ಎಕರೆ ಪೈಕಿ 5 ಎಕರೆಯು, ಖಾಸಗಿ ಕಟ್ಟಡ ಮತ್ತು ದೇವಾಲಯಗಳಿಂದ ಆವೃತವಾಗಿದೆ.
* ಕಾಮಾಕ್ಷಿಪಾಳ್ಯ ಕೆರೆಯ ಒಟ್ಟು 6 ಎಕರೆಯಲ್ಲಿ 3 ಎಕರೆಯನ್ನು ಕೊಳಚೆ ನಿರ್ಮೂಲನಾ ಮಂಡಳಿ ಒತ್ತುವರಿ ಮಾಡಿಕೊಂಡು ಕೊಳೆಗೇರಿ ತೆರವು ಮಾಡಿದೆ.
* ಕರಿಸಂದ್ರ ಕೆರೆಯ 2 ಎಕರೆಯನ್ನು ವಿದ್ಯುತ್ ಚಿತಾಗಾರಕ್ಕೆ ಮತ್ತು ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಒತ್ತುವರಿ ಮಾಡಲಾಗಿದೆ.
* ಕೊನೇನ ಅಗ್ರಹಾರ ಕೆರೆಯ 20 ಎಕರೆಯಲ್ಲಿ 13 ಎಕರೆ ಖಾಸಗಿ ಸಂಸ್ಥೆಗಳಿಂದ ತುಂಬಿದೆ.

‘ಅರೆಹಳ್ಳಿ–ತಾವರೆಕೆರೆ ಪುನರುಜ್ಜೀವನ ಸಾಧ್ಯ’
‘ಅರೆಹಳ್ಳಿ ಮತ್ತು ತಾವರೆಕೆರೆ ಕೆರೆಗಳನ್ನು ಪುನರುಜ್ಜೀವನಗೊಳಿಸಬಹುದು. ಸಾಣೆಗೊರವನಹಳ್ಳಿ ಕೆರೆಯ 15 ಎಕರೆ ಪ್ರದೇಶದ ಪೈಕಿ 8 ಎಕರೆಯನ್ನು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ, ಆಟದ ಮೈದಾನಕ್ಕೆ ಹಾಗೂ ಖಾಸಗಿ ಬಡಾವಣೆಗೆ ಒತ್ತುವರಿ ಮಾಡಿಕೊಳ್ಳಲಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಅರೆಹಳ್ಳಿಯ ಎರಡು ಸಣ್ಣ ಕೆರೆಗಳ ಪೈಕಿ 7 ಎಕರೆ ಒತ್ತುವರಿ ಆಗಿದೆ. ಅದರಲ್ಲಿ ಆರು ಎಕರೆಯನ್ನು ಬಿಡಿಎ ಒತ್ತುವರಿ ಮಾಡಿದೆ’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT