ಬೆಂಗಳೂರು: ಹೊಸದಾಗಿ 840 ಬಸ್‌ಗಳ ಖರೀದಿಗೆ ಸಂಬಂಧಿಸಿದಂತೆ ಕಾರ್ಯಾದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಹೈಕೋರ್ಟ್ ಅನುಮತಿ ನೀಡಿದೆ.
ಹೊಸ ಬಸ್‌ಗಳ ಖರೀದಿಗೆ ಬಿಬಿಎಂಟಿಸಿ ಹೊರಡಿಸಿದ್ದ ಟೆಂಡರ್ ಅಧಿಸೂಚನೆ ಪ್ರಶ್ನಿಸಿ ನಗರದ ಅಂಗವಿಕಲ ಸುನೀಲ್ ಕುಮಾರ್ ಜೈನ್ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿಎಂಟಿಸಿ ಪರ ವಕೀಲರು, ‘ಕಾರ್ಯಾಚರಣೆಯಲ್ಲಿರುವ ಬಿಎಂಟಿಸಿ ಬಸ್‌ಗಳ ಪೈಕಿ ಶೇ 21ರಷ್ಟು ಬಸ್‌ಗಳಲ್ಲಿ ಗಾಲಿಕುರ್ಚಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಬಸ್‌ನಲ್ಲಿ ಅಂಗವಿಕಲರಿಗೆ ನಾಲ್ಕು (ಮಹಿಳೆ/ಪುರುಷರಿಗೆ ತಲಾ ಎರಡು) ಸೀಟುಗಳನ್ನು ಮೀಸಲಿರಿಸಲಾಗಿದೆ’ ಎಂದು ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಅಂಗವಿಕಲರ ಪ್ರಯಾಣಕ್ಕೆ ಅನು ಕೂಲಕರ ಸೌಲಭ್ಯ ಕಲ್ಪಿಸಲು ಬಿಎಂಟಿಸಿ ಕ್ರಮ ಅನುಸರಿಸುತ್ತಿದೆ’ ಎಂದಿತು.
‘ಅರ್ಜಿದಾರರು ಬಯಸಿದಂತೆ ಒಂದೇ ಬಾರಿಗೆ ಎಲ್ಲಾ ಕ್ರಮಕೈಗೊಳ್ಳಬೇಕೆಂದು ನಿರೀಕ್ಷಿಸುವುದು ಅಸಾಧ್ಯ. , ಹಂತ ಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಬಿಎಂಟಿಸಿಗೆ ಒಂದಷ್ಟು ಕಾಲಾವಕಾಶ ನೀಡಬೇಕು’ ಎಂದು ಸೂಚಿಸಿ ಹೊಸ ಬಸ್‌ಗಳ ಖರೀದಿಗೆ ಕಾರ್ಯಾದೇಶ ಹೊರಡಿಸಲು ಅನುಮತಿ ನೀಡಿ ಆದೇಶಿಸಿತು.
ಪ್ರಕರಣವೇನು?: ಬಿಎಂಟಿಸಿ 840 ಬಸ್ ಗಳ ಖರೀದಿಗೆ ಹೊರಡಿಸಿದ್ದ ಟೆಂಡರ್ ಅಧಿಸೂಚನೆಯನ್ನು ಪ್ರಶ್ನಿಸಿದ್ದರು.
‘ಉಲ್ಲೇಖಿತ ಬಸ್‌ನ ಚಾಸಿಗಳ (ತಳಕಟ್ಟು) ಎತ್ತರ 1,000 ಮಿಲಿ ಮೀಟರ್ ಇರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಆದರೆ, ಅದು ಮೋಟಾರು ವಾಹನ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ. ಗಾಲಿ ಕುರ್ಚಿಗಳಿಂದ ಹತ್ತಿ ಇಳಿಯಲು ಅನುಕೂಲವಾಗುವಂತೆ ವ್ಯವಸ್ಥೆ ಇರುವ (ವ್ಹೀಲ್ ಚೇರ್ ಬೋರ್ಡಿಂಗ್ ಡಿವೈಸ್) ಬಸ್‌ಗಳನ್ನು ಖರೀದಿಸಲು ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಘನತ್ಯಾಜ್ಯ ವಿಲೇವಾರಿ: ಪ್ರಮಾಣಪತ್ರ ಸಲ್ಲಿಕೆಗೆ ನಿರ್ದೇಶನ
ಬೆಂಗಳೂರು: ‘ನಗರದಲ್ಲಿನ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಬಗ್ಗೆ ಕೈಗೊಂಡಿರುವ ಕ್ರಮಗಳು ಹಾಗೂ ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ನ್ಯಾಯಾಲಯ ನೀಡಿದ್ದ ಆದೇಶಗಳನ್ನು ಪಾಲಿಸಿರುವ ಬಗ್ಗೆ ಎರಡು ವಾರಗಳಲ್ಲಿ ಸಮಗ್ರ ಪ್ರಮಾಣಪತ್ರ ಸಲ್ಲಿಸಿ’ ಎಂದು ರಾಜ್ಯ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಸಲಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಸರ್ಕಾರ ಹಾಗೂ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ‘ಸುದೀರ್ಘ ಅವಧಿಯ ನಂತರ ಅರ್ಜಿ ವಿಚಾರಣೆಗೆ ಬಂದಿದೆ. ಈ ಪ್ರಕರಣದಲ್ಲಿ ಬಿಬಿಎಂಪಿ ಪ್ರಮಾಣಪತ್ರ ಸಲ್ಲಿಸಿ ವರ್ಷವೇ ಆಗಿದೆ. ಬಿಬಿಎಂಪಿ ಹಾಗೂ ಸರ್ಕಾರ ಕೈಗೊಂಡಿರುವ ಕ್ರಮಗಳಲ್ಲಿ ಹೆಚ್ಚು ಪ್ರಗತಿ ಕಾಣುತ್ತಿಲ್ಲ’ ಎಂದು ಹೇಳಿತು.
‘ಬಿಬಿಎಂಪಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅರ್ಜಿದಾರರಿಗೂ ಸಮಾಧಾನ ಇಲ್ಲ. ಆದ್ದರಿಂದ, ಹೊಸದಾಗಿ ಪ್ರಮಾಣಪತ್ರ ಸಲ್ಲಿಸಿ’ ಎಂದು ಪ್ರತಿ
ವಾದಿಗಳಿಗೆ ನಿರ್ದೇಶಿಸಿ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.