ಗುರುವಾರ , ಜನವರಿ 21, 2021
30 °C

ಬಿಬಿಎಂಪಿ ಚುನಾವಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ತ್ವರಿತವಾಗಿ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಬುಧವಾರ ಪೂರ್ಣಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವಡಗಿ, ಅರ್ಜಿದಾರರ ಪರ ವಕೀಲರು ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿದರು.

ಕರ್ನಾಟಕ ನಗರಾಡಳಿತ ಕಾಯ್ದೆ 1976ಕ್ಕೆ ತಂದಿರುವ ತಿದ್ದುಪಡಿಯ ಪ್ರಕಾರ, ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಲಾಗುತ್ತಿದೆ. ವಿಧಾನಮಂಡಲ ರೂಪಿಸಿರುವ ಕಾಯ್ದೆಯ ಆಧಾರದಲ್ಲಿ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಆರಂಭಿಸಲಾಗಿದೆ. ವಿಧಾನಮಂಡಲದಲ್ಲಿ ಹೊಸ ಕಾಯ್ದೆ ರೂಪಿಸಿದರೆ ಮಾತ್ರವೇ ಈ ಪ‍್ರಕ್ರಿಯೆಯನ್ನು ತಡೆಯಲು ಸಾಧ್ಯ. ಅಂತಹ ಯಾವ ಅವಕಾಶಗಳೂ ಈಗ ಇಲ್ಲ. ವಾರ್ಡ್‌ಗಳ ಮರುವಿಂಗಡಣೆಯಿಂದ ಯಾರದ್ದೇ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗುವುದಿಲ್ಲ ಎಂದು ಅಡ್ವೊಕೇಟ್‌ ಜನರಲ್ ವಾದಿಸಿದರು.

ಸಕಾಲಕ್ಕೆ ಚುನಾವಣೆ ನಡೆಸಬೇಕೆಂಬ ಅರ್ಜಿದಾರರ ಬೇಡಿಕೆಯನ್ನು ರಾಜ್ಯ ಸರ್ಕಾರ ವಿರೋಧಿಸುವುದಿಲ್ಲ. ಆದರೆ, ಕೋವಿಡ್‌–19 ಕಾರಣದಿಂದಾಗಿ ಚುನಾವಣೆ ವಿಳಂಬವಾಗಿದೆ ಎಂದರು.

ಅಡ್ವೊಕೇಟ್‌ ಜನರಲ್‌ ವಾದವನ್ನು ವಿರೋಧಿಸಿದ ಅರ್ಜಿದಾರರ ಪರ ವಕೀಲರು, ‘ವಾರ್ಡ್‌ಗಳ ಮರು ವಿಂಗಡಣೆಯು ಚುನಾವಣೆಯ ವಿಳಂಬಕ್ಕೆ ಕಾರಣವಾಗಲಿದೆ. ಹೊಸದಾಗಿ ಮೀಸಲಾತಿ ನಿಗದಿ ಮಾಡಬೇಕಾಗುತ್ತದೆ. ಅದು ಚುನಾವಣೆ ಇನ್ನೂ ತಡವಾಗಲು ಕಾರಣವಾಗುತ್ತದೆ. 2021ರಲ್ಲಿ ಜನಗಣತಿ ಕೂಡ ನಡೆಯಲಿದೆ. ಇದರಿಂದಾಗಿ ಚುನಾವಣೆ ಮತ್ತಷ್ಟು ಕಾಲ ಮುಂದಕ್ಕೆ ಹೋಗುತ್ತದೆ’ ಎಂದು ಹೇಳಿದರು.

ಪಾಲಿಕೆಗೆ ಶೀಘ್ರ ಚುನಾವಣೆ ನಡೆಸುವಂತೆ ಕೋರಿ ಪಾಲಿಕೆಯ ಮಾಜಿ ಸದಸ್ಯರಾದ ಎಂ.ಶಿವರಾಜ್‌ ಹಾಗೂ ಅಬ್ದುಲ್‌ ವಾಜಿದ್‌ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು