‘ಸ್ವಚ್ಛಯಜ್ಞ’ ಮುಂದುವರಿಸಿದ ಹೈಕೋರ್ಟ್‌!

7
ಗಡುವಿನಲ್ಲಿ ವಿನಾಯಿತಿ ಇಲ್ಲ l ಸಾರ್ವಜನಿಕರಲ್ಲಿ ಪೌರಪ್ರಜ್ಞೆ ಹೆಚ್ಚಿಸಲು ಕಿವಿಮಾತು

‘ಸ್ವಚ್ಛಯಜ್ಞ’ ಮುಂದುವರಿಸಿದ ಹೈಕೋರ್ಟ್‌!

Published:
Updated:
Deccan Herald

ಬೆಂಗಳೂರು: ‘ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಸಮಗ್ರ ಕರಡು ಪ್ರತಿ ಸಿದ್ಧಪಡಿಸಲು ಇನ್ನೂ ಎರಡು ದಿನ ಸಮಯ ಬೇಕು’ ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿಗೆ ಹೈಕೋರ್ಟ್ ಮತ್ತೆ ಗರಂ ಆಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ  ಮುಂದುವರಿಸಿತು.

ಈ ವೇಳೆ ಬಿಬಿಎಂಪಿ ಪರ ವಕೀಲ ವಿ‌.ಶ್ರೀನಿಧಿ ಜಾಹೀರಾತು ನೀತಿಯ ಕರಡು ವಿವರಗಳನ್ನು ತಿಳಿಸಿದರು‌.

ಪ್ರಮಾಣ ಪತ್ರದಲ್ಲಿದ್ದ ತಜ್ಞರು, ವಿವಿಧ ಇಲಾಖೆಗಳು, ನಾಗರಿಕರು, ಜಾಹೀರಾತು ಸಂಸ್ಥೆಗಳು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷ ಭಾಗಿಯಾದವರ ಜೊತೆ ಚರ್ಚಿಸಿ ನಿಯಮ ರೂಪಿಸಲಾಗುವುದು ಎಂಬ ಸಾಲಿಗೆ ದಿನೇಶ್‌ ಮಾಹೇಶ್ವರಿ ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ಕೌನ್ಸಿಲ್ ಸಭೆ ನಡೆಸುವುದಕ್ಕೂ ನಾವೇ ಆದೇಶ ಮಾಡಬೇಕಾ, ನಿಮ್ಮ ಕೆಲಸ ಮಾಡೋದಕ್ಕೂ ನಾವೇ ಹೇಳಬೇಕಾ, ಅಧಿಕಾರಿಗಳು ಸಂಬಳ ತಗೋಳೋದಿಲ್ವಾ’ ಎಂದು ಪ್ರಶ್ನೆಗಳ ಮಳೆಗರೆದರು.

ನ್ಯಾ. ದಿನೇಶ್ ಮಾಹೇಶ್ವರಿ ಹೇಳಿದ್ದು...

* ಫಲಕಗಳನ್ನು ತೆರವುಗೊಳಿಸಲು ನೀಡಿರುವ ಈ ತಿಂಗಳ ಅಂತ್ಯದ ಡೆಡ್‌ಲೈನ್‌ನಲ್ಲಿ ಕಿಂಚಿತ್ತೂ ವಿನಾಯ್ತಿ ನೀಡುವುದಿಲ್ಲ.

* ಆಗಸ್ಟ್‌ 31ರ ಮಧ್ಯರಾತ್ರಿಯೊಳಗೆ ಬೆಂಗಳೂರು ಹೊಸ ಕಳೆಯೊಂದಿಗೆ ಕಂಗೊಳಿಸಬೇಕು.

* ಅನಧಿಕೃತ ಜಾಹೀರಾತು ಹಾಕಿರುವವರು ಇದೇ 30ರೊಳಗೆ ಸ್ವಯಂಸ್ಫೂರ್ತಿಯಿಂದ ತೆರವುಗೊಳಿಸಬೇಕು.

* ಜಾಹೀರಾತು ಫಲಕಗಳನ್ನು ತೂಗುಹಾಕುವ ಕಬ್ಬಿಣ ಮತ್ತು ಮರದ ಸ್ಟ್ರಕ್ಚರ್‌ಗಳನ್ನು ಯಾವಾಗ ತೆರವುಗೊಳಿಸುತ್ತೀರಿ?

* ಬೆಂಗಳೂರಿನ ಅಭಿವೃದ್ಧಿಗೆ, ಸೌಂದರ್ಯವೃದ್ಧಿಗೆ ವಕೀಲ ವೃಂದವೂ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರದ ಜನರೂ ಸಹಕರಿಸಬೇಕು.

* ಬೆಂಗಳೂರು ಫ್ಲೆಕ್ಸ್‌, ಪ್ಲಾಸ್ಟಿಕ್‌ ಮತ್ತು ಪೋಸ್ಟರ್‌ ಮುಕ್ತ ನಗರವಾಗಬೇಕು.

* ನಗರದ ಸೌಂದರ್ಯ ವೃದ್ಧಿಯ ದಿಸೆಯಲ್ಲಿ ಇದಿನ್ನೂ ಮೊದಲ ಹೆಜ್ಜೆ.

* ನಾಳೆ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರಧ್ವಜಗಳ ಬ್ಯಾನರ್ ಹಾಗೂ ಪ್ಲಾಸ್ಟಿಕ್‌ ಕಸವನ್ನು ವಿಲೇವಾರಿ ಮಾಡಲು ಏನು ಕ್ರಮ ಕೈಗೊಂಡಿದ್ದೀರಿ?

* ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧ ಕುರಿತಂತೆ ಮತ್ತು ಕಾನೂನು ಉಲ್ಲಂಘಿಸಿದವರ ವಿರುದ್ಧ ಕೈಗೊಂಡಿರುವ ಕ್ರಮಗಳೇನು?

ದೂರುವುದು ಬೇಡ: ‘ಬಿಬಿಎಂಪಿ ಇತಿಹಾಸ ಗಮನಿಸದರೆ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ದಿಸೆಯಲ್ಲಿ ಈ ಹಿಂದೆ ಪಾರದರ್ಶಕ ನಡವಳಿಕೆ ಇಲ್ಲ’ ಎಂಬ ಅರ್ಜಿದಾರರ ಪರ ವಕೀಲರ ಆಕ್ಷೇಪಣೆಯನ್ನು ನ್ಯಾಯಪೀಠ ಒಪ್ಪಲಿಲ್ಲ.

‘ಜನರಲ್ಲಿ ಪೌರಪ್ರಜ್ಞೆ ಜಾಗೃತಗೊಳಿಸಬೇಕು. ಎಲ್ಲದಕ್ಕೂ ಆಡಳಿತ ವ್ಯವಸ್ಥೆ ದೂಷಿಸುವುದು ಸರಿಯಲ್ಲ. ಡೊಂಕು ತಿದ್ದಲು ನಮ್ಮ ಕೊಡುಗೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಆದೇಶ: ‘ತೆರವುಗೊಳಿಸಿರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ವಿಲೇವಾರಿಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಮುಂದಿನ ವಿಚಾರಣೆ ವೇಳೆ ಸ್ಪಷ್ಟವಾಗಿ ನಿಖರವಾಗಿತಿಳಿಸಿ ಎಂದು ಬಿಬಿಎಂಪಿಗೆ ನಿರ್ದೇಶಿಸಿದ ನ್ಯಾಯಪೀಠ ಮುಂದಿನ ವಿಚಾರಣೆ ವೇಳೆಗೆ ಉತ್ತಮ ಪ್ರಮಾಣಪತ್ರ ಸಲ್ಲಿಸಿ’ ಎಂದು ಆದೇಶಿಸಿತು.

ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ‌.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !