ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆಗಳ ಒತ್ತುವರಿ: ಪರ್ಯಾಯ ಪ್ರಾಧಿಕಾರ ಆದೇಶ ಸಲ್ಲ –ಹೈಕೋರ್ಟ್

ರಾಜಕಾಲುವೆಗಳ ಒತ್ತುವರಿ ಅರ್ಜಿ ವಿಚಾರಣೆ: ಹೈಕೋರ್ಟ್ ಸ್ಪಷ್ಟನೆ
Last Updated 20 ಸೆಪ್ಟೆಂಬರ್ 2022, 4:54 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕಾಲುವೆ ಒತ್ತುವರಿ ಸೇರಿ ಹೈಕೋರ್ಟ್ ವಿಚಾರಣೆ ನಡೆಸುತ್ತಿರುವ ಅರ್ಜಿಗಳ ಕುರಿತು ಯಾವುದೇ ಪ್ರಾಧಿಕಾರವು ಪರ್ಯಾಯ ತನಿಖೆ ಅಥವಾ ಆದೇಶ ಮಾಡುವಂತಿಲ್ಲ. ಈ ಆದೇಶವು ಎಲ್ಲಾ ಪ್ರಾಧಿಕಾರಗಳಿಗೂ ಅನ್ವಯಿಸುತ್ತದೆ’ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿ ಸಿದಂತೆ ಕೋರಮಂಗಲದ ವಿಜಯನ್ ಮೆನನ್ ಸೇರಿ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು ಈ ಕುರಿತಂತೆ ವಿವರಿಸಿ,‘ರಾಜಕಾಲುವೆ ನಿರ್ವಹಣೆಗೆ ಸಂಬಂಧಿಸಿದಂತೆ ಮಹಾ ಲೇಖಪಾಲರ (ಸಿಎಜಿ) ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಕ್ಕೆ ಮೂವರು ಅಧಿಕಾರಿಗಳ ಸಮಿತಿ ಯನ್ನುಮಂಗಳವಾರದೊಳಗೆ (ಸೆ.20) ರಚಿಸಬೇಕು’ ಎಂದು ಬಿಬಿಎಂಪಿಗೆ ತಾಕೀತು ಮಾಡಿತು.

‘2021ರ ಸೆಪ್ಟೆಂಬರ್‌ನಲ್ಲೇ ಸಿಎಜಿ ವರದಿ ನೀಡಿದೆ. ಆ ವರದಿ ಆಧರಿಸಿ ಬಿಬಿಎಂಪಿ ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಮೂವರು ಸದಸ್ಯರ ಸಮಿತಿಯು ಸಿಎಜಿ ವರದಿಯ ಶಿಫಾರಸುಗಳ ಜಾರಿಗೆ ಕೈಗೊಂಡ ಕ್ರಮಗಳ ಬಗ್ಗೆ 15 ದಿನಗಳಿಗೊಮ್ಮೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಈ ನಿರ್ದೇಶನ ಉಲ್ಲಂಘಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಎಚ್ಚರಿಕೆ ನೀಡಿತು.

‘ರಸ್ತೆ ಗುಂಡಿಗಳ ಕುರಿತಾದ ದೂರುಗಳನ್ನು ಪರಿಹರಿಸಿದ ನಂತರ ಪೋಟೋಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ದೂರು ಪರಿಹಾರ ವ್ಯವಸ್ಥೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮ ಗಾರಿಯ ಅನುಪಾಲನಾ ವರದಿ ಮತ್ತು ಫೋಟೊ ಗಳನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿದ ನ್ಯಾಯಪೀಠವುವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿ, ‘ನಗರದಲ್ಲಿ ಇದೇ 16ರ ವರೆಗೆ ಒಟ್ಟು 2,626 ಕಡೆ ರಾಜಕಾಲುವೆ ಒತ್ತುವರಿ ಗುರುತಿಸಲಾಗಿದೆ. ಅವುಗಳ ಪೈಕಿ 2,024 ಒತ್ತುವರಿ ತೆರವುಗೊಳಿಸಲಾಗಿದೆ. ಉಳಿದ 602 ಒತ್ತುವರಿಗಳ ತೆರವು ಕಾರ್ಯ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.

ಅಸಮಾಧಾನ: ‘ಮಳೆನೀರು ಪ್ರವಾಹದಿಂದ ಸಾರ್ವಜನಿಕರು ಎದುರಿ ಸುತ್ತಿರುವ ಸಮಸ್ಯೆ ಬಗೆಹರಿಸಲು ಕುಂದು ಕೊರತೆ ಪರಿಹಾರ ಕೇಂದ್ರದ ವೆಬ್‌ಸೈಟ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ‘ ಎಂದು ನ್ಯಾಯಪೀಠ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದೆ.

‘602 ಗುಂಡಿಗಳು ಬಾಕಿ’
‘ಇದೇ 14ರವರೆಗೆ ನಗರದಾದ್ಯಂತ ಪ್ರಮುಖ ರಸ್ತೆಗಳ 2,010 ಗುಂಡಿ ಗಳನ್ನು ಮುಚ್ಚಲಾಗಿದ್ದು, ಇನ್ನೂ 221 ಗುಂಡಿಗಳನ್ನು ಭರ್ತಿ ಮಾಡಬೇಕಿದೆ. ಅವುಗಳನ್ನು ಮುಂದಿನ ಹತ್ತು ದಿನಗಳಲ್ಲಿ ಹಾಟ್‌ಮಿಕ್ಸ್ ಬಳಸಿ ಮುಚ್ಚಲಾ ಗುವುದು’ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

‘ಪ್ರಮುಖ ರಸ್ತೆಗಳ 427.12 ಕಿ.ಮೀ ರಸ್ತೆ ರಿಪೇರಿ ಮತ್ತು ಡಾಂಬರೀಕರಣ ಕಾರ್ಯಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ 2023ರ ಜನವರಿ 31ರೊಳಗೆ ಪೂರ್ಣಗೊಳ್ಳಲಿದೆ. ಪಾಲಿಕೆಯ ಎಂಟು ವಲಯಗಳ ವಾರ್ಡ್ ಮಟ್ಟದಲ್ಲಿ ಒಟ್ಟು 2,500 ಕಿ.ಮೀ ರಸ್ತೆಗಳ ಗುಂಡಿ ಮುಚ್ಚುವ, ರಸ್ತೆ ರಿಪೇರಿ ಮತ್ತು ಡಾಂಬರೀಕರಣ ಕಾರ್ಯವನ್ನು 2023ರ ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸಲಾಗುವುದು’ ಎಂದು ವಿವರಿಸಿದರು.

**

ನಗರದ ಸಾಕಷ್ಟು ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿವೆ. ಇವುಗಳಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯವಿದೆ. ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಗುಂಡಿಮುಕ್ತ ರಸ್ತೆಗಳನ್ನು ಹೊಂದುವ ಹಕ್ಕು ನಾಗರಿಕರಿಗೆ ಇದೆ.
-ಅಲೋಕ್‌ ಆರಾಧೆ, ಹಂಗಾಮಿ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT