ಶುಕ್ರವಾರ, ಆಗಸ್ಟ್ 23, 2019
25 °C

ಬರಪೀಡಿತವಾಗಿದ್ದ ಪ್ರದೇಶಗಳ ವಿವರ ಕೇಳಿದ ಹೈಕೋರ್ಟ್‌

Published:
Updated:

ಬೆಂಗಳೂರು: ‘ಪ್ರವಾಹ ಪೀಡಿತ ಎಂದು ಘೋಷಿಸಲಾಗಿರುವ ತಾಲ್ಲೂಕುಗಳಲ್ಲಿಬರಪೀಡಿತ ಎಂದು ಈ ಮೊದಲು ಘೋಷಿಸಿದ್ದ ತಾಲ್ಲೂಕುಗಳು ಎಷ್ಟಿವೆ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಗೋಶಾಲೆ ಮತ್ತು ಮೇವು ವ್ಯವಸ್ಥೆ ಮಾಡುವಂತೆ ನಿರ್ದೇಶಿಸಬೇಕು’ ಎಂದು ಕೋರಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದ ಎ.ಮಲ್ಲಿಕಾರ್ಜುನ ಹಾಗೂ ಸಾರ್ವಜನಿಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಸದ್ಯ ರಾಜ್ಯದಲ್ಲಿ 80 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ‍ಪ್ರದೇಶ ಎಂದು ಘೋಷಿಸಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಹೈಕೋರ್ಟ್ ಆದೇಶದ ಅನುಸಾರ ಈವರೆವಿಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಿದರು.

ವರದಿ ಪರಿಶೀಲಿಸಿದ ನ್ಯಾಯಪೀಠ, ‘ಬರಪೀಡಿತ ತಾಲ್ಲೂಕುಗಳಲ್ಲಿ ಗೋಶಾಲೆ ತೆರೆಯುವ ಹಾಗೂ ಜಾನುವಾರುಗಳಿಗೆ ಮೇವು ಪೂರೈಸುವ ದಿಸೆಯಲ್ಲಿ
ಕಳೆದ ತಿಂಗಳ 22ರಂದು ನೀಡಲಾಗಿರುವ ಆದೇಶವನ್ನು ಏಕೆ ಪಾಲನೆ ಮಾಡಿಲ್ಲ. ಸರ್ಕಾರ ತನ್ನ ಮನಸ್ಸಿಗೆ ತೋಚಿದಂತೆ ನಡೆದುಕೊಂಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ಬರಪೀಡಿತ ತಾಲ್ಲೂಕುಗಳಲ್ಲಿಗೋಶಾಲೆ ತೆರೆಯಲಾಗಿದೆಯೇ ಮತ್ತು ಜಾನುವಾರುಗಳಿಗೆ ಸೂಕ್ತ ಪ್ರಮಾಣದಲ್ಲಿ ಆಹಾರ ಪೂರೈಸಲಾಗುತ್ತಿದೆಯೇ ಎಂಬ ಬಗ್ಗೆ ವಿವರವಾದ ಪ್ರಮಾಣಪತ್ರ ಸಲ್ಲಿಸಿ’ ಎಂದು ತಾಕೀತು ಮಾಡಿತು. ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಲಾಗಿದೆ.

‘ರಾಜ್ಯದ ವಿವಿಧೆಡೆ ಸ್ಥಾಪಿಸಿರುವ 109 ಗೋಶಾಲೆಗಳಲ್ಲಿ, ಹೈಕೋರ್ಟ್ ಆದೇಶದಂತೆ ಮೇವು ಪೂರೈಕೆ ಮಾಡಲಾಗುತ್ತಿದೆಯೇ ಇಲ್ಲವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ಸ್ವತಂತ್ರ ಸಂಸ್ಥೆಯಿಂದ ತಪಾಸಣೆ ಮಾಡಿಸಬೇಕಾಗುತ್ತದೆ’ ಎಂದೂ ನ್ಯಾಯಪೀಠ ಸರ್ಕಾರಕ್ಕೆ ಎಚ್ಚರಿಸಿದೆ.

Post Comments (+)