ಅಕ್ರಮ ಕಟ್ಟಡ ನಿರ್ಮಾಣ: ₹ 50 ಲಕ್ಷ ಠೇವಣಿಗೆ ಆದೇಶ

7

ಅಕ್ರಮ ಕಟ್ಟಡ ನಿರ್ಮಾಣ: ₹ 50 ಲಕ್ಷ ಠೇವಣಿಗೆ ಆದೇಶ

Published:
Updated:

ಬೆಂಗಳೂರು: ‘ನಕ್ಷೆ ಮಂಜೂರಾತಿ ಪಡೆಯದೆ ಅಕ್ರಮವಾಗಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಿರುವ ಹಾಸನ ನಗರದ ಲೀಲಾಕುಮಾರ್ ಒಂದು ತಿಂಗಳಿನಲ್ಲಿ ₹ 50 ಲಕ್ಷ ಮೊತ್ತವನ್ನು ರಿಜಿಸ್ಟ್ರಾರ್ ಜನರಲ್‌ ಅವರಲ್ಲಿ ಠೇವಣಿ ಇರಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

‘ಹಾಸನ ನಗರದ ಕರೀಗೌಡ ಕಾಲೋನಿಯ ಲೀಲಾಕುಮಾರ್ ಅವರು, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಎಂಜಿನಿಯರ್ ನೀಡಿದ ಆರಂಭಿಕ ಪ್ರಮಾಣಪತ್ರ ಆಧರಿಸಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ’ ಎಂಬ ನಗರಸಭೆ ಆಯುಕ್ತರ ಹೇಳಿಕೆ ಅನುಸಾರ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತು ಆದೇಶಿಸಿದೆ.

‘ಹಣ ಪಾವತಿ ಮಾಡಿದ ಪುರಾವೆಯನ್ನು ಮುಂದಿನ ವಿಚಾರಣೆ ವೇಳೆಗೆ ನ್ಯಾಯಪೀಠಕ್ಕೆ ನೀಡಬೇಕು’ ಎಂದೂ ನಿರ್ದೇಶಿಸಲಾಗಿದೆ.

‘2016ರಿಂದ ಈ ಪ್ರಕರಣದ ಪ್ರಕ್ರಿಯೆಯಲ್ಲಿ ಭಾಗಿಯಾದ ನಗರಸಭೆಯ ಎಲ್ಲ ಅಧಿಕಾರಿಗಳ ಪಟ್ಟಿಯನ್ನು ಮುಂದಿನ ವಿಚಾರಣೆ ವೇಳೆಗೆ ನೀಡಿ’ ಎಂದೂ ನ್ಯಾಯಪೀಠ ನಿರ್ದೇಶಿಸಿದೆ. ಅಲ್ಲದೇ, ‘ಅಕ್ರಮ ಕಟ್ಟಡ ನಿರ್ಮಾಣಕ್ಕೆ ನೆರವಾದ ಎಲ್ಲ ಅಧಿಕಾರಿಗಳೂ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಲ್ಲಿ ತಲಾ ₹ 5 ಸಾವಿರ ದಂಡ ಪಾವತಿಸಬೇಕು’ ಎಂದೂ ನ್ಯಾಯಪೀಠ ಆದೇಶಿಸಿದೆ.

ಇದೇ ವೇಳೆ ಅರ್ಜಿದಾರರು, ‘ಏಳು ಮಹಡಿಯ ಕಟ್ಟಡದಲ್ಲಿ ಮೂರು ಅಂತಸ್ತುಗಳನ್ನು ಕೆಡವಲಾಗುವುದು’ ಎಂದು ನ್ಯಾಯಪೀಠಕ್ಕೆ ಮುಚ್ಚಳಿಕೆ ನೀಡಿದ್ದಾರೆ.

‘ನಗರಸಭೆ ಅಧಿಕಾರಿಗಳು ಕಟ್ಟಡ ಕೆಡವಿದ ವಿಡಿಯೊ ಹಾಗೂ ಫೋಟೊಗ್ರಾಫ್‌ಗಳನ್ನು ದಾಖಲಿಸಿಕೊಳ್ಳಬೇಕು’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ವಿಚಾರಣೆಯನ್ನು ನವೆಂಬರ್‌ 11ಕ್ಕೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !