ಮಂಗಳವಾರ, ನವೆಂಬರ್ 12, 2019
27 °C

ಭದ್ರಾ ಕಾಲುವೆ: ಅಕ್ರಮ ಪಂಪ್‌ಸೆಟ್ ತೆರವಿಗೆ ಹೈಕೋರ್ಟ್‌ ನಿರ್ದೇಶನ

Published:
Updated:

ಬೆಂಗಳೂರು: ‘ಭದ್ರಾ ಜಲಾಶಯದ ಬಲದಂಡೆ ಮುಖ್ಯ ಕಾಲುವೆಯ ದಾವಣಗೆರೆ ಹಾಗೂ ಮಲೇಬೆನ್ನೂರು ಶಾಖಾ ಕಾಲುವೆಗಳಲ್ಲಿ ಅಕ್ರಮವಾಗಿ ಅಳವಡಿಸಲಾಗಿರುವ ಪಂಪ್‌ಸೆಟ್, ಡೀಸೆಲ್ ಜನರೇಟರ್ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತಂತೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆಯ ಎಂ. ತಿಪ್ಪೇರುದ್ರಪ್ಪ ಸೇರಿದಂತೆ ಏಳು ಜನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಲೇವಾರಿ ಮಾಡಿದೆ.

‘ಅರ್ಜಿದಾರರು ಸಲ್ಲಿಸುವ ಮನವಿ ಆಧರಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಿ’ ಎಂದು ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ನ್ಯಾಯಪೀಠ ನಿರ್ದೇಶಿಸಿದೆ.

ಆಕ್ಷೇಪಣೆ ಏನು?: ‘ಕಾಲುವೆಯಲ್ಲಿ ಅಕ್ರಮವಾಗಿ ನೀರೆತ್ತುವುದರಿಂದ ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದ ಅಂಚಿನ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ. ಇದರಿಂದಾಗಿ ರೈತರು ಕಷ್ಟ ಎದುರಿಸುತ್ತಿದ್ದಾರೆ. ಅಚ್ಚುಕಟ್ಟು ಅಂಚಿನ ಪ್ರದೇಶಗಳಿಗೆ ನೀರು ಬರುವುದನ್ನು ತಡೆಯುತ್ತಿರುವವರು ರಾಜಕೀಯ ಪ್ರಭಾವಿಗಳಾಗಿದ್ದರೆ. ಈ ಕುರಿತಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅರ್ಜಿದಾರರು ದೂರಿದ್ದರು. ಅರ್ಜಿದಾರರ ಪರ ಬಿ.ಎಂ.ಹಾಲಸ್ವಾಮಿ ವಾದ ಮಂಡಿಸಿದರು.

 

ಪ್ರತಿಕ್ರಿಯಿಸಿ (+)