ಬಿಬಿಎಂಪಿ ವಿರುದ್ಧ ಹೈಕೋರ್ಟ್‌ ಗರಂ

7
ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಗೆ ₹ 25 ಸಾವಿರ ದಂಡ

ಬಿಬಿಎಂಪಿ ವಿರುದ್ಧ ಹೈಕೋರ್ಟ್‌ ಗರಂ

Published:
Updated:
ನ್ಯಾಯಮೂರ್ತಿ ಬಿ.ವೀರಪ್ಪ

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜನರಿಗಾಗಿ ಇರುವ ಜವಾಬ್ದಾರಿಯುತ ಸಾಂಸ್ಥಿಕ ಸಂಸ್ಥೆ. ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಲು ನಿರ್ಲಕ್ಷ್ಯ ತೋರುತ್ತಿದ್ದು ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್‌ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾದ ಆರೋಪದಡಿ ಬಿಬಿಎಂಪಿಯ ಸಹಾಯಕ ಕಂದಾಯ ಅಧಿಕಾರಿಗೆ ₹ 25 ಸಾವಿರ ದಂಡ ವಿಧಿಸಿದೆ.

ಆಸ್ತಿ ತೆರಿಗೆ ಚಲನ್‌ನಲ್ಲಿ ವಾರಸುದಾರರ ಹೆಸರು ನಮೂದಿಸದೆ ಹಿಂದಿನ ಮಾಲೀಕರ ಹೆಸರು ನಮೂದಿಸಿದ್ದ ಕಾರಣಕ್ಕೆ ಮತ್ತು ‘ಹೆಸರು ಬದಲಾವಣೆಗೆ ಕಂಪ್ಯೂಟರ್ ಸಹಕರಿಸುತ್ತಿಲ್ಲ’ ಎಂಬ ಉಡಾಫೆ ಉತ್ತರ ನೀಡಿದ್ದ ಅಧಿಕಾರಿಗೆ ಚಾಟಿ ಬೀಸಿದೆ.

ಭರತ್‌ನಗರದ ಪ್ರಕೃತಿ ನಗರದ 2ನೇ ಹಂತದಲ್ಲಿರುವ 4ನೇ ಕ್ರಾಸ್‌ ನಿವಾಸಿ ವಕೀಲ ಎ.ಎಲ್‌.ಪ್ರೇಮ್‌ಕುಮಾರ್ ಅವರ ಅರ್ಜಿಯನ್ನು ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರನ್ನು ಸುಖಾಸುಮ್ಮನೆ ವರ್ಷಗಟ್ಟಲೆ ಅಲೆಯಿಸಿರುವ ಅಧಿಕಾರಿಗಳ ಮನೋಭಾವ ಅತ್ಯಂತ ಖಂಡನೀಯವಾಗಿದೆ’ ಎಂದು ಹೇಳಿದೆ.

ನಾಲ್ಕು ವಾರಗಳಲ್ಲಿ ₹ 25 ಸಾವಿರ ದಂಡವನ್ನು ಅರ್ಜಿದಾರರಿಗೆ ಪಾವತಿಸುವಂತೆ ಬಿಬಿಎಂಪಿಯ ಹಾರೋಹಳ್ಳಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗೆ ಆದೇಶಿಸಿದೆ.

ಪ್ರಕರಣವೇನು?: ‘ಅರ್ಜಿದಾರರು 2015–16 ಮತ್ತು 2016–17ರ ಆಸ್ತಿ ತೆರಿಗೆಯನ್ನು ಚೆಕ್‌ ಮುಖಾಂತರ ಪಾವತಿ ಮಾಡಿದ್ದಾರೆ. ಆದರೆ, ಅದರಲ್ಲಿ ಪ್ರೇಮ್‌ಕುಮಾರ್ ಹೆಸರು ನಮೂದು ಮಾಡದೆ, ಪ್ರೇಮ್‌ಕುಮಾರ್ ಆಸ್ತಿ ಖರೀದಿ ಮಾಡಿದ ಮಾಲೀಕರ ಹೆಸರನ್ನು ನಮೂದಿಸಿ ಚಲನ್‌ ನೀಡಲಾಗಿದೆ. ಈ ಕುರಿತು ಆಸ್ತಿ ತೆರಿಗೆ ಕಾಲಂನಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡುವಂತೆ ಪ್ರೇಮ್‌ಕುಮಾರ್ ಕೋರಿದ್ದ ಮನವಿಯನ್ನು ಬಿಬಿಎಂಪಿ ಅಧಿಕಾರಿಗಳು ಕಡೆಗಣಿಸಿದ್ದಾರೆ’ ಎಂದು ನ್ಯಾಯಪೀಠ ಕಿಡಿ ಕಾರಿದೆ.

‘ಪ್ರೇಮ್‌ಕುಮಾರ್ 2013ರಲ್ಲೇ ಆಸ್ತಿ ಖರೀದಿ ಮಾಡಿದ್ದಾರೆ. ಹೆಸರು ಬದಲಾವಣೆ ಕೋರಿ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ತಮ್ಮ ತಪ್ಪನ್ನು ಸರಿಪಡಿಸುವಲ್ಲಿ ವಿಫಲವಾಗಿದ್ದಾರೆ. ಅರ್ಜಿದಾರರು ವಿನಾಕಾರಣ ಕೋರ್ಟ್‌ಗೆ ಅಲೆದಾಡುವಂತೆ ಮಾಡಿದ್ದಾರೆ. ಇದು ಅಧಿಕಾರಿಗಳ ನಡತೆ ಮತ್ತು ಅವರ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.

ಮಾನವ ಕಂಪ್ಯೂಟರ್‌ ನಿರ್ಮಿಸಿದ್ದಾನೆಯೇ ಹೊರತು ಕಂಪ್ಯೂಟರ್ ಅವನನ್ನು ನಿರ್ಮಿಸಿಲ್ಲ. ಹಾಗಾಗಿ ಮನುಷ್ಯನ ಮಾತನ್ನು ಕಂಪ್ಯೂಟರ್ ಪಾಲಿಸಬೇಕಲ್ಲವೇ...?
–ಬಿ.ವೀರಪ್ಪ, ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !