ಸೋಮವಾರ, ಮೇ 10, 2021
19 °C

ಜೋಪಡಿಗಳ ನೆಲಸಮ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆಗಾಗಿ ನಗರದ ಕರಿಯಮ್ಮನ ಅಗ್ರಹಾರ, ದೇವರಬೀಸನಹಳ್ಳಿ, ಕುಂದನಹಳ್ಳಿ ಹಾಗೂ ಬೆಳ್ಳಂದೂರು ವ್ಯಾಪ್ತಿಯ ಜೋಪಡಿಗಳನ್ನು ನೆಲಸಮ ಮಾಡಿರುವ ಬಗ್ಗೆ ಕೂಲಂಕಷ ಪ್ರಮಾಣ ಪತ್ರ ಸಲ್ಲಿಸಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಈ ಕುರಿತಂತೆ ಪೀಪಲ್ಸ್ ಯೂನಿ ಯನ್ ಫಾರ್‌ ಸಿವಿಲ್ ಲಿಬರ್ಟೀಸ್‌ (ಪಿಯುಸಿ ಎಲ್) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ತೆರವು ಕಾರ್ಯಾಚರಣೆ ನಡೆಸಿದ ಪ್ರದೇಶದಲ್ಲಿ ವಾಸ ಮಾಡುತ್ತಿದ್ದವರನ್ನು ಅಕ್ರಮ ವಲಸಿಗರು ಎಂದು ಹೇಗೆ ನಿರ್ಧರಿಸಲಾಯಿತು, ಅದಕ್ಕಿರುವ ದಾಖಲೆಗಳೇನು, ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಯಾರು, ನೋಟಿಸ್ ಕೊಟ್ಟವರು ಯಾರು ಮತ್ತು ಯಾವ ಕಾಯ್ದೆಯಡಿ ಅಧಿಕಾರ ಚಲಾಯಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂಬುದನ್ನು ಸವಿವರವಾಗಿ ಪ್ರಮಾಣಪತ್ರದ ಮೂಲಕ ಸಲ್ಲಿಸಿ’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ನೋಟಿಸ್‌: ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಮತ್ತು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಮಾರತ್ತಹಳ್ಳಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ. ಮುಂದಿನ ತೆರವು ಕಾರ್ಯಾಚರಣೆಗೆ ಮಧ್ಯಂತರ ತಡೆ ಆದೇಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿದೆ.

ದೂರು: ‘ತೆರವು ಮಾಡಲಾಗಿರುವ ಪ್ರದೇಶದಲ್ಲಿದ್ದವರಿಗೆ ತರಾತುರಿಯಲ್ಲಿ ನೋಟಿಸ್ ನೀಡಿ ಬಲವಂತದಿಂದ ಕಾರ್ಯಾಚರಣೆ ನಡೆಸಿ ಜೋಪಡಿ ಗಳನ್ನು ನೆಲಸಗೊಳಿಸಲಾಗಿದೆ’ ಎಂಬುದು ಅರ್ಜಿದಾರರ ದೂರು.

ಮನವಿ: ‘ತೆರವುಗೊಳಿಸಲು ಬಿಬಿ ಎಂಪಿ ಹಾಗೂ ಪೊಲೀಸರು ನೀಡಿದ ನೋಟಿಸ್‌ಗಳನ್ನು ರದ್ದುಪಡಿಸಬೇಕು. ಮಾರತ್ತಹಳ್ಳಿ ಠಾಣಾ ಇನ್‌
ಸ್ಪೆಕ್ಟರ್‌ಗೂ ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ಸೂರು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡ ಲಾಗಿದೆ.

ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 151ರ ಮಂತ್ರಿ ಇಸ್ಪಾನ್ ಅಪಾರ್ಟ್‌ಮೆಂಟ್ ಬಳಿಯ ಕರಿಯಮ್ಮನ ಅಗ್ರಹಾರ ವ್ಯಾಪ್ತಿಯಲ್ಲಿ ಇದೇ 18 ಹಾಗೂ ಕುಂದಲಹಳ್ಳಿ ವ್ಯಾಪ್ತಿಯಲ್ಲಿ 19ರಂದು ನೂರಾರು ಜೋಪಡಿಗಳನ್ನು ನೆಲಸಮಗೊಳಿಸಲಾಗಿದೆ.‘ಜೋಪಡಿಗಳಲ್ಲಿ ಬಾಂಗ್ಲಾದ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದರು. ಆದ್ದರಿಂದ ತೆರವು ಮಾಡಲಾಗಿದೆ’ ಎಂಬುದು ಅಧಿಕಾರಿಗಳ ಹೇಳಿಕೆ.

*
ಮಧ್ಯಂತರ  ವರದಿ ಸಲ್ಲಿಕೆ
ಬೆಂಗಳೂರು:
 ಬೆಳ್ಳಂದೂರು ವಾರ್ಡ್‌ನ ಕರಿಯಮ್ಮನ ಅಗ್ರಹಾರ ಗ್ರಾಮದಲ್ಲಿ ನೂರಕ್ಕೂ ಅಧಿಕ ಜೋಪಡಿ ಗಳನ್ನು ತೆರವುಗೊಳಿಸಿದ ಸಂಬಂಧ ವಿಚಾರಣೆ ನಡೆಸಿರುವ ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾಚಲಪತಿ ಅವರು ಈ ಸಂಬಂಧ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರಿಗೆ ಬುಧವಾರ ಮಧ್ಯಂತರ ವರದಿ ಸಲ್ಲಿಸಿದ್ದಾರೆ.

ಘಟನೆ ಕುರಿತು ಸಮಗ್ರ ವರದಿ ಸಲ್ಲಿಸಲು 3 ದಿನಗಳ ಕಾಲಾವಕಾಶ ಕೇಳಿದ್ದಾರೆ. ಜೋಪಡಿಗಳನ್ನು ತೆರವುಗೊಳಿಸಿದ ಬಗ್ಗೆ 24 ತಾಸುಗಳಲ್ಲಿ ವರದಿ ನೀಡುವಂತೆ ಪಾಲಿಕೆ ಆಯುಕ್ತರು ಜಂಟಿ ಆಯುಕ್ತರಿಗೆ ಸೋಮವಾರ ಸೂಚನೆ ನೀಡಿದ್ದರು.

‘ಇದುವರೆಗಿನ ಬೆಳವಣಿಗೆ ಬಗ್ಗೆ ಜಂಟಿ ಆಯುಕ್ತರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದು ಕೇವಲ ದಾಖಲಾತಿಗಳ ಆಧಾರದಲ್ಲಿ ಸಲ್ಲಿಸಿದ ವರದಿ. ಇನ್ನು ಮೂರು ದಿನಗಳಲ್ಲಿ ಅವರು ಸಮಗ್ರ ವರದಿ ಸಲ್ಲಿಸಲಿದ್ದಾರೆ’ ಎಂದು ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೋಪಡಿಗಳ ನಿವಾಸಿಗಳು ನೈರ್ಮಲ್ಯ ಕಾಪಾಡುತ್ತಿಲ್ಲ ಎಂಬ ಹಿಂದೆಯೂ ದೂರು ಬಂದಿತ್ತು. ಜೋಪಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದವರಿಗೆ ಈ ಬಗ್ಗೆ 2018ರಲ್ಲೇ ನೋಟಿಸ್‌ ನೀಡಲಾಗಿತ್ತು. ನೈರ್ಮಲ್ಯ ಕಾಪಾಡದಿದ್ದರೆ ಜೋಪಡಿಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದೂ ಮಾಲೀಕರಿಗೆ ಸೂಚನೆ ನೀಡಲಾಗಿತ್ತು ಎಂಬ ಅಂಶವನ್ನು ಜಂಟಿ ಆಯುಕ್ತರು ವರದಿಯಲ್ಲಿ ಉಲ್ಲೇಖಿಸಿದ್ದಾರೆ’ ಎಂದರು.

‘ಮಾರತ್ತಹಳ್ಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌  ನಾರಾಯಣಸ್ವಾಮಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆಯೇ ಜೋಪಡಿಗಳನ್ನು ತೆರವುಗೊಳಿಸುವ ಬಗ್ಗೆ ಇದೇ 18ರಂದು ಪೊಲೀಸ್‌ ಇಲಾಖೆಗೆ ಪತ್ರ ಬರೆದದ್ದು ನಿಜ. ಜೋಪಡಿಗಳನ್ನು ತೆರವುಗೊಳಿಸುವಾಗ ರಕ್ಷಣೆ ಕೊಡಿ ಎಂದು ಕೋರಿದ್ದು ನಿಜ. ಆದರೆ, ಯಾವ ದಿನ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂಬ ಬಗ್ಗೆ ಅವರು ಆ ಪತ್ರದಲ್ಲಿ ನಮೂದಿಸಿರಲಿಲ್ಲ ಎಂದು ಜಂಟಿ ಆಯುಕ್ತರು ವರದಿಯಲ್ಲಿ ತಿಳಿಸಿದ್ದಾರೆ’ ಎಂದು ಆಯುಕ್ತರು ಮಾಹಿತಿ ನೀಡಿದರು.

‘ಎಇಇ ಅವರನ್ನು ಈಗಾಗಲೇ ಮಾತೃ ಇಲಾಖೆಗೆ ಕಳುಹಿಸಿದ್ದೇವೆ. ಸಮಗ್ರ ವರದಿ ಕೈಸೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪುನರ್ವಸತಿ– ಪಾಲಿಕೆ ಮೌನ: ಮನೆ ಕಳೆದುಕೊಂಡು ಬೀದಿಪಾಲಾದವರ ಪುನರ್ವಸತಿ ಬಗ್ಗೆ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಬೆಳ್ಳಂದೂರು ವಲಯದ ವಿಶೇಷ ಆಯುಕ್ತ ಡಿ.ರಂದೀಪ್‌, ‘ಸದ್ಯಕ್ಕಂತೂ ನಾವು ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಜೋಪಡಿ ತೆರವುಗೊಳಿಸದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇದರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬಿಬಿಎಂಪಿ ವ್ಯಾಪ್ತಿಯ ರಾತ್ರಿ ನಿರ್ವಸಿತರ ಕೇಂದ್ರಗಳಲ್ಲಿ ಪುನರ್ವಸತಿ ಕಲ್ಪಿಸಬಹುದಲ್ಲವೇ ಎಂಬ ಪ್ರಶ್ನೆಗೆ, ‘ಮಹದೇವಪುರದಲ್ಲಿ ಅಂತಹ ಕೇಂದ್ರಗಳಿಲ್ಲ’ ಎಂದರು.

ನನಗೆ ಮಾಹಿತಿ ನೀಡಿಲ್ಲ: ಮೇಯರ್ 
‘ಬೆಳ್ಳಂದೂರಿನಲ್ಲಿ  ಜೋಪಡಿ ನೆಲಸಮ ಮಾಡಿದ ಬಗ್ಗೆ ಯಾವ ಅಧಿಕಾರಿಯೂ ನನಗೆ ಮಾಹಿತಿ ನೀಡಿಲ್ಲ’ ಎಂದು ಮೇಯರ್‌ ಎಂ.
ಗೌತಮ್‌ಕುಮಾರ್‌ ಹೇಳಿದರು.

‘ಎಇಇಯನ್ನು ಮಾತೃ ಇಲಾಖೆಗೆ ವಾಪಸ್‌ ಕಳಿಸಿದ ಬಳಿಕ ಆಯುಕ್ತರು ಈ ಬಗ್ಗೆ ನನ್ನ ಗಮನಕ್ಕೆ ತಂದರು. ಈ ಕ್ರಮ ಸರಿಯಲ್ಲ. ಅವರ ವಿರುದ್ಧ ಪಾಲಿಕೆ ಕ್ರಮಕೈಗೊಳ್ಳಬೇಕಿತ್ತು ಎಂದು ನಾನು ಅವರಿಗೆ ಹೇಳಿದ್ದೇನೆ’ ಎಂದರು.

ಎಇಇ ರಾಜಕೀಯ ಒತ್ತಡದಿಂದ ಈ ನಿರ್ಧಾರ ಕೈಗೊಂಡಿದ್ದರು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್‌, ‘ನಮ್ಮ ಗಮನಕ್ಕೆ ತಾರದೆಯೇ ಈ ನಿರ್ಧಾರ ಕೈಗೊಳ್ಳ ಲಾಗಿದೆ. ನೂರಾರು ಮನೆಗಳನ್ನು ನೆಲಸಮ ಮಾಡುವ ಬಗ್ಗೆ ಕಿರಿಯ ಅಧಿಕಾರಿ ಹೇಗೆ ತಾನೆ ನಿರ್ಧಾರ ಕೈಗೊಳ್ಳಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಇಷ್ಟೊಂದು ಮನೆಗಳು ನೆಲಸಮವಾಗು ವಾಗ ಮಹದೇವಪುರ ವಲಯದ ಜಂಟಿ ಆಯುಕ್ತರು ಏನು ಮಾಡುತ್ತಿದ್ದರು? ಪ್ರತಿ ಹಂತದಲ್ಲೂ ಜನಪ್ರತಿನಿಧಿಗಳನ್ನು ಕತ್ತಲಲ್ಲಿ ಇಡಲಾಗುತ್ತಿದೆ. ಜ.27ರಂದು ನಡೆಯುವ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು