ಮಂಗಳವಾರ, ಫೆಬ್ರವರಿ 25, 2020
19 °C

ಎಸಿಬಿ ತನಿಖೆ ಪಾರದರ್ಶಕ ಇರೋದಿಲ್ಲ: ಲೋಕಾಯುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಪಾರದರ್ಶಕ ತನಿಖೆ ನಡೆಸುವುದಿಲ್ಲ. ಈ ಸಂಸ್ಥೆಯನ್ನು ಆಡಳಿತಾರೂಢ ಪಕ್ಷವು ತನ್ನ ರಾಜಕೀಯಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ’ ಎಂದು ಲೋಕಾಯುಕ್ತ ಹೈಕೋರ್ಟ್‌ಗೆ ತಿಳಿಸಿದೆ.

ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ‌ ವಿಭಾಗೀಯ ನ್ಯಾಯಪೀಠ ಶನಿವಾರ ವಿಚಾರಣೆ‌ ಮುಂದುವರಿಸಿತು.

ವಿಚಾರಣೆ ವೇಳೆ ಲೋಕಾಯುಕ್ತ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ರಾಜ್ಯದಲ್ಲಿ ಬಹಳ ಹಿಂದೆಯೇ ಜಾರಿಗೆ ಬಂದಿರುವ ಲೋಕಾಯುಕ್ತ ಸಂಸ್ಥೆಯನ್ನು ಈಗ ದುರ್ಬಲಗೊಳಿಸಲಾಗಿದೆ. ಎಸಿಬಿ ರಚನೆ ಮಾಡುವಾಗ ಸೌಜನ್ಯಕ್ಕೂ ನಮ್ಮ ಅಭಿಪ್ರಾಯ ಕೇಳಿಲ್ಲ’ ಎಂದರು.

‘ಎಸಿಬಿ ಮೇಲ್ನೋಟಕ್ಕೆ ಕಾಣುವಷ್ಟು ಸಲೀಸಾಗಿಲ್ಲ. ಇದರ ರಚನೆಯ ಹಿಂದೆ ಬೇರೆಯದೇ ಆದ ಉದ್ದೇಶಗಳಿವೆ’ ಎಂಬ ಅನುಮಾನ ವ್ಯಕ್ತಪಡಿಸಿದರು.

ಲೋಕಾಯುಕ್ತ ಪರ ವಕೀಲ ವೆಂಕಟೇಶ ಎಸ್‌.ಅರಬಟ್ಟಿ ಹೆಚ್ಚುವರಿ ಹೇಳಿಕೆ ಸಲ್ಲಿಸಿದರು.

ಹೇಳಿಕೆಯಲ್ಲಿ ಏನಿದೆ?:

* ಎಸಿಬಿ ತನಿಖೆಯು ಗೃಹ ಇಲಾಖೆ ಅಧೀನದಲ್ಲಿ ಕೆಲಸ ಮಾಡುವುದರಿಂದ ಇಲ್ಲಿ ಪಾರದರ್ಶನಕ ತನಿಖೆ ನಿರೀಕ್ಷೆ ಸಾಧ್ಯವಿಲ್ಲ.

* ಎಸಿಬಿ ರಚನೆ ಹಿಂದಿನ ಉದ್ದೇಶ ಬೇರೆಯೇ ಇದೆ.

* ಇಲ್ಲಿ ದಾಖಲಾಗುವ ದೂರುಗಳು ಪ್ರತೀಕಾರ ಮನೋಭಾವದಿಂದ ಕೂಡಿರುತ್ತವೆ.

* ತನಿಖೆಯೇ ಮೇಲೆ ರಾಜಕೀಯ ಶಕ್ತಿಗಳು ಪ್ರಭಾವ ಬೀರುವ ಅನುಮಾನಗಳಿವೆ.

* ಲೋಕಾಯುಕ್ತರನ್ನು ರಾಜ್ಯಪಾಲರ ಸಲಹೆಯ ಅನುಸಾರ ಮುಖ್ಯಮಂತ್ರಿಗಳು ನೇಮಕ ಮಾಡುತ್ತಾರೆ.

* ನೇಮಕಕ್ಕೂ ಮುನ್ನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ವಿರೋಧ ಪಕ್ಷದ ನಾಯಕ ಹಾಗೂ ವಿಧಾನಸಭಾಧಕ್ಷರ ಸಲಹೆ ಪಡೆಯಲಾಗಿರುತ್ತದೆ.

* ಹೀಗಾಗಿ ಲೋಕಾಯುಕ್ತದಲ್ಲಿ ಯಾವುದೇ ಸಂದೇಹಗಳಿಗೆ ಆಸ್ಪದ ಇರುವುದಿಲ್ಲ.

* ಈ ಸಂಸ್ಥೆಯು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ತನಿಖೆಯು ನಿಷ್ಪಕ್ಷಪಾತವಾಗಿಯೂ ಇರುತ್ತದೆ.

ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು