ವಿವರ ಪರಿಶೀಲಿಸಬೇಕಾದೀತು: ಹೈಕೋರ್ಟ್‌ ಎಚ್ಚರಿಕೆ

7
ಶಾಸಕರ ವೈದ್ಯಕೀಯ ವೆಚ್ಚ ಮರುಪಾವತಿ: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

ವಿವರ ಪರಿಶೀಲಿಸಬೇಕಾದೀತು: ಹೈಕೋರ್ಟ್‌ ಎಚ್ಚರಿಕೆ

Published:
Updated:
HIGH COURT

ಬೆಂಗಳೂರು: ‘ವೈದ್ಯಕೀಯ ಮರುಪಾವತಿ ವೆಚ್ಚವೆಂದು ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ಪಡೆಯುತ್ತಿರುವ ಮೊತ್ತದ ವಿವರವನ್ನು ಕೂಲಂಕಷವಾಗಿ ಪರಿಶೀಲಿಸಬೇಕಾದೀತು’ ಎಂದು ಹೈಕೋರ್ಟ್‌ ಎಚ್ಚರಿಸಿದೆ.

‘ನನ್ನ ವೈದ್ಯಕೀಯ ವೆಚ್ಚದ ಮೊತ್ತ ₹ 27,748 ನೀಡಲು ಆರೋಗ್ಯ ಇಲಾಖೆ ನಿರ್ದೇಶಕರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ ನೌಕರ ಬಸವರಾಜು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್‌.ಸುನಿಲ್ ಕುಮಾರ್, ‘ಅರ್ಜಿದಾರರ ಮನವಿಯನ್ನು ಪರಿಶೀಲಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ’ ಎಂದು ಆಕ್ಷೇಪಿಸಿದರು.

‘ಈ ಹಿಂದೆ ವಸತಿ ಸಚಿವರಾಗಿದ್ದ ನಟ ಎಂ.ಎಚ್‌.ಅಂಬರೀಷ್‌ ಸಿಂಗಾಪೂರ್‌ನ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆಯ ಮೊತ್ತವಾಗಿ ₹ 1.16 ಕೋಟಿ ಸರ್ಕಾರದಿಂದ ಪಡೆದಿದ್ದಾರೆ’ ಎಂದು ಅದರ ವಿವರಗಳನ್ನು ನ್ಯಾಯಪೀಠಕ್ಕೆ ಒದಗಿಸಿದರು.

‘ಅಂಬರೀಷ್‌ ಪ್ರಕರಣವನ್ನು, ಶಾಸಕರು, ಕರ್ನಾಟಕ ಮಂತ್ರಿಗಳ, ರಾಜ್ಯ ಮಂತ್ರಿಗಳ ಮತ್ತು ಉಪ ಮಂತ್ರಿಗಳ ವೈದ್ಯಕೀಯ ಹಾಜರಾತಿ ನಿಯಮಗಳು–1958ರ ನಿಯಮ 10ರ ಅಡಿಯಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿತ್ತು. ಇದರಲ್ಲಿ ಅಂಬರೀಷ್‌ ಪತ್ನಿ ಸುಮಲತಾ, ಮೈಸೂರು ಮೆಡಿಕಲ್‌ ಕಾಲೇಜು ವೈದ್ಯ ಡಾ.ಎಂ.ಎ.ಶೇಖರ್, ವಿಕ್ರಂ ಆಸ್ಪತ್ರೆಯ ಡಾ.ಕೆ.ಎಸ್.ಸತೀಶ್, ಡಾ.ಎನ್‌.ರಘುನಂದ ಹಾಗೂ ಅಂಬರೀಷ್‌ ಅವರ ಅಂದಿನ ಆಪ್ತ ಕಾರ್ಯದರ್ಶಿ ಎಂ.ಕೆ.ಕೆಂಪೇಗೌಡ ಅವರ ವೆಚ್ಚವೂ ಸೇರಿದೆ’ ಎಂಬ ದಾಖಲೆಗಳನ್ನು ನೀಡಿದರು.

ಈ ಮಾಹಿತಿ ಪರಿಶೀಲಿಸಿದ ನ್ಯಾಯಮೂರ್ತಿಗಳು ‘ಇದ್ಯಾವ ನ್ಯಾಯ’ ಎಂದು ಸರ್ಕಾರದ ಪರ ವಕೀಲ ಶ್ರೀನಿಧಿ ಅವರನ್ನು ಖಾರವಾಗಿ
ಪ್ರಶ್ನಿಸಿದರಲ್ಲದೆ, ‘ಅರ್ಜಿದಾರರ ₹27 ಸಾವಿರ ಮೊತ್ತವನ್ನು ನೀಡಲು ನಿಮಗೆ ತೊಂದರೆಯೇ. ಈ ಹಿಂದಿನ ವಿಚಾರಣೆ ವೇಳೆಯೇ ಅರ್ಜಿದಾರರ ಮನವಿಯನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು ಎಂದು ಕೋರ್ಟ್‌ಗೆ ಭರವಸೆ ನೀಡಿದ್ದಿರಿ. ಆದರೂ ಯಾಕೆ ಅರ್ಜಿ ಪರಿಶೀಲಿಸಿಲ್ಲ’ ಎಂದು ಅತೃಪ್ತಿ ವ್ಯಕ್ತಪಡಿಸಿದರು.

‘ಶಾಸಕರಿಗೆ ವೈದ್ಯಕೀಯ ವೆಚ್ಚ ಕೊಡಬೇಡಿ ಎಂದು ಕೋರ್ಟ್‌ ಹೇಳುತ್ತಿಲ್ಲ. ಆದರೆ, ಶಾಸಕರಿಗೊಂದು ಕಾನೂನು, ಬಡಬಗ್ಗರಿಗೊಂದು ಕಾನೂನು ಎಂದೇನಾದರೂ ಇದೆಯೇ’ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಶ್ರೀನಿಧಿ, ‘ಸರ್ಕಾರ ಖಂಡಿತಾ ಅರ್ಜಿದಾರರ ಮನವಿಯನ್ನು ಸಕಾರಾತ್ಮಕವಾಗಿ ಪರಿಶೀಲಿಸುತ್ತದೆ. ಸಮಯ ಕೊಡಿ’ ಎಂದು ಮನವಿ ಮಾಡಿದರು.

ಇದಕ್ಕೆ ತೃಪ್ತರಾಗದ ನ್ಯಾಯಮೂರ್ತಿಗಳು, ‘ಸಾಮಾನ್ಯ ಜನರು, ಬಡಬಗ್ಗರು, ನೊಂದವರನ್ನು ಯಾಕೆ ಕೋರ್ಟ್–ಕಚೇರಿಗೆ ಅಲೆಸುತ್ತೀರಿ. ಅವರು ಇಲ್ಲೀವರೆಗೂ ಬರಬಾರದು’ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ವಿಚಾರಣೆ ವೇಳೆಗೆ ‘ವೈದ್ಯಕೀಯ ವೆಚ್ಚವಾಗಿ ಯಾವ ಶಾಸಕರಿಗೆ ಎಷ್ಟು ಹಣ ನೀಡಿದ್ದೀರಿ, ಯಾವ ಕಾನೂನಿನ ಅಡಿ ನೀಡಿದ್ದೀರಿ ಎಂಬುದರ ವಿವರ ಒದಗಿಸಿ’ ಎಂದು ತಾಕೀತು ಮಾಡಿ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿದರು.

ಪ್ರಕರಣವೇನು ?: ಅರ್ಜಿದಾರ ಬಸವ
ರಾಜು, 2016ರ ಆಗಸ್ಟ್‌ ತಿಂಗಳಿನಲ್ಲಿ ಬಲಗಾಲಿನ ಗಂಭೀರ ತೊಂದರೆಗೆ ಒಳಗಾಗಿ ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಚಿಕಿತ್ಸೆಗೆ ಒಳಗಾಗಿದ್ದರು. 

‘ನಾನು ಚಿಕಿತ್ಸೆಗೆ ₹ 60,688 ವೆಚ್ಚ ಮಾಡಿದ್ದೆ. ಇದರಲ್ಲಿ ಆರೋಗ್ಯ ಇಲಾಖೆಯು ₹ 32,940 ಅನ್ನು ಮಾತ್ರ ನೀಡಿದೆ. ಉಳಿದ ಹಣ ನೀಡಲು ನಿರಾಕರಿಸಿದೆ. ಬಡವನಾಗಿರುವ ನನಗೆ ಉಳಿದ ಮೊತ್ತವನ್ನೂ ನೀಡಲು ನಿರ್ದೇಶಿಸಬೇಕು’ ಎಂದು
ಕೋರಿದ್ದಾರೆ.

ಶಾಸಕ ತಿಪ್ಪಾರೆಡ್ಡಿ ಹತ್ರ 20 ಸಾವಿರ ಇರಲಿಲ್ಲವೇ ?

ವಿಚಾರಣೆ ವೇಳೆ ಸುನಿಲ್ ಕುಮಾರ್, 2010ರಿಂದ 2015ರ ಅವಧಿಯಲ್ಲಿ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ವೈದ್ಯಕೀಯ ವೆಚ್ಚವೆಂದು ಪಡೆದಿರುವ ಸಂಪೂರ್ಣ ಮಾಹಿತಿಯನ್ನು ನ್ಯಾಯಪೀಠಕ್ಕೆ ನೀಡಿದರು.

ಇದನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಪಡೆದ ಹಣವನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು.

ಈ ಕುರಿತಂತೆ ಶ್ರೀನಿಧಿ ಅವರನ್ನು ಪ್ರಶ್ನಿಸಿದ ಅರವಿಂದ ಕುಮಾರ್, ‘ಅಲ್ಲಾರೀ, ತಿಪ್ಪಾರೆಡ್ಡಿ 2013ರ ಡಿಸೆಂಬರ್ 18ರಂದು ₹ 28,622 ಪಡೆದಿದ್ದಾರೆ. ಏನ್ರೀ ಅವರ ಹತ್ರ ಇಷ್ಟು ಹಣವೂ ಇರಲಿಲ್ಲವೇ’ ಎಂದು ಹುಬ್ಬೇರಿಸಿದರು.
**

ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇರಬೇಕು. ಇಲ್ಲದೇ ಹೋದರೆ ಜನರು ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಾರೆ.
–ಅರವಿಂದ ಕುಮಾರ್, ನ್ಯಾಯಮೂರ್ತಿ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !