ನಿಯಮಗಳ ವಿವರ ಕೇಳಿದ ಹೈಕೋರ್ಟ್‌

7
ಶಾಸಕರ ವೈದ್ಯಕೀಯ ವೆಚ್ಚ ಮರುಪಾವತಿ * ಜುಲೈ 10ಕ್ಕೆ ವಿಚಾರಣೆ ಮುಂದೂಡಿಕೆ

ನಿಯಮಗಳ ವಿವರ ಕೇಳಿದ ಹೈಕೋರ್ಟ್‌

Published:
Updated:

ಬೆಂಗಳೂರು: ‘ವೈದ್ಯಕೀಯ ಮರುಪಾವತಿ ವೆಚ್ಚಕ್ಕೆ ಸಂಬಂಧಿಸಿದಂತೆ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮತ್ತು ಸರ್ಕಾರಿ ನೌಕರರಿಗೆ ಅನ್ವಯಿಸುವ ನಿಯಮಗಳ ವಿವರ ಒದಗಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

‘ನನ್ನ ವೈದ್ಯಕೀಯ ವೆಚ್ಚದ ಮೊತ್ತ ₹ 27,748 ನೀಡಲು ಆರೋಗ್ಯ ಇಲಾಖೆ ನಿರ್ದೇಶಕರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ ನೌಕರ ಬಸವರಾಜು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್.ಪೊನ್ನಣ್ಣ, ‘ಈ ವಿಷಯದಲ್ಲಿ ಶಾಸಕರು ಮತ್ತು ಸರ್ಕಾರಿ ನೌಕರರನ್ನು ಏಕರೂಪದಲ್ಲಿ ಹೋಲಿಕೆ ಮಾಡುವಂತಿಲ್ಲ. ಇಬ್ಬರಿಗೂ ಇರುವ ನಿಯಮಗಳು ಬೇರೆಬೇರೆ. ಶಾಸಕರಿಗೆ ವಿಶೇಷ ನಿಯಮಗಳ ಅಡಿಯಲ್ಲಿ ವೆಚ್ಚ ಭರಿಸಲಾಗುತ್ತದೆ’ ಎಂದರು.

ಇದಕ್ಕೆ ಅರ್ಜಿದಾರರ ಪರ ವಕೀಲ ಎಚ್‌.ಸುನಿಲ್‌ಕುಮಾರ್, ‘ಸರ್ಕಾರದ ವಿವರಣೆ ಅರ್ಜಿದಾರರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಗೆ ಅವಕಾಶ ಮಾಡಿಕೊಡುತ್ತದೆ’ ಎಂದು ಆಕ್ಷೇಪಿಸಿದರು. ಇದನ್ನು ಆಲಿಸಿದ ನ್ಯಾಯಪೀಠ, ‘ನಿಯಮಗಳ ವಿವರ ಒದಗಿಸಿ’ ಎಂದು ಪೊನ್ನಣ್ಣ ಅವರಿಗೆ ಸೂಚಿಸಿ ವಿಚಾರಣೆಯನ್ನು ಇದೇ 10ಕ್ಕೆ ಮುಂದೂಡಿದರು.

ಪ್ರಕರಣವೇನು ?: ಅರ್ಜಿದಾರ ಬಸವರಾಜು, 2016ರ ಆಗಸ್ಟ್‌ ತಿಂಗಳಿನಲ್ಲಿ ಬಲಗಾಲಿನ ಗಂಭೀರ ತೊಂದರೆಗೆ ಒಳಗಾಗಿ ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಚಿಕಿತ್ಸೆಗೆ ಒಳಗಾಗಿದ್ದರು. 

‘ನಾನು ಚಿಕಿತ್ಸೆಗೆ ₹ 60,688 ವೆಚ್ಚ ಮಾಡಿದ್ದೆ. ಇದರಲ್ಲಿ ಆರೋಗ್ಯ ಇಲಾಖೆಯು ₹ 32,940 ಅನ್ನು ಮಾತ್ರ ನೀಡಿದೆ. ಉಳಿದ ಹಣ ನೀಡಲು ನಿರಾಕರಿಸಿದೆ. ಬಡವನಾಗಿರುವ ನನಗೆ ಉಳಿದ ಮೊತ್ತವನ್ನೂ ನೀಡಲು ನಿರ್ದೇಶಿಸಬೇಕು’ ಎಂದು ಕೋರಿದ್ದಾರೆ.

ಶಶಿಧರ ಜಾಮೀನು ರದ್ದು: ಅರ್ಜಿ ವಜಾ
ಬೆಂಗಳೂರು:
ರಾಜದ್ರೋಹದ ಆಪಾದನೆ ಎದುರಿಸುತ್ತಿರುವ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ, ಹೈಕೋರ್ಟ್ ನೀಡಿರುವ ಜಾಮೀನಿನ ಷರತ್ತು ಉಲ್ಲಂಘಿಸಿದ್ದು ಅವರ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ.

ಈ ಕುರಿತಂತೆ ಸಿಸಿಬಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್‌ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.

ಆರೋಪಿ ವಿ.ಶಶಿಧರ ವಿರುದ್ಧ ಯಲಹಂಕ ಪೊಲೀಸರು  ಭಾರತೀಯ ದಂಡ ಸಂಹಿತೆ, ಪೊಲೀಸ್‌ ಕಾಯ್ದೆ, ಎಸ್ಮಾ ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಶಶಿಧರ ಇದೇ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠದಿಂದ ಈಗಾಗಲೇ ಷರತ್ತುಬದ್ಧ ಜಾಮೀನು ಪಡೆದಿದ್ದಾರೆ. ಈ ಜಾಮೀನಿನ ಷರತ್ತುಗಳನ್ನು ಅವರು ಉಲ್ಲಂಘಿಸಿದ್ದು ಜಾಮೀನು ರದ್ದುಗೊಳಿಸಬೇಕು ಎಂದು ಸಿಸಿಬಿ ಪೊಲೀಸರು ಈ ಅರ್ಜಿ ಸಲ್ಲಿಸಿದ್ದರು.

ಕೋರ್ಟ್‌ ಮಧ್ಯಪ್ರವೇಶ ಅಗತ್ಯವಿಲ್ಲ ಎಸ್‌ಜಿ ಪ್ರತಿಪಾದನೆ
ಬೆಂಗಳೂರು:
‘ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಸ್ಥಿರ ಮತ್ತು ಚರಾಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ಪ್ರಕರಣಗಳಲ್ಲಿ ಕೋರ್ಟ್‌ ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಕೆ.ಎಂ.ನಟರಾಜ್‌ ಹೈಕೋರ್ಟ್‌ಗೆ ತಿಳಿಸಿದರು.

ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ 28ಕ್ಕೂ ಹೆಚ್ಚು ಪ್ರಕರಣಗಳಿಗೆ ಸಂಬಂಧಿಸಿದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ನಟರಾಜ್, ‘ಈ ಕುರಿತ ತಕರಾರುಗಳೇನೂ ಇದ್ದರೂ ಅರ್ಜಿದಾರರು ಅವುಗಳನ್ನು ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಮಂಡಳಿ ಮುಂದೆ ಪ್ರಶ್ನಿಸಬಹುದು. ಈ ರೀತಿ ಹೈಕೋರ್ಟ್‌ಗೆ ಬಂದು ತಡೆಯಾಜ್ಞೆ ಪಡೆಯುವುದರಿಂದ ತನಿಖೆಗೆ ತೀವ್ರ ತೊಂದರೆ ಆಗುತ್ತದೆ’ ಎಂದು ಆಕ್ಷೇಪಿಸಿದರು.

‘ಜಾರಿ ನಿರ್ದೇಶನಾಲಯವು ಯಾರಿಗೆ ಸಮನ್ಸ್‌ ಜಾರಿ ಮಾಡಿದೆಯೊ ಅಂತಹವರು ಇ.ಡಿ.ಅಧಿಕಾರಿಗಳ ಮುಂದೆ ಹಾಜರಾಗಬೇಕು. ಅಧಿಕಾರಿಗಳು ಕೇಳಿದ ಮಾಹಿತಿ ಒದಗಿಸಬೇಕು. ಅದು ಬಿಟ್ಟು, ಈ ರೀತಿ ಕೋರ್ಟ್‌ಗೆ ಬಂದು ತಕರಾರು ತೆಗೆಯುವುದರಿಂದ ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಮತ್ತು ಕೋರ್ಟ್‌ ಇವುಗಳನ್ನು ಪರಿಶೀಲನೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಆದ್ದರಿಂದ ಈ ಅರ್ಜಿಗಳನ್ನು ವಜಾ ಮಾಡಬೇಕು’ ಎಂದು ಕೋರಿದರು.

‘ಅರ್ಜಿದಾರರಿಗೆ ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆ ಮುಂದುವರಿಯುತ್ತದೆ. ಮುಂದಿನ ವಿಚಾರಣೆವರೆಗೂ ಪ್ರತಿವಾದಿ ಇ.ಡಿ. ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು’ ಎಂದು ಆದೇಶಿಸಿದ ನ್ಯಾಯಪೀಠ ವಿಚಾರಣೆ
ಯನ್ನು ಇದೇ 9ಕ್ಕೆ ಮುಂದೂಡಿದೆ.

ಇ.ಡಿ. ದಾಖಲಿಸಿರುವ ಈ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ಸ್ಥಿರ ಮತ್ತು ಚರಾಸ್ತಿಯ ಒಟ್ಟು ಮೌಲ್ಯ ₹ 200 ಕೋಟಿಗೂ ಹೆಚ್ಚಿದೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !