ಅಧಿಕಾರಿಗಳ ಮೈ ಮುಟ್ಟಿದವರಿಗೆ ತಕ್ಕ ಶಾಸ್ತಿ ಮಾಡಲಾಗುವುದು: ಹೈಕೋರ್ಟ್‌ ಎಚ್ಚರಿಕೆ

7
ಪೊಲೀಸ್ ಕಮಿಷನರ್‌ಗೆ ಹೈಕೋರ್ಟ್‌ ನಿರ್ದೇಶನ

ಅಧಿಕಾರಿಗಳ ಮೈ ಮುಟ್ಟಿದವರಿಗೆ ತಕ್ಕ ಶಾಸ್ತಿ ಮಾಡಲಾಗುವುದು: ಹೈಕೋರ್ಟ್‌ ಎಚ್ಚರಿಕೆ

Published:
Updated:

ಬೆಂಗಳೂರು: ನಗರದ ಫ್ಲೆಕ್ಸ್ ತೆರವು ಕಾರ್ಯಾಚರಣೆ ವೇಳೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರು ಶುಕ್ರವಾರ ಕೆಂಡಾಮಂಡಲವಾಗಿದ್ದು, ‘ಯಾರಾದರೂ ಅಧಿಕಾರಿಗಳ ಮೈ ಮುಟ್ಟಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು’ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಬೆಳಗ್ಗೆ ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್ ಅವರನ್ನು ಕೋರ್ಟ್‌ಗೆ ಕರೆಯಿಸಿಕೊಂಡ ದಿನೇಶ್ ಮಾಹೇಶ್ವರಿ, ‘ಮೊದಲು ಬೆಂಗಳೂರಿನಲ್ಲಿರುವ ಎಲ್ಲ ರೀತಿಯ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ತೆರವುಗೊಳ್ಳಬೇಕು. ಅದು ಯಾರದ್ದೇ ಆಗಿರಲಿ. ಮುಲಾಜಿಲ್ಲದೇ ಅವುಗಳನ್ನು ಕಿತ್ತು ಹಾಕಿ’ ಎಂದು ಮತ್ತೊಮ್ಮ ಖಡಕ್ ಎಚ್ಚರಿಕೆ ನೀಡಿದರು.

ಸಿ.ಜೆ‌ ನೀಡಿದ ಎಚ್ಚರಿಕೆಯ ಮುಖ್ಯಾಂಶಗಳು
* ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದೀರಾ ಎಂದು ರಾಜ್ಯ ಪ್ರಾಸಿಕ್ಯೂಟರ್ ಎಚ್.ಎಸ್. ಚಂದ್ರಮೌಳಿ, ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ನಗರ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್‌ ಅವರನ್ನು ಪ್ರಶ್ನಿಸಿದರು. 

* ಆರೋಪಿಗಳೇನಾದರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆಯೇ? 

* ಹಲ್ಲೆ ನಡೆಸಿದವರ ವಿರುದ್ಧ ಸಮಾಜದ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲಿಸಿ.

* ಸಿಆರ್‌ಪಿಸಿ ಕಲಂ 120 ಬಿ (ಸಮಾಜದ ಶಾಂತಿ ಕದಡಿದ ಆರೋಪ) ಅನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸುವ ಮೂಲಕ ಆರೋಪಿಗಳಿಗೆ ತಕ್ಕ ಪಾಠ ಕಲಿಸಿ.

* ಸರ್ಕಾರಿ ಅಧಿಕಾರಿಗಳ ಮೈಮುಟ್ಟವುದು ಎಂದರೆ ಏನೆಂದುಕೊಂಡಿದ್ದಾರೆ?

* ಇಂಥವರಿಗೆಲ್ಲ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ.

* ಪೊಲೀಸರು ಯಾವುದೇ ಕಾರಣಕ್ಕೂ ಹಿಂಜರಿಯದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.

* ಆರೋಪಿಗಳ ಜಾಮೀನು ಅರ್ಜಿಯನ್ನು ಸಂಬಂಧಿಸಿದ ರೋಸ್ಟರ್ ಬೆಂಚ್‌ಗಳು ವಿಶೇಷ ನಿಗಾವಹಿಸಿ, ಅಪರೂಪದ ಪ್ರಕರಣಗಳೆಂದು ಪರಿಗಣಿಸಿ ವಿಚಾರಣೆ ನಡೆಸುತ್ತವೆ. ಇದನ್ನು ಯಾರೂ ನಿರ್ಲಕ್ಷಿಸಕೂಡದು.

* ಕೋರ್ಟ್ ಈ ಪ್ರವೃತ್ತಿಯ ಅಪರಾಧಿಗಳನ್ನು ಬಡಪಟ್ಟಿಗೆ ಬಿಡುವುದಿಲ್ಲ. ಅಗತ್ಯ ಬಿದ್ದರೆ ಈ ಪ್ರಕರಣಗಳ ವಿಚಾರಣೆಗೆ ವಿಶೇಷ ಮ್ಯಾಜಿಸ್ಟ್ರೇಟ್ ನೇಮಕ ಮಾಡುತ್ತೇನೆ. 

* ಶೀಘ್ರ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಸರಿಯಾದ ಜಾಗಕ್ಕೆ ಕಳಿಸುತ್ತೇವೆ. 

* ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದೆಂದರೆ ಅದು ಬಹು ದೊಡ್ಡ ಅಪರಾಧ.

* ಇದೊಂದು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಒಳಪಡುವ ವಿಚಾರವೂ ಆದೀತು.

* ನಾವು ಯಾರ ಬಗ್ಗೆಯೂ ಪೂರ್ವಗ್ರಹ ಭಾವನೆ ಹೊಂದಿಲ್ಲ.

* ಅಧಿಕಾರಿಗಳಿಗೆ ತಮ್ಮ ಕೆಲಸ ಏನೆಂದು ಗೊತ್ತಿರಬೇಕು. ಗೊತ್ತಿಲ್ಲದಿದ್ದರೆ ಗೊತ್ತು ಮಾಡಿಕೊಳ್ಳಬೇಕು. ಒಂದು ವೇಳೆ ಗೊತ್ತಿಲ್ಲದೆ ಹೋದರೆ ಹೇಗೆ ಗೊತ್ತು ಮಾಡಿಕೊಳ್ಳಬೇಕು ಎಂದು ನಾನು ತೋರಿಸಬಲ್ಲೆ.

* ಈ ರೀತಿಯ ಪ್ರಕರಣಗಳು ವ್ಯವಸ್ಥೆಯನ್ನು ಅಶಾಂತಗೊಳಿಸುವ ಕೃತ್ಯಗಳು. ಅಂತಹ ಕಿಡಿಗೇಡಿಗಳನ್ನು ನಾವು ಸುಮ್ಮನೆ ಬಿಡುವುದಿಲ್ಲ.

* ಫ್ಲೆಕ್ಸ್ ಹಾಕುವವರಲ್ಲಿ ಕ್ರಿಮಿನಲ್ ಮನೋಭಾವದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ.

* ಈ ರೀತಿಯ ಅಪರಾಧಕ್ಕೆ ಯಾರಾದರೂ ಕುಮ್ಮಕ್ಕು ನೀಡುತ್ತಿರಬಹುದೇ? ಹಾಗೇನಾದರೂ ಇದ್ದರೆ ನಾನದನ್ನು ತಿಲಮಾತ್ರವೂ ಸಹಿಸುವುದಿಲ್ಲ.

* ಬೆಂಗಳೂರು ಶಿಸ್ತಿನ ನಗರ. ಸಭ್ಯ ನಾಗರಿಕರ ತವರೂರು. ಇಲ್ಲಿ ಪುಂಡಾಟಿಕೆ, ಗೂಂಡಾಗಿರಿ, ಕ್ರಿಮಿನಲ್ ಪ್ರವೃತ್ತಿಗೆ ಒಂಚೂರು ಜಾಗವಿಲ್ಲ.

* ನಗರದಲ್ಲಿ ಎಲ್ಲಿಯಾದರೂ ಒಂದೇ ಒಂದು ಫ್ಲೆಕ್ಸ್ ಕಣ್ಣಿಗೆ ಬಿದ್ದರೂ ಸಹಿಸುವುದಿಲ್ಲ. ಅದು ನಿರ್ಜನ ಪ್ರದೇಶವೇ ಆಗಿರಲಿ. ನಗರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಪ್ರವೃತ್ತಿ ಕೊನೆಗೊಳ್ಳಬೇಕು.

* ಈ ದಿಸೆಯಲ್ಲಿ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು 24x7 ಕೆಲಸ ಮಾಡಬೇಕು.

* ಈಗಾಗಲೇ ಗಸ್ತು ತಿರುಗುತ್ತಿರುವ ಪೊಲೀಸ್ ಕಾರ್ಯಪಡೆಗಳು ಫ್ಲೆಕ್ಸ್ ಹಾಕುವವರ ಬಗ್ಗೆ ನಿಗಾವಹಿಸಬೇಕು.

* ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ರೀತಿಯ ಚಟುವಟಿಕೆಗಳನ್ನು ಪರಿಶೀಲಿಸಿ, ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

* ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಅಥವಾ ಶಾಶ್ವತವಾಗಿ ಉಳಿಸಿಕೊಳ್ಳುವಂಥ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಪೊಲೀಸರು ಗಮನ ಹರಿಸಬೇಕು.

* ಇನ್ನು ಮುಂದೆ ಎಲ್ಲಿಯಾದರೂ ಒಂದೇ ಒಂದು ಫ್ಲೆಕ್ಸ್ ಕಂಡು ಬಂದರೆ ಅದರ ಉತ್ತರದಾಯಿ ಪೊಲೀಸ್ ಕಮಿಷನರ್ ಅವರೇ ಆಗಿರುತ್ತಾರೆ.

* ನಾನು ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಯಾರೋ ಗುತ್ತಿಗೆದಾರ ಫ್ಲೆಕ್ಸ್ ತೆರವಿಗೆ ಅಡ್ಡಿಪಡಿಸಿದ್ದಾರೆಂದು ಓದಿದೆ. ಯಾರು ಆ ಮಹಾಶಯ? ಕರೆದು ನನ್ನ ಎದುರಿಗೆ ನಿಲ್ಲಿಸಿ ಎಂದು ತಮ್ಮ ಎದುರಿನ ಟೇಬಲ್ ಗುದ್ದಿ ಆಕ್ರೋಶ ಹೊರ ಹಾಕಿದ ಮುಖ್ಯ ನ್ಯಾಯಮೂರ್ತಿಗಳು, ‘ಬೆಂಗಳೂರಿನಲ್ಲಿ ಬಹಳಷ್ಟು ಸಮಸ್ಯೆಗಳಿವೆ ಅವುಗಳ ಮೂಲೋತ್ಪಾಟನೆಯಾಗಬೇಕು’ ಎಂದರು.

* ಆ ದಿಸೆಯಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ತೆರವು ಕಾರ್ಯಾಚರಣೆ ಆರಂಭಿಕ ಹೆಜ್ಜೆ.

* ನಾವು ಬೆಂಗಳೂರಿನ ಸೌಂದರ್ಯ ಮರುಕಳಿಸುವ ಪ್ರಕ್ರಿಯೆಗೆ ಬದ್ಧವಾಗಿದ್ದೇವೆ.

ಪೊಲೀಸ್ ಕಮಿಷನರ್‌ಗೆ ಹೈಕೋರ್ಟ್‌ ನಿರ್ದೇಶನ
• ಆ. 8ಕ್ಕೆ ಕಾರ್ಯಾಚರಣೆ ವರದಿಯನ್ನು ಪ್ರಮಾಣಪತ್ರದ ಮೂಲಕ ಕೋರ್ಟ್‌ಗೆ ಸಲ್ಲಿಸಿ.

• ಅಧಿಕಾರಿಗಳಿಗೆ ರಕ್ಷಣೆ ಕೊಡಿ.

• ಕಾರ್ಯಾಚರಣೆ ಬಗ್ಗೆ ನಿಗಾವಹಿಸಿ.

• ನೀವೇನು ಮಾಡುತ್ತೀರೋ ಗೊತ್ತಿಲ್ಲ. ಆದರೆ ಬೆಂಗಳೂರು ಸ್ವಚ್ಛವಾಗಬೇಕು.
 

ಬರಹ ಇಷ್ಟವಾಯಿತೆ?

 • 37

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !