ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ ಫಾರಂ ತಡೀರಿ, ಇಲ್ಲ ವಿರೋಧ ಎದುರಿಸಿ

ಮಾಯಕೊಂಡ: ಕಾಂಗ್ರೆಸ್‌ ಅಭ್ಯರ್ಥಿ ಬದಲಿಸಲು ಮುಖಂಡರ ಮನವಿ
Last Updated 18 ಏಪ್ರಿಲ್ 2018, 7:00 IST
ಅಕ್ಷರ ಗಾತ್ರ

ದಾವಣಗೆರೆ: ಟಿಕೆಟ್ ಘೋಷಣೆಯಾದ ವ್ಯಕ್ತಿಗೆ ಗೆಲ್ಲುವ ಸಾಮರ್ಥ್ಯ ಇಲ್ಲ. ಅವರಿಗೆ ಪಕ್ಷದ ‘ಬಿ ಫಾರಂ’ ಕೊಡಬಾರದು. ವಿರೋಧಗಳ ನಡುವೆಯೂ ಪಕ್ಷ ‘ಬಿ ಫಾರಂ’ ನೀಡಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳು, ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್‌. ಬಸವರಾಜ್ ಟಿಕೆಟ್‌ಗೆ ಅರ್ಹ ವ್ಯಕ್ತಿ ಅಲ್ಲ. ಕ್ಷೇತ್ರದಲ್ಲಿ ಅವರದ್ದು ಯಾವುದೇ ಸಾಧನೆ ಇಲ್ಲ. ಪಕ್ಷ ಸಂಘಟನೆಯನ್ನೂ ಮಾಡಿಲ್ಲ. ಸಚಿವ ಎಚ್. ಆಂಜನೇಯ ಅವರ ಸಂಬಂಧಿಕ ಎಂಬ ಒಂದೇ ಕಾರಣಕ್ಕೆ ಟಿಕೆಟ್‌ ನೀಡಲಾಗಿದೆ. ಪಕ್ಷ ಈಗ ಮಾಡಿದ ತಪ್ಪನ್ನು ತಿದ್ದಿಕೊಂಡು ‘ಬಿ ಫಾರಂ’ ತಡೆ ಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.

ಚಿತ್ರದುರ್ಗದ ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಎಚ್‌. ಆಂಜನೇಯ ಪಕ್ಷದ ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಸಂಬಂಧಿಕರೇ ಗೆಲ್ಲಬೇಕೆಂದು ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಿ ಟಿಕೆಟ್‌ ಕೊಡಿಸಿದ್ದಾರೆ. ರಾಜ್ಯದಲ್ಲೇ ಇನ್ನೂ ನಾಲ್ಕು ಜನ ತನ್ನ ಸಂಬಂಧಿಕರಿಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಕೊಡಿಸಿ, ಪರಿಶಿಷ್ಟ ಜಾತಿಯಲ್ಲಿ ಬೇರೆ ಯಾರೂ ವಿಧಾನಸಭೆ ಪ್ರವೇಶ ಮಾಡದಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸದಿದ್ದರೆ ಇದರ ಪರಿಣಾಮ ಜಿಲ್ಲೆಯ ಇನ್ನಿತರ ಮೂರ್ನಾಲ್ಕು ವಿಧಾನಸಭಾ ಕ್ಷೇತ್ರಗಳ ಮೇಲೆ ಬೀರಲಿದೆ. ಆದ್ದರಿಂದ ಪಕ್ಷ ಸಂಘಟನೆ ಮಾಡಿದ ಕಾರ್ಯಕರ್ತರಿಗೆ ಟಿಕೆಟ್‌ ನೀಡಬೇಕು ಎಂದು ಆಕಾಂಕ್ಷಿ ರಾಘವೇಂದ್ರ ನಾಯ್ಕ ಒತ್ತಾಯಿಸಿದರು.

‘ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡಿ, ಪ್ರತಿ ಬೂತ್‌ಮಟ್ಟದಿಂದಲೂ ಕೆಲಸ ಮಾಡಿ, ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮ ವಹಿಸಿದ ಡಾ.ವೈ.ರಾಮಪ್ಪ, ಬಿ.ಎಚ್‌. ವೀರಭದ್ರಪ್ಪ, ದುಗ್ಗಪ್ಪ ಸೇರಿದಂತೆ ನಾನೂ ಕೂಡ ಕಾಂಗ್ರೆಸ್‌ ಅಭ್ಯರ್ಥಿಯಾಗಲು ಬಯಸಿದ್ದೆ. ಪಕ್ಷ ಗೆಲುವು ಸಾಧಿಸಬಹುದಾದ ಈ ಅಭ್ಯರ್ಥಿಗಳನ್ನು ಕಡೆಗಣಿಸಿ ಎಚ್‌. ಆಂಜನೇಯ ಅಳಿಯನಿಗೆ ಮಣೆ ಹಾಕಿರುವ ಕಾಂಗ್ರೆಸ್ ಪಕ್ಷದ ತೀರ್ಮಾನ ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಎಚ್‌. ಚನ್ನಬಸಪ್ಪ, ಫಾರೂಕ್‌, ಪ್ರಭು, ಮಂಜುನಾಥ್‌ ಅವರೂ ಇದ್ದರು.

ಜಿಲ್ಲಾ ಉಸ್ತುವಾರಿ ಸಚಿವರಿಗೂ ಎಚ್ಚರಿಕೆ

‘ನಿಮ್ಮನ್ನು ನಂಬಿಕೊಂಡು ಇದುವರೆಗೂ ರಾಜಕಾರಣದಲ್ಲಿದ್ದೆವು. ಆದರೆ, ನೀವು ಅನರ್ಹರಿಗೆ ಟಿಕೆಟ್‌ ಕೊಟ್ಟು ದ್ರೋಹ ಮಾಡಿದ್ದೀರಿ. ಈಗ ನೀವು ಟಿಕೆಟ್‌ ಬದಲಿಸದಿದ್ದರೆ ನಿಮ್ಮ ವಿರುದ್ಧವೂ ಚುನಾವಣೆಯಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ಡಾ.ವೈ.ರಾಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಅವರನ್ನೂ ಕರೆದುಕೊಂಡು ಶೀಘ್ರ ಬೆಂಗಳೂರಿಗೆ ತೆರಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಒಂದು ವೇಳೆ ಟಿಕೆಟ್‌ ಬದಲಿಸದಿದ್ದರೆ ಕಾರ್ಯಕರ್ತರ ಸರಣಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಆದರೆ, ಯಾವುದೇ ಕಾರಣಕ್ಕೂ ಬಸವರಾಜ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT