ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಜಾಹೀರಾತು ಫಲಕಕ್ಕೆ ಅನುಮತಿ: ಕೆ.ಮಥಾಯ್‌ ಆರೋಪ

Last Updated 6 ಜೂನ್ 2022, 20:36 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಜಾಹೀರಾತು ಫಲಕ ಅಳವಡಿಸಲು ಅವಿನಾಶಿ ಜಾಹೀರಾತು ಸಂಸ್ಥೆಗೆ ಕಾನೂನು ಉಲ್ಲಂಘಿಸಿ ಅನುಮತಿ ನೀಡಿದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ವಕ್ತಾರ ಕೆ.ಮಥಾಯ್‌ ಆರೋಪಿಸಿದರು.

‘ಹೋರ್ಡಿಂಗ್‌ ಅಳವಡಿಸಲು ನೀಡಿರುವ ಸ್ಥಳವು ಬಿಬಿಎಂಪಿಗೆ ಸೇರಿದೆ. ಅನುಮತಿ ನೀಡುವ ಹಕ್ಕು ಬಿಡಿಎಗೆ ಇರುವುದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

‘ಬಿಡಿಎ, ಹೈಕೋರ್ಟ್‌ ಆದೇಶವನ್ನು ಉಲ್ಲಂಘಿಸಿದೆ. ಬಿಡಿಎ ಹಾಗೂ ಬಿಬಿಎಂಪಿಯ ಕೆಲವು ಭ್ರಷ್ಟ ಅಧಿಕಾರಿಗಳ ನೆರವಿನಿಂದ ಅವಿನಾಶಿ ಜಾಹೀರಾತು ಸಂಸ್ಥೆ ಅಕ್ರಮವಾಗಿ ಅನುಮತಿ ಪಡೆದುಕೊಂಡಿದೆ’ ಎಂದು ಕೆ.ಮಥಾಯ್‌ ದೂರಿದರು.

‘ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಜಾಹೀರಾತು ಫಲಕ ಅಳವಡಿಸುವ ಹಕ್ಕನ್ನು ಬಿಡಿಎ ಹೇಗೆ ನೀಡಿತು? ಇದು ಹಲವು ಸಂಶಯ ಮೂಡಿಸಿದೆ’ ಎಂದು ಹೇಳಿದರು.

‘ಬಿಬಿಎಂಪಿಯ ಜಾಹೀರಾತು ಫಲಕಗಳ ಗಾತ್ರದ ಗರಿಷ್ಠ ಮಿತಿ 40X20 ಅಡಿ ಆಗಿರುವಾಗ, 80X80 ಅಡಿ ಫಲಕಕ್ಕೆ ಅವಕಾಶ ನೀಡಲಾಗಿದೆ. ಹೆಬ್ಬಾಳ ಮೇಲ್ಸೇತುವೆ ಎನ್‌ಎಚ್‌ಎಐ ಅಡಿಯಲ್ಲಿ ಬರುವುದರಿಂದ ರಾಷ್ಟ್ರೀಯ ಹೆದ್ದಾರಿ ಸಮೀಪ ಹೋರ್ಡಿಂಗ್‌ಗೆ ಅವಕಾಶ ನೀಡಲು ಹೇಗೆ ಸಾಧ್ಯವಾಯಿತು?’ ಎಂದು ಆಕ್ರೋಶ ಹೊರಹಾಕಿದರು.

‘ಬಿಡಿಎ, ಬಿಬಿಎಂಪಿ ಆಯುಕ್ತರ ಕಾನೂನುಬಾಹಿರ ಆದೇಶದ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಇದುವರೆಗೆ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರದ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಬೇಕು ಹಾಗೂ ಜಾಹೀರಾತು ಫಲಕ ತೆರವುಗೊಳಿಸಬೇಕು’ ಎಂದು ಪಕ್ಷದ ಬೆಂಗಳೂರು ವಕ್ತಾರೆ ಉಷಾ ಮೋಹನ್‌ ಆಗ್ರಹಿಸಿದರು.

ಪಕ್ಷದ ಮಹದೇವಪುರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಅಶೋಕ್‌ ಮೃತ್ಯುಂಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT