ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ಆದೇಶ: ರಾಜ್‌ಕುಮಾರ್, ವಿಷ್ಣುವರ್ಧನ್‌ ಪ್ರತಿಮೆಗಳ ತೆರವಿಗೆ ಸಿದ್ಧತೆ

21 ಪ್ರತಿಮೆಗಳ ಪಟ್ಟಿ ಮಾಡಿದ ಬಿಬಿಎಂಪಿ
Last Updated 1 ಸೆಪ್ಟೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್ ಆದೇಶದಂತೆ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾಗಿರುವ ಬಿಬಿಎಂಪಿ, ಚಿತ್ರ ನಟರು ಮತ್ತು ಸಮಾಜ ಸುಧಾರಕರ 21 ಪ್ರತಿಮೆಗಳನ್ನೂ ಪಟ್ಟಿ ಮಾಡಿದೆ.

ಈ ಸಂಬಂಧ ರಿಟ್ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌, ಸರ್ಕಾರಿ ಜಾಗದಲ್ಲಿರುವ ಕಟ್ಟಡ ಮತ್ತು ಪ್ರತಿಮೆಗಳ ಸರ್ವೆ ನಡೆಸುವಂತೆ ಬಿಬಿಎಂಪಿ, ನಗರ ಪೊಲೀಸ್ ಮತ್ತು ಸಂಚಾರ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಸೆ.2ರಂದು ನಡೆಯಲಿರುವ ವಿಚಾರಣೆ ವೇಳೆ ಈ ಪಟ್ಟಿ ಸಲ್ಲಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

ಭಾಷ್ಯಂ ವೃತ್ತ, ಟಿ.ಆರ್ ಮಿಲ್ ವೃತ್ತ, ಟಿಸಿಎಂ ರಾಯನ್ ವೃತ್ತ, ಬಳೆಪೇಟೆ ವೃತ್ತ, ಶಿವನಹಳ್ಳಿ ಮುಖ್ಯ ರಸ್ತೆ, ಅಕ್ಕಿಪೇಟೆ ವೃತ್ತದ ಬಳಿ, ಗಾಂಧಿನಗರ ಪಾರ್ಕ್ ರಸ್ತೆ, ವಿಜಯನಗರ ಟೋಲ್‌ಗೇಟ್ ವೃತ್ತ, ಮಾಗಡಿ ರಸ್ತೆ, ಶೇಷಾದ್ರಿಪುರ ವೃತ್ತದಲ್ಲಿ ಪ್ರತಿಮೆಗಳಿವೆ ಎಂದು ಬಿಬಿಎಂಪಿ ಗುರುತಿಸಿದೆ.

‘ನಾವು ಸರ್ವೆ ಕಾರ್ಯವನ್ನು ಸಂಪೂರ್ಣವಾಗಿ ಮುಗಿಸಿದ್ದೇವೆ. ಅಭಿಮಾನಿಗಳು ಚಿತ್ರ ನಟರ ಪ್ರತಿಮೆಗಳನ್ನು ಅಲ್ಲಲ್ಲಿ ನಿರ್ಮಿಸಿದ್ದಾರೆ. ಅಭಿಮಾನಿಗಳನ್ನು ವಿಶ್ವಾಸಕ್ಕೆ ಪಡೆದು ತೆರವುಗೊಳಿಸಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ರಾಜ್‌ಕುಮಾರ್, ವಿಷ್ಣುವರ್ದನ್, ಶಂಕರನಾಗ್, ಸಮಾಜ ಸುಧಾರಕ ಬಸವಣ್ಣನ ಪ್ರತಿಮೆಗಳು ಈ ಪಟ್ಟಿಯಲ್ಲಿ ಇವೆ. ಅಕ್ರಮ ನಿರ್ಮಾಣ ಎಂಬುದು ಜನರಿಗೆ ಅರ್ಥವಾಗಿಲ್ಲ. ಏಕಾಏಕಿ ತೆರವುಗೊಳಿಸಿದರೆ ನಾವು ಈ ನಟರು ಮತ್ತು ಸಮಾಜ ಸುಧಾರಕರ ವಿರುದ್ಧ ಇದ್ದೇವೆ ಎಂದು ಅವರು ಭಾವಿಸುತ್ತಾರೆ. ಅದಕ್ಕೆ ಅವಕಾಶ ಆಗದಂತೆ ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ’ ಎಂದು ಹೇಳಿದರು.

‘ಗುರುವಾರ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಈ ಪ್ರತಿಮೆಗಳ ತೆರವಿಗೆ ಇನ್ನಷ್ಟು ಸಮಯ ಕೇಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT