ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವನ್ನು ಅನುಚಿತವಾಗಿ ಸ್ಪರ್ಶಿಸಿದರೂ ಅಪರಾಧ: ಹೈಕೋರ್ಟ್ ಅಭಿಪ್ರಾಯ

Last Updated 11 ಜೂನ್ 2022, 19:50 IST
ಅಕ್ಷರ ಗಾತ್ರ

ಬೆಂಗಳೂರು: 'ಮಗುವನ್ನು ಅನುಚಿತವಾಗಿ ಸ್ಪರ್ಶಿಸುವುದೂ ಕೂಡ ಪೋಕ್ಸೊ ಕಾಯ್ದೆ-2012ರ ಕಲಂ 7ರಡಿ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನ ವ್ಯಾಪ್ತಿಗೆ ಒಳಪಡುತ್ತದೆ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕೋಲಾರದ ಮಾಲೂರು ತಾಲ್ಲೂಕಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಪೋಕ್ಸೊ ಕಾಯ್ದೆ-2012ರ ಕಲಂ 7 ರ ವ್ಯಾಪ್ತಿಯ ’ಲೈಂಗಿಕ ದೌರ್ಜನ್ಯ’ ವ್ಯಾಪ್ತಿಗೆ ಎರಡು ಭಾಗಗಳು ಒಳಪಡುತ್ತವೆ. ಒಂದನೇ ಭಾಗದಲ್ಲಿ ಲೈಂಗಿಕ ಉದ್ದೇಶದಿಂದ ನಿರ್ದಿಷ್ಟ ಅಂಗಗಳನ್ನು ಸ್ಪರ್ಶಿಸುವುದು ಮತ್ತು ಎರಡನೇ ಭಾಗ, ಅತ್ಯಾಚಾರವಲ್ಲದೆ ಲೈಂಗಿಕ ಉದ್ದೇಶದಿಂದ ಇತರೇ ಅಂಗಗಳನ್ನು ಸ್ಪರ್ಶಿಸುವುದು. ಈ ಪ್ರಕರಣದಲ್ಲಿ ಎರಡನೇ ಭಾಗ ಅನ್ವಯಿಸುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಮಗು ಕೂಡ ಆರೋಪಿಯು ತನ್ನ ದೇಹದ ಯಾವ ಅಂಗಗಳನ್ನು ಸ್ಪರ್ಶಿಸಿದ್ದರು ಎಂಬುದನ್ನು ಹೇಳಿದೆ. ಹಾಗಾಗಿ ಕ್ರಿಮಿನಲ್ ಕೇಸ್ ರದ್ದು ಮಾಡಲಾಗದು ಎಂದು ನ್ಯಾಯಪೀಠ ಹೇಳಿದೆ.

ವಿಚಾರಣೆ ಆರಂಭವಾದ ಮೂರು ವರ್ಷಗಳ ನಂತರ ಆರೋಪ ಪಟ್ಟಿಯಲ್ಲಿ ಕಲಂ 7 ಸೇರ್ಪಡೆ ಮಾಡಿರುವುದು ಸರಿಯಲ್ಲವೆಂದು ಅರ್ಜಿದಾರರು ಆಕ್ಷೇಪ ಎತ್ತಿದ್ದಾರೆ. ಆದರೆ, ಅಪರಾಧ ದಂಡ ಸಂಹಿತೆ ಕಲಂ 216 (1)ರ ಪ್ರಕಾರ ನ್ಯಾಯಾಲಯ ತೀರ್ಪು ಪ್ರಕಟಿಸುವ ಮುನ್ನ ಯಾವುದೇ ಹಂತದಲ್ಲಿ ಬೇಕಾದರೂ ಆರೋಪ ಪಟ್ಟಿಯಲ್ಲಿ ಮಾರ್ಪಾಡು ಮಾಡಿ ಅಗತ್ಯ ಅಂಶಗಳನ್ನು ಸೇರಿಸಬಹುದಾಗಿದೆ. ಆ ರೀತಿ ಆರೋಪ ಪಟ್ಟಿಯಲ್ಲಿ ಬದಲಾವಣೆ ಮಾಡುವ ಅಧಿಕಾರವಿದ್ದು, ಅದನ್ನು ಯಾರೂ ಕುಸಿದುಕೊಳ್ಳಲಾಗದು ’ ಎಂದೂ ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣವೇನು?: 2016ರ ಡಿಸೆಂಬರ್ 1ರಂದು 17 ವರ್ಷದ ಬಾಲಕಿ ಶಾಲೆಗೆ ತೆರೆಳುತ್ತಿದ್ದಾಗ, ಆರೋಪಿ ಆಕೆಯನ್ನು ಶಾಲೆಗೆ ಬಿಡುವುದಾಗಿ ಬೈಕ್‌ನಲ್ಲಿ ಕೂಡಿಸಿಕೊಂಡು ಸ್ವಲ್ಪ ಮುಂದೆ ಹೋದ ಬಳಿಕ ಕಾರಿನಲ್ಲಿ ಬೇರೊಬ್ಬ ವ್ಯಕ್ತಿಯ ಜೊತೆ ಸೇರಿ ಆಕೆಯನ್ನು ಅಪಹರಿಸಿದ್ದರು. ಕಾರಿನಲ್ಲಿ ಪ್ರಯಾಣಿಸುವಾಗ ಆ ಬಾಲಕಿಯ ಅಂಗಗಳನ್ನು ಅನು ಚಿತವಾಗಿ ಸ್ಪರ್ಶಿಸಿದ್ದಾರೆಂದು ದೂರು ನೀಡಲಾಗಿತ್ತು. ಆದರೆ, ಬಾಲಕಿ ಅವರಿಂದ ತಪ್ಪಿಸಿಕೊಂಡಿದ್ದಳು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 366ಎ ಮತ್ತು 506 ಅಡಿ ಪ್ರಕರಣ ದಾಖಲಿಸಲಾಗಿತ್ತು. ನಂತರ 2021ರಲ್ಲಿ ಸೆಷನ್ಸ್ ಕೋರ್ಟ್ ವಿಚಾರಣೆ ವೇಳೆ ಸಂತ್ರಸ್ತೆಯ ಹೇಳಿಕೆ ಆಧರಿಸಿ ಪೋಕ್ಸೊ ಕಾಯ್ದೆಯ ಕಲಂ 7 ಅನ್ನು ಸೇರ್ಪಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT