ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಶಿಕ್ಷಕರ ಕೈಬಿಡದಂತೆ ಹೈಕೋರ್ಟ್‌ ಮಧ್ಯಂತರ ಆದೇಶ

Last Updated 19 ಜನವರಿ 2023, 14:28 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಚಿತ್ರಕಲಾ ಮತ್ತು ಕರಕುಶಲ ವಿಭಾಗದ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹದಿನೇಳು ಶಿಕ್ಷಕರನ್ನು ಸೇವೆಯಿಂದ ಬಿಡುಗಡೆಗೊಳಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಈ ಕುರಿತಂತೆ ಮೈಸೂರು ತಾಲ್ಲೂಕಿನ ವರಕೋಡು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಕರಕುಶಲ ವಿಭಾಗದ ಶಿಕ್ಷಕ ಸಿ.ಎನ್‌.ಗಿರೀಶ್‌ ಹಾಗೂ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿಯುತ ಶಾಲೆಯ ಕರಕುಶಲ ವಿಭಾಗದ ಶಿಕ್ಷಕಿ ರೇಣುಕಾ ರವೀಂದ್ರ ಮುಂಜಣ್ಣಿ ಸೇರಿದಂತೆ ಒಟ್ಟು ಹದಿನೇಳು ಶಿಕ್ಷಕರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಗದೀಶ್‌ ಶಾಸ್ತ್ರಿ, ‘ಅರ್ಜಿದಾರರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ವಸತಿಯುತ ಶಾಲೆಗಳಲ್ಲಿ ಚಿತ್ರಕಲೆ ಮತ್ತು ಕರಕುಶಲ ಶಿಕ್ಷಕರಾಗಿ 2001–2002ರ ಶೈಕ್ಷಣಿಕ ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಇವರಿಗೆ ಪ್ರತಿವರ್ಷ ಶೇ 5ರ ಕೃಪಾಂಕದಂತೆ ಗರಿಷ್ಠ 40ರವರೆಗೆ ಕೃಪಾಂಕ ನೀಡಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನ್ವಯಗೊಳಿಸಬೇಕು ಹಾಗೂ ಕಾಯಂಗೊಳಿಸಬೇಕು ಎಂದು ಹೈಕೋರ್ಟ್‌ 2012ರಲ್ಲಿ ಆದೇಶಿಸಿತ್ತು’ ಎಂದು ವಿವರಿಸಿದರು.

ಏತನ್ಮಧ್ಯೆ, ‘ಕರ್ನಾಟಕ ಲೋಕ ಸೇವಾ ಆಯೋಗವು 2016ರ ನವೆಂಬರ್ 3ರಂದು ಕರೆದಿದ್ದ ಗ್ರೂಪ್‌ ಸಿ ಹುದ್ದೆಗಳ ಅಂತಿಮ ಪಟ್ಟಿಯನ್ನು 2022ರಲ್ಲಿ ಬಿಡುಗಡೆ ಮಾಡಿದೆ. ಆದರೆ, ಈ ಪಟ್ಟಿಯಲ್ಲಿ ಗ್ರೂಪ್‌ ಸಿ ಹುದ್ದೆಗೆ ಅನುಗುಣವಾದ ಚಿತ್ರಕಲೆ ಮತ್ತು ಕರಕುಶಲ ಶಿಕ್ಷಕರಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನ್ವಯಗೊಳಿಸಿಲ್ಲ. ಕೃಪಾಂಕ ನೀಡಿಕೆ ಹಾಗೂ ವಯೋಮಿತಿ ಸಡಿಲಿಕೆ ಅವಕಾಶವನ್ನು ಕಲ್ಪಿಸಿಲ್ಲ. ಆದ್ದರಿಂದ, ಅರ್ಜಿದಾರರನ್ನು ಹೊಸ ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡದಂತೆ ಮುಂದುವರಿಸಿಕೊಂಡು ಹೋಗಲು ಕ್ರೈಸ್‌ಗೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿದಾರರನ್ನು, ಕಾರ್ಯ ನಿರ್ವಹಿಸುತ್ತಿರುವ ಹುದ್ದೆಯಿಂದ ಕೈಬಿಡದಂತೆ ಮಧ್ಯಂತರ ಆದೇಶ ನೀಡಿ ಕ್ರೈಸ್‌ ಕಾರ್ಯನಿರ್ವಾಹಕ ನಿರ್ದೇಶಕರಿಗೆ ನಿರ್ದೇಶಿಸಿದೆ. ವಿಚಾರಣೆಯನ್ನು ಫೆಬ್ರುವರಿ 20ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT