ಶುಕ್ರವಾರ, ಡಿಸೆಂಬರ್ 13, 2019
17 °C
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಡ ನಿರ್ಮಾಣ

ಹೊಸ ಸಮೀಕ್ಷೆಗೆ ಕೋರ್ಟ್‌ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅನಧಿಕೃತ ಕಟ್ಟಡಗಳ ತೆರವುಗೊಳಿಸಲು ಬಿಬಿಎಂಪಿ ಕ್ರಮ ಕೈಗೊಳ್ಳಬೇಕು. ಮಂಜೂರಾತಿ ಪಡೆದ ನಂತರದ ನಕ್ಷೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳನ್ನು ಗುರುತಿಸಲು ಪಾಲಿಕೆ ಹೊಸ ಸಮೀಕ್ಷೆ ನಡೆಸಬೇಕು’ ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ಕುರಿತು ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌.ಓಕಾ ನೇತೃತ್ವದ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಈ ಮೊದಲು ಬಿಬಿಎಂಪಿ ಸಲ್ಲಿಸಿದ್ದ ವರದಿಯ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1.53 ಲಕ್ಷ ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 4,600 ಕಟ್ಟಡಗಳು ಮಾತ್ರವೇ ಶೇ 5ಕ್ಕಿಂತ ಕಡಿಮೆ ನಿಯಮ ಉಲ್ಲಂಘನೆಯಾಗಿವೆ.

ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠ, ‘ಸಮೀಕ್ಷೆ ಹೇಗೆ ನಡೆಯಲಿದೆ ಎಂಬ ಬಗ್ಗೆ ಬಿಬಿಎಂಪಿ ಡಿ.18ರೊಳಗೆ ಕಾಲಮಿತಿ ಒಳಗೊಂಡ ವೇಳಾಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಆದೇಶಿಸಿತ್ತು.

ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ ವಾದ ಮಂಡಿಸಿ, ‘2016ರ ಡಿ. 13ರ ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಶೇ 5ಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಿಯಮ ಉಲ್ಲಂಘಿಸಿದ ಕಟ್ಟಡಗಳನ್ನು ಸಕ್ರಮಗೊಳಿಸಲು ವಿವರಣೆ ಅಗತ್ಯವಿದೆ’ ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ನ್ಯಾಯಪೀಠ, ‘ಈ ಹಿಂದಿನ ಆದೇಶದಲ್ಲಿರುವ ವಿವರಗಳಲ್ಲಿ 2013ರಲ್ಲಿ ಸಮೀಕ್ಷೆ ನಡೆಸಲಾಗಿದೆ. ಆದ್ದರಿಂದ, ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಕರ್ನಾಟಕ ಪೌರಾಡಳಿತ ಕಾಯ್ದೆ–1976ರ ಕಲಂ 321 (ಎ) ಅಡಿಯಲ್ಲಿ ಪಾಲಿಕೆಗೆ ಅವಕಾಶವಿದ್ದು, ಮತ್ತೊಮ್ಮೆ ಸಮೀಕ್ಷೆ ನಡೆಸಿ’ ಎಂದು ನಿರ್ದೇಶಿಸಿತು.

‘ಅಕ್ರಮ ಕಟ್ಟಡಗಳ ಮಾಲೀಕರಿಗೆ ಷೋಕಾಸ್ ನೋಟಿಸ್ ನೀಡಿದ ಸಂದರ್ಭದಲ್ಲಿ ಅಂತಹ ಕಟ್ಟಡಗಳ ಮಾಲೀಕರು ಸಕ್ರಮಗೊಳಿಸುವಂತೆ ಕೋರುವ ಹಕ್ಕು ಹೊಂದಿದ್ದಾರೆ. ಆದ್ದರಿಂದ, ಕಳೆದ ತಿಂಗಳ 25ರಂದು ನಾವು ನೀಡಿದ ಆದೇಶದಂತೆ ಸಾರ್ವಜನಿಕ ಪ್ರದೇಶಗಳನ್ನು ಅತಿಕ್ರಮಿಸಿ, ನಕ್ಷೆ ಮಂಜೂರಾತಿ ಪಡೆಯದೆ, ಮಂಜೂರಾತಿ ಪಡೆದ ನಕ್ಷೆಯನ್ನು ಉಲ್ಲಂಘಿಸಿ ಮತ್ತು ನಿಯಮ ಮೀರಿ ನಿರ್ಮಿಸಿದ ಕಟ್ಟಡಗಳನ್ನು ಗುರುತಿಸಲು ಸಮೀಕ್ಷೆ ನಡೆಸಬೇಕು’ ಎಂದು ಆದೇಶಿಸಿತು.

 

ಅಕ್ರಮ ಕಟ್ಟಡಗಳ ಸಮೀಕ್ಷೆ ನಂತರ ಕಟ್ಟಡಗಳ ಮಾಲೀಕರಿಗೆ ಷೋಕಾಸ್ ನೋಟಿಸ್ ನೀಡಿ ವಿವರಣೆ ಸಲ್ಲಿಸಲು ಸೂಕ್ತ ಅವಕಾಶ ಕೊಡಿ. ನಂತರ ತೆರವು ಕಾರ್ಯಾಚರಣೆ ಕೈಗೊಳ್ಳಿ
-ಅಭಯ್‌ ಎಸ್‌.ಓಕಾ,ಮುಖ್ಯ ನ್ಯಾಯಮೂರ್ತಿ

***

ಯಾವುದು ಅಕ್ರಮ ಕಟ್ಟಡ?

‘ಬಿ ಖಾತಾ ನಿವೇಶನಗಳಲ್ಲಿನ ಕಟ್ಟಡಗಳು, ಸೆಟ್‌ ಬ್ಯಾಕ್ ಬಿಡದೇ ಇರುವುದು, ಫ್ಲೋರ್‌ ಏರಿಯಾ ಉಲ್ಲಂಘನೆ ಮಾಡಿರುವುದು, ನಿವಾಸಿ ಬಡಾವಣೆಯ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆ ತೆರೆದಿರುವುದು, ಕೈಗಾರಿಕೆಗಳಿಗೆ ವ್ಯಾಪಾರ ಪರವಾನಗಿ ಇಲ್ಲದೇ ನಡೆಸುತ್ತಿರುವುದು, ಕೆರೆ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಮಾಡಿರುವುದು ಅಕ್ರಮ ಕಟ್ಟಡಗಳ ಪಟ್ಟಿಯಲ್ಲಿ ಉಲ್ಲೇಖಿಸಬಹುದಾದ ವಲಯಗಳು’ ಎನ್ನುತ್ತಾರೆ ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು