ಭಾನುವಾರ, ಡಿಸೆಂಬರ್ 8, 2019
22 °C
ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಆದೇಶ

ಐಎಎಸ್ ಅಧಿಕಾರಿಗಳ ಬೆವರಿಳಿಸಿದ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (ಬಿಡಿಎ) ಕಮಿಷನರ್‌ ರಾಕೇಶ್‌ ಸಿಂಗ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್‌ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಖತ್ರಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಹೈಕೋರ್ಟ್‌ ಮುಂದಾಗಿದೆ.

‘ಪರ್ಯಾಯ ನಿವೇಶನ ನೀಡಬೇಕು ಎಂಬ ಹೈಕೋರ್ಟ್‌ ಆದೇಶ ಪಾಲಿಸಿಲ್ಲ’ ಎಂಬ ಕಾರಣಕ್ಕೆ ಸಿಂಗ್‌, ಜೈನ್‌ ಮತ್ತು ಖತ್ರಿ ವಿರುದ್ಧ ಕಿಡಿಕಾರಿರುವ ವಿಭಾಗೀಯ ನ್ಯಾಯಪೀಠ, ‘ಏನು ಕೋರ್ಟ್‌ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದೀರಾ’ ಎಂದು ಎಚ್ಚರಿಸಿದೆ.

‘ಎರಡು ವರ್ಷ ಎರಡು ತಿಂಗಳಾದರೂ ಏಕಸದಸ್ಯ ನ್ಯಾಯಪೀಠದ ಆದೇಶ ಪಾಲಿಸಿಲ್ಲ’ ಎಂದು ನ್ಯಾಯಾಂಗ ಬಡಾವಣೆ ನಿವಾಸಿ ಎಸ್‌.ಎನ್‌.ನರಸಿಂಹ ಮೂರ್ತಿ ಮತ್ತು ಅವರ ಪತ್ನಿ ಸುಧಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್‌.ಚೌಹಾಣ್‌ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಚಂದ್ರಕಾಂತ ಅರಿಗ, ‘ಅಧಿಕಾರಿಗಳು ಕೋರ್ಟ್‌ ಆದೇಶ ಜಾರಿಗೆ ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಅರ್ಜಿದಾರರಿಂದ ಸ್ವಾಧೀನಪಡಿಸಿಕೊಂಡ ನಿವೇಶನದ ಮೌಲ್ಯಕ್ಕೆ ಸಮಾನವಾದ ಬದಲಿ ನಿವೇಶನ ನೀಡಲು ನಾನಾ ಕಾರಣ ನೀಡಲಾಗುತ್ತಿದೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ’ಬಿಡಿಎ ಮತ್ತು ಸರ್ಕಾರ ಒಂದಲ್ಲಾ ಒಂದು ಕಾರಣ ನೀಡಿ ವಿಚಾರಣೆ ಮುಂದೂಡುತ್ತಲೇ ಇರುವುದನ್ನು ನೋಡಿದರೆ ಇವರ ಉದ್ಧಟತನ ಅರಿವಾಗುತ್ತದೆ. ವ್ಯಾಜ್ಯವನ್ನು ಕೋರ್ಟ್ ಹೊರಗೆ ಇತ್ಯರ್ಥಪಡಿಸುವುದಾಗಿ ಹೇಳಿದ್ದ ಬಿಡಿಎ ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕೋರ್ಟ್ ಆದೇಶ ಪಾಲಿಸುತ್ತಿಲ್ಲ’ ಎಂದು ಕಿಡಿಕಾರಿದೆ.

‘ಮೂವರೂ ಆರೋಪಿಗಳ ವಿರುದ್ಧ ಸೆಪ್ಟೆಂಬರ್ 5ರಂದು ನ್ಯಾಯಾಂಗ ನಿಂದನೆ ಆರೋಪ ನಿಗದಿ ಮಾಡಲಾಗುವುದು’ ಎಂದು ಆದೇಶಿಸಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು