ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹477 ಕೋಟಿ ವೆಚ್ಚದಲ್ಲಿ ಹೈ-ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿ: ಬಿ.ಎಸ್.ಯಡಿಯೂರಪ್ಪ

‘ಬೆಂಗಳೂರು ಮಿಷನ್- 2022’ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ
Last Updated 31 ಜನವರಿ 2021, 1:12 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ₹477 ಕೋಟಿ ವೆಚ್ಚದಲ್ಲಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ 12 ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆ ಯೋಜನೆಗಳ ಟೆಂಡರ್ ಪ್ರಕ್ರಿಯೆಯನ್ನು ಏಪ್ರಿಲ್-2021ರೊಳಗೆ ಪೂರ್ಣಗೊಳಿಸಿ, ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶನಿವಾರ ನಡೆದ ‘ಬೆಂಗಳೂರು ಮಿಷನ್- 2022’ರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಈ ಕಾರಿಡಾರ್‌ಗಳ ಒಟ್ಟು ಉದ್ದ 190 ಕಿ.ಮೀ ಆಗಲಿದೆ.

‘ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಉಳಿದ ಕಾಮಗಾರಿಗಳನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ವೇಳೆ ಸುಸ್ಥಿತಿಯಲ್ಲಿರುವ ಪಾದಚಾರಿ ಮಾರ್ಗಗಳನ್ನು ಉಳಿಸಿಕೊಂಡು, ರಸ್ತೆ ಅಭಿವೃದ್ಧಿ ಪಡಿಸಬೇಕು. ಅನಗತ್ಯವಾಗಿ ಹಣ ಪೋಲು ಮಾಡಬೇಡಿ’ ಎಂದೂ ಸಲಹೆ ನೀಡಿದರು.

‘ಮುಂಬರುವ ಜೂನ್ ಅಂತ್ಯದೊಳಗೆ ನಮ್ಮ ಮೆಟ್ರೊ ಯೋಜನೆಯ ಕೆಂಗೇರಿ ವಿಸ್ತರಿತ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಲಾಗುವುದು. ವೈಟ್‍ಫೀಲ್ಡ್ ಮಾರ್ಗ ಹಾಗೂ ಎಲೆಕ್ಟ್ರಾನಿಕ್ ಸಿಟಿ ಮಾರ್ಗಗಳ ಕಾಮಗಾರಿಗಳನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗೆ ತೊಡಕು ಎದುರಾದರೆ, ಅವುಗಳನ್ನು ನಿವಾರಿಸಲು ಶೀಘ್ರವೇ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

‘11 ಕಿ.ಮೀ. ಉದ್ದದ ಕೆ-100 ರಾಜಕಾಲುವೆಯನ್ನು ಅಭಿವೃದ್ಧಿಗೊಳಿಸಲು ಟೆಂಡರ್ ಆಹ್ವಾನಿಸಲಾಗಿದೆ. ರಾಜಕಾಲುವೆಗೆ ತ್ಯಾಜ್ಯ ನೀರು ಸೇರದಂತೆ ತಡೆಯಲಾಗುತ್ತದೆ. 25 ಕೆರೆಗಳ ಅಭಿವೃದ್ಧಿ ಮತ್ತು ಪುನಃಶ್ಚೇತನ ಕಾಮಗಾರಿಯನ್ನು ಕೈಗೊಂಡಿದ್ದು, ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ಬೆಳ್ಳಂದೂರು ಮತ್ತು ವರ್ತೂರು ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ವಿವರಿಸಿದರು.

‘ನಗರದಲ್ಲಿ ಬೃಹತ್ ವೃಕ್ಷೋದ್ಯಾನಗಳನ್ನು ನಿರ್ಮಿಸಲಾಗುತ್ತಿದೆ. ಏಪ್ರಿಲ್-ಅಂತ್ಯಕ್ಕೆ ತುರಹಳ್ಳಿ (400 ಎಕರೆ), ಮೇ ಅಂತ್ಯಕ್ಕೆ ಕಾಡುಗೋಡಿ (102 ಎಕರೆ) ಮತ್ತು ಜೂನ್ ವೇಳೆಗೆ ಮಾಚೋಹಳ್ಳಿ (98 ಎಕರೆ) ವೃಕ್ಷೋದ್ಯಾನಗಳನ್ನು ಲೋಕಾರ್ಪಣೆ ಮಾಡಲಾಗುವುದು’ ಎಂದರು.

ಖಾತಾ, ಆಸ್ತಿ ತೆರಿಗೆ, ಜನನ ಮತ್ತು ಮರಣ ಪ್ರಮಾಣ ಪತ್ರ, ಉದ್ಯಮ ಪರವಾನಗಿ, ಕಟ್ಟಡ ನಕ್ಷೆ ಪರವಾನಗಿಯಂತಹ ನಾಗರಿಕ ಸೇವೆಗಳನ್ನು ಏಕೀಕೃತ ಡಿಜಿಟಲ್ ಪೋರ್ಟಲ್‌ನಡಿ ಒದಗಿಸುವಸರಳೀಕೃತ ವ್ಯವಸ್ಥೆ ಏಪ್ರಿಲ್‌ ವೇಳೆಗೆ ಲಭ್ಯವಾಗಲಿದೆ. ‘ಬೆಂಗಳೂರನ್ನು ಆಸ್ವಾದಿಸಿ’ ಯೋಜನೆಯ ಅನುಷ್ಠಾನಕ್ಕೆ ಶೀಘ್ರವೇ ಬೆಂಗಳೂರು ಪರಿಸರ ಮತ್ತು ಪರಂಪರೆ ಟ್ರಸ್ಟ್ ಸ್ಥಾಪಿಸಲಾಗುವುದು’ ಎಂದು ಹೇಳಿದರು.

‘ನಗರದಲ್ಲಿ ನಿತ್ಯ ಸುಮಾರು 4,500 ಟನ್ ಕಸ ಉತ್ಪಾದನೆಯಾಗುತ್ತಿದ್ದು, ವೈಜ್ಞಾನಿಕ ಮತ್ತು ಸಮರ್ಪಕ ಘನತ್ಯಾಜ್ಯ ನಿರ್ವಹಣೆಗಾಗಿ 15 ದಿನದೊಳಗೆ ವಿಶೇಷ ಉದ್ದೇಶದ ಘಟಕವನ್ನು (ಎಸ್‌ಪಿವಿ) ಸ್ಥಾಪಿಸಬೇಕು. ಮುಖ್ಯ ಕಾರ್ಯದರ್ಶಿಗಳು ಪ್ರತಿ ವಾರ ಈ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT