ಬುಧವಾರ, ಅಕ್ಟೋಬರ್ 16, 2019
21 °C
ಚಿಕ್ಕಬಾಣಾವರದ ಮನೆಯೊಂದರಲ್ಲಿ ಸ್ಫೋಟಕ ವಸ್ತು ವಶಕ್ಕೆ ಪಡೆದಿದ್ದ ಪ್ರಕರಣ l ಜೆಎಂಬಿ ಸಂಘಟನೆ ಸದಸ್ಯರೆಂಬ ಶಂಕೆ

ಶಂಕಿತ ಉಗ್ರರ ಡಿಎನ್ಎ ಪರೀಕ್ಷೆ: ಕೋರ್ಟ್ ಅಸ್ತು

Published:
Updated:

ಬೆಂಗಳೂರು: ನಗರದ ಹೊರವಲಯದ ಚಿಕ್ಕಬಾಣಾವರ ಹಳೆ ರೈಲ್ವೆ ರಸ್ತೆಯಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿ ಸ್ಫೋಟಕಗಳನ್ನು ಜಪ್ತಿ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಉಗ್ರರ ಡಿಎನ್ಎ ಪರೀಕ್ಷೆಗೆ ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ವಿಶೇಷ ನ್ಯಾಯಾಲಯ ಸಮ್ಮತಿ ನೀಡಿದೆ.

‘ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ–(ಜೆಎಂಬಿ)’ ಸಂಘಟನೆಗೆ ಸೇರಿದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ನಜೀರ್ ಶೇಖ್ ಅಲಿಯಾಸ್‌ ಪಟ್ಲಾ ಅನಾಸ್ (ತ್ರಿಪುರಾದಲ್ಲಿ ಬಂಧನಕ್ಕೊಳಗಾಗಿದ್ದ), ಬಾಂಗ್ಲಾದ ಜಹೀದುಲ್ಲಾ ಇಸ್ಲಾಂ ಅಲಿಯಾಸ್ ಕೌಸರ್‌ (ರಾಮನಗರದಲ್ಲಿ 2018ರಲ್ಲಿ ಬಂಧಿತನಾಗಿದ್ದ ಈತನನ್ನು ಬೋಧಗಯಾ ಪ್ರಕರಣದಲ್ಲಿ ಬಿಹಾರದ ಪಟ್ನಾ ಜೈಲಿನಲ್ಲಿರಿಸಲಾಗಿತ್ತು) ಮತ್ತು ಅಸ್ಸಾಂನ ಆರೀಫ್ ಹುಸೇನ್ ಅಲಿಯಾಸ್ ಮೋಟಾ ಅನಾಸ್ (ಈತನನ್ನೂ ಪಟ್ನಾದ ಜೈಲಿನಲ್ಲಿ ಇರಿಸಲಾಗಿತ್ತು) ಅವರ ಡಿಎನ್‌ಎ ಪರೀಕ್ಷೆ ನಡೆಸಲು ನ್ಯಾಯಾಧೀಶ ತ್ಯಾಗರಾಜ ಎನ್. ಇನವಳ್ಳಿ ಹಸಿರು ನಿಶಾನೆ ತೋರಿದ್ದಾರೆ.

ಪಶ್ಚಿಮ ಬಂಗಾಳದ ಬರ್ದ್ವಾನ್‌ನಲ್ಲಿ 2014ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ (30) ಎಂಬಾತನನ್ನು ದೊಡ್ಡಬಳ್ಳಾಪುರದಲ್ಲಿ ಜೂ.25ರಂದು ಬಂಧಿಸಲಾಗಿತ್ತು.

ವಿಚಾರಣೆ ವೇಳೆ ಹಬೀಬುರ್‌ನಿಂದ ದೊರೆತ ಮಾಹಿತಿ ಆಧರಿಸಿ ಎನ್‌ಐಎ ಅಧಿಕಾರಿಗಳು, ಚಿಕ್ಕಬಾಣಾವರ ನಿವಾಸಿ ಮಸ್ತಾನ್ ಎಂಬವರಿಗೆ ಸೇರಿದ್ದ ಬಾಡಿಗೆ ಮನೆ ಮೇಲೆ ದಾಳಿ ಮಾಡಿದ್ದರು.

‘ಶಂಕಿತರು ವ್ಯಾಪಾರಿಗಳ ಸೋಗಿನಲ್ಲಿ ಬಾಡಿಗೆಗೆ ಮನೆ ಪಡೆದಿದ್ದರು ಮತ್ತು ಇದನ್ನು ಬಾಂಬ್‌ ತಯಾರಿಕೆಗೆ ಕೇಂದ್ರವನ್ನಾಗಿಸಿಕೊಂಡಿದ್ದರು ಎಂಬುದು ದಾಳಿ ವೇಳೆ ಗೊತ್ತಾಗಿತ್ತು’ ಎಂದು ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿತ್ತು. ಆರೋಪಿಗಳು ಈ ಮನೆಯಲ್ಲಿ ನೆಲೆಸಿದ್ದರು ಎಂಬುದನ್ನು ಸಾಬೀತು ಮಾಡುವ ನಿಟ್ಟಿನಲ್ಲಿ ಡಿಎನ್‌ಎ ಪರೀಕ್ಷೆ ಅವಶ್ಯವಿದೆ’ ಎಂದು ಪ್ರತಿಪಾದಿಸಿತ್ತು.

ಈ ಪ್ರಕರಣದಲ್ಲಿ ಖಾದರ್ ಖಾಜಿ, ಹಬೀಬುರ್‌ ರಹಮಾನ್‌, ಎಸ್‌.ಕೆ.ಅದಿಲ್‌, ದಿಲಾವರ್ ಹುಸೇನ್, ಮುಸ್ತಫಿಜುರ್ ರಹಮಾನ್‌ ಮತ್ತು ಅಬ್ದುಲ್ ಕರೀಂ ಅವರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ. ಇವರೆಲ್ಲರೂ ಜೆಎಂಬಿ ಉಗ್ರ ಸಂಘಟನೆಗೆ ಸೇರಿದವರು ಎಂದು ಆರೋಪಿಸಲಾಗಿದೆ.

ಜಹೀದುಲ್‌ ಇಸ್ಲಾಂ ಹಾಗೂ ಆರೀಫ್ ಹುಸೇನ್‌ ಅವರನ್ನು ಬಿಹಾರದ ಬೋಧಗಯಾ ಸ್ಫೋಟ ಪ್ರಕರಣದಲ್ಲಿ ಪಟ್ನಾದ ಆದರ್ಶ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಅಲ್ಲಿಂದ ಬಾಡಿ ವಾರಂಟ್ ಆಧಾರದಲ್ಲಿ ಬೆಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸದ್ಯ ಇವರು ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಭಾರತೀಯ ದಂಡ ಸಂಹಿತೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಇವರ ವಿರುದ್ಧ  ಸೋಲದೇವನಹಳ್ಳಿ ಠಾಣೆಯಲ್ಲಿ ಕಳೆದ ತಿಂಗಳ 7ರಂದು ದೂರು ದಾಖಲಿಸಲಾಗಿದೆ.

ಜಪ್ತಿ ಮಾಡಿದ್ದ ವಸ್ತುಗಳು: ‘ಚಿಕ್ಕಬಾಣಾವರ ಮನೆಯ ಮೇಲೆ ನಡೆದ ದಾಳಿ ವೇಳೆ 5 ಸುಧಾರಿತ ಹ್ಯಾಂಡ್‌ ಗ್ರೆನೇಡ್‌, 3 ಗ್ರೆನೇಡ್‌ ಮುಚ್ಚಳ, 3 ಸುಧಾರಿತ ಸ್ಫೋಟಕ ಸಾಧನ (ಐಇಎ), 1 ಟೈಮರ್‌ ಬಾಂಬ್‌ ಸಾಧನ, 2 ರಾಕೆಟ್‌ ಬೆಂಡ್‌ಗಳು, ಒಂದು ರಾಕೆಟ್‌ ಕವಚ, 9 ಎಂಎಂ ಬುಲೆಟ್‌, ಒಂದು ಏರ್‌ ಗನ್‌, ಸ್ಫೋಟಕ್ಕೆ ಬಳಸಲಾಗುವ ಶಂಕಿತ ಪೌಡರ್‌ಸೇರಿ ವಿವಿಧ ವಸ್ತು ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು.

ಅಂತರರಾಷ್ಟ್ರೀಯ ಜಾಲದ ಶಂಕೆ

‘ಈ ಪ್ರಕರಣದಲ್ಲಿ ದೊರೆತಿರುವ ಗ್ರನೇಡ್, ರಾಕೆಟ್‌ ಲಾಂಚರ್ ಮತ್ತು ಸುಧಾರಿತ ಸ್ಫೋಟಕಗಳ ಸಂಗ್ರಹವನ್ನು ಗಮನಿಸಿದಾಗ ಉಗ್ರರು ಬೆಂಗಳೂರಿನಲ್ಲಿ ಪ್ರಮುಖ ವ್ಯಕ್ತಿಗಳು ಅಥವಾ ಸ್ಥಳಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದರು ಎಂಬುದು ನಮ್ಮ ಗುಮಾನಿ’
ಎಂದು ಎನ್‌ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್ ಹೇಳುತ್ತಾರೆ.

‘ಬೆಂಗಳೂರಿನಲ್ಲಿ ಈ ರೀತಿಯ ಸ್ಫೋಟಕ ವಸ್ತುಗಳನ್ನು ವಶಪಡಿಸಿ ಕೊಂಡಿರುವುದು ತೀರಾ ಅಪರೂಪ. ಹೀಗಾಗಿ ನಿಸ್ಸಂಶಯವಾಗಿಯೂ ಇದೊಂದು ಅಂತರರಾಷ್ಟ್ರೀಯ ಜಾಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Post Comments (+)