ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ–ಕಮಲಕ್ಕೆ ಮಾಡು ಮಡಿ ಕಣ

ಬಂಟ್ವಾಳ ಕ್ಷೇತ್ರ: ಮತ್ತೆ ಕಾಂಗ್ರೆಸ್‌– ಬಿಜೆಪಿ ನಡುವೆ ನೇರ ಹಣಾಹಣಿ
Last Updated 6 ಮೇ 2018, 12:37 IST
ಅಕ್ಷರ ಗಾತ್ರ

ಮಂಗಳೂರು: ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಆಗಾಗ ಮತೀಯ ದ್ವೇಷದ ಗಲಭೆಗಳಿಂದ ಸುದ್ದಿಯಾಗುತ್ತಿದ್ದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅವಧಿಗೂ ಮೊದಲೇ ಚುನಾವಣೆಯ ಕಾವು ಹಬ್ಬಿತ್ತು. ಆರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಹಿರಿಯ ನಾಯಕ ಬಿ.ರಮಾನಾಥ ರೈ ಪುನರಾಯ್ಕೆ ಬಯಸಿದ್ದಾರೆ. ಕಳೆದ ಬಾರಿ ಸೋಲು ಕಂಡಿದ್ದ ಬಿಜೆಪಿಯ ರಾಜೇಶ್ ನಾಯ್ಕ್‌ ಯು. ಈ ಬಾರಿ ಕ್ಷೇತ್ರವನ್ನು ವಶಕ್ಕೆ ಪಡೆಯಲು ಹೊಸ ಆಟಗಳನ್ನು ಹೂಡುತ್ತಿದ್ದಾರೆ. ಇಲ್ಲಿ ಈಗ ಕಾಂಗ್ರೆಸ್‌– ಬಿಜೆಪಿಯ ನಡುವೆ ಮಾಡು ಇಲ್ಲವೇ ಮಡಿ ಹೋರಾಟ ಆರಂಭವಾಗಿದೆ.

ಕಾಂಗ್ರೆಸ್‌ನಿಂದ ರಮಾನಾಥ ರೈ, ಬಿಜೆಪಿಯಿಂದ ರಾಜೇಶ್ ನಾಯ್ಕ್ ಯು., ಲೋಕ್‌ ಆವಾಝ್‌ ದಳದ ಗೋಪಾಲಕೃಷ್ಣ ಪೂಜಾರಿ ಪಣೋಲಿಬೈಲ್‌, ಎಂಇಪಿಯಿಂದ ಶಮೀರ್ ಮತ್ತು ಪಕ್ಷೇತರ ಅಭ್ಯರ್ಥಿ ಇಬ್ರಾಹಿಂ ಕೈಲಾರ್ ಕಣದಲ್ಲಿದ್ದಾರೆ. ಐವರು ಕಣದಲ್ಲಿದ್ದರೂ, ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಉಳಿದವರು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತೆ ಇದೆ. ತಮ್ಮ ಬಲ ಹೆಚ್ಚಿಸುಕೊಳ್ಳುವ ಮತ್ತು ಎದುರಾಳಿಗೆ ಇರುವ ಬೆಂಬಲವನ್ನು ಕುಗ್ಗಿಸುವ ತಂತ್ರಗಾರಿಕೆಯಲ್ಲಿ ಇಬ್ಬರೂ ಮುಳುಗಿದ್ದಾರೆ.

ಕರಾವಳಿ ರಾಜಕೀಯ ವಲಯದಲ್ಲಿ ‘ಬೇಬಿ ಅಣ್ಣ’ ಎಂದೇ ಪರಿಚಿತರಾಗಿರುವ ಸಚಿವ ಬಿ.ರಮಾನಾಥ ರೈ ಅವರಿಗೆ ಇದು ಎಂಟನೇ ಚುನಾವಣೆ. 1985 ರಿಂದ ಸತತ ಏಳು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅವರು, ಒಮ್ಮೆ ಮಾತ್ರ ಸೋತಿದ್ದಾರೆ. ಕ್ಷೇತ್ರ ‘ಕೈ’ ತಪ್ಪದಂತೆ ಮತ್ತಷ್ಟು ಬಿಗಿ ಹಿಡಿತ ಸಾಧಿಸಲು ಈವರೆಗಿನ ತಮ್ಮ ರಾಜಕೀಯ ಅನುಭವವನ್ನು ಪಣವಾಗಿ ಇರಿಸಿದ್ದಾರೆ. ಕಳೆದ ಬಾರಿ 17,850 ಮತಗಳ ಅಂತರದಿಂದ ಸೋಲು ಕಂಡಿದ್ದ ರಾಜೇಶ್ ನಾಯ್ಕ್‌, ಈ ಬಾರಿ ಅನುಭವಿ ರಾಜಕಾರಣಿಯನ್ನು ಮಣಿಸುವ ತವಕದಲ್ಲಿ ಹೋರಾಟಕ್ಕೆ ಇಳಿದಿದ್ದಾರೆ.

ಧರ್ಮವೇ ಅಸ್ತ್ರ: ಕೋಮು ರಾಜಕಾರಣದ ನೆಲೆವೀಡಿನಂತಿರುವ ಕಲ್ಲಡ್ಕ ಸೇರಿದಂತೆ ಬಂಟ್ವಾಳ ಕ್ಷೇತ್ರದಲ್ಲಿ ಹಲವು ಸೂಕ್ಷ್ಮ ಪ್ರದೇಶಗಳಿವೆ. ಇಲ್ಲಿ ಧರ್ಮದ ಆಧಾರದಲ್ಲಿ ಮತಗಳನ್ನು ಧ್ರುವೀಕರಣ ಮಾಡುವ ಪ್ರಯೋಗ ಆರಂಭವಾಗಿ ಬಹಳ ದಿನಗಳೇ ಕಳೆದಿವೆ. ಹಿಂದುತ್ವ ಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆ, ಹಲ್ಲೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ಮತ ಸೆಳೆಯಲು ಬಿಜೆಪಿ ಕಸರತ್ತು ಮಾಡುತ್ತಿದೆ. ರಮಾನಾಥ ರೈ ಮುಸ್ಲಿಮರ ಮತಗಳ ಮೇಲೆ ಕಣ್ಣಿಟ್ಟು ಕೆಲಸ ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಯಾರ ಕೈ ಮೇಲಾಗಬಹುದು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಕೊಲ್ಲೂರು ದೇವಸ್ಥಾನದಿಂದ ದೊರೆಯುತ್ತಿದ್ದ ನೆರವು ಸ್ಥಗಿತಗೊಳಿಸಿರುವುದು, ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿರುವ ವಿಷಯಗಳು ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಸದ್ದು ಮಾಡುತ್ತಿವೆ. ಆದರೆ, ಅಷ್ಟೇ ವೇಗದಲ್ಲಿ ಪ್ರತ್ಯುತ್ತರ ನೀಡುತ್ತಿರುವ ರಮಾನಾಥ ರೈ, ಎದುರಾಳಿ ಪಡೆಯನ್ನು ಕಟ್ಟಿಹಾಕುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

‘ನಾಲ್ಕೂವರೆ ವರ್ಷಗಳಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ₹ 1,200 ಕೋಟಿ ಅನುದಾನ ತಂದಿದ್ದೇನೆ’ ಎಂದು ಲೆಕ್ಕ ಕೊಡುತ್ತಿರುವ ರಮಾನಾಥ ರೈ, ‘ನನ್ನ ಕೆಲಸಕ್ಕೆ ಕೂಲಿ ಕೊಡಿ. ಬಂಟ್ವಾಳದ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಿ’ ಎನ್ನುತ್ತಿದ್ದಾರೆ. ‘ರಮಾನಾಥ ರೈ ಅವರಿಗೆ ಬಂಟ್ವಾಳದ ಅಭಿವೃದ್ಧಿ ಕುರಿತು ದೂರದೃಷ್ಟಿ ಇಲ್ಲ. ಉದ್ಯೋಗ ಸೃಷ್ಟಿ ಮಾಡದೇ ಯುವಜನರನ್ನು ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸುತ್ತಿರುವ ರಾಜೇಶ್ ನಾಯ್ಕ್‌ ಬದಲಾವಣೆಗೆ ಮತ ಕೇಳುತ್ತಿದ್ದಾರೆ.

ಪೂಜಾರಿಯತ್ತ ಎಲ್ಲರ ನೋಟ: ಸಚಿವರ ರೈ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ನಡುವಿನ ಸಂಬಂಧ ಇತ್ತೀಚಿನವರೆಗೂ ಹಳಸಿತ್ತು. ಆದರೆ, ನಾಮಪತ್ರ ಸಲ್ಲಿಸುವ ಮುನ್ನ ಪೂಜಾರಿಯವರ ಕಾಲಿಗೆರಗಿ ಆಶೀರ್ವಾದ ಪಡೆಯುವ ಮೂಲಕ ಸಚಿವರು ಹೊಸ ದಾಳ ಉರುಳಿಸಿದ್ದರು. ರೈ ವಿರುದ್ಧ ಮತ ಚಲಾವಣೆಗೆ ಪೂಜಾರಿಯವರು ತೆರೆಯ ಮರೆಯಲ್ಲಿ ಸಂದೇಶ ರವಾನಿಸಬಹುದು ಎಂಬ ಬಿಜೆಪಿ ಮುಖಂಡರ ಆಸೆ ಬಹುತೇಕ ಹುಸಿಯಾದಂತೆ ಕಾಣಿಸುತ್ತಿದೆ.

ಪೂಜಾರಿಯವರ ಆಪ್ತರಾಗಿದ್ದ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದ ಬಿಜೆಪಿ, ಅವರ ಮೂಲಕ ಬಿಲ್ಲವ ಮತಗಳನ್ನು ಒಡೆಯುವ ತಂತ್ರಗಾರಿಕೆ ಹೆಣೆದಿತ್ತು. ವಿಜಯಾ ಬ್ಯಾಂಕ್‌ನ ಮಾಜಿ ಅಧಿಕಾರಿ ಬೇಬಿ ಕುಂದರ್‌ ಅವರನ್ನು ಪಕ್ಷಕ್ಕೆ ಕರೆತಂದಿರುವ ರೈ, ಬಿಲ್ಲವರ ಮತಗಳನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ.

ಕಳೆದ ಬಾರಿ ಇಲ್ಲಿ ಎಸ್‌ಡಿಪಿಐ ಅಭ್ಯರ್ಥಿ 6,113 ಮತ ಗಳಿಸಿದ್ದರು. ಈ ಬಾರಿ ಅದು ದುಪ್ಪಟ್ಟಾಗುವ ಸಾಧ್ಯತೆ ಗೋಚರಿಸಿತ್ತು. ಆದರೆ, ಕಾಂಗ್ರೆಸ್‌ನ ತಂತ್ರಗಾರಿಕೆಯ ಫಲವಾಗಿ ಎಸ್‌ಡಿಪಿಐ ಅಭ್ಯರ್ಥಿ ಕಣದಲ್ಲಿ ಉಳಿದಿಲ್ಲ. ಇದು ಚುನಾವಣೆಯ ಫಲಿತಾಂಶದಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಇದೆ. ಇಲ್ಲಿ ಅಭಿವೃದ್ಧಿಗಿಂತಲೂ ಹೆಚ್ಚಾಗಿ ಇತರೆ ವಿಚಾರಗಳೇ ಸೋಲು– ಗೆಲುವಿನ ಅಂತರವನ್ನು ನಿರ್ಧರಿಸುವಂತಿದೆ.

ಕಣದಲ್ಲಿರುವ ಅಭ್ಯರ್ಥಿಗಳು

ಬಿ.ರಮಾನಾಥ ರೈ; ಕಾಂಗ್ರೆಸ್

ರಾಜೇಶ್ ನಾಯ್ಕ್ ಯು. ;ಬಿಜೆಪಿ

ಬಾಲಕೃಷ್ಣ ಪೂಜಾರಿ ಪಣೋಲಿಬೈಲ್; ಲೋಕ್‌    ಆವಾಝ್ ದಳ

ಶಮೀರ್‌;  ಎಂಇಪಿ

ಇಬ್ರಾಹಿಂ ಕೈಲಾರ್; ಪಕ್ಷೇತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT