ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಭಾವನೆ ದುರ್ಬಲವಾದರೆ ಉಳಿವಿಲ್ಲ: ಸಚಿವ ಸಿ.ಟಿ. ರವಿ

ಛತ್ರಪತಿ ಶಿವಾಜಿ ಜಯಂತಿ
Last Updated 19 ಫೆಬ್ರುವರಿ 2020, 21:37 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವೆಲ್ಲಾ ಒಂದು. ನಾವೆಲ್ಲಾ ಹಿಂದೂ ಎಂಬ ಭಾವನೆ ದುರ್ಬಲವಾದ ದಿನ ಭಾರತವೂ ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶದಂತೆಯೇ ಆಗಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ಹಿಂದೂ ಭಾವ ದುರ್ಬಲಗೊಂಡ ಕಾರಣಕ್ಕೆ ಪಾಕಿಸ್ತಾನ, ಅಫ್ಗಾನಿಸ್ತಾನ, ಬಾಂಗ್ಲಾದೇಶ ಹುಟ್ಟಿಕೊಂಡವು. ಈ ಭಾವ ದುರ್ಬಲಗೊಂಡರೆ ದೇಶಕ್ಕೆ ಉಳಿಗಾಲವಿಲ್ಲ’ ಎಂದರು.

‘ಹೀಗಾಗಿ ಹಿಂದೂ ಭಾವನೆಯನ್ನು ಜಾಗೃತವಾಗಿ ಇಟ್ಟುಕೊಳ್ಳೋಣ. ದೇಶ ಉಳಿಸಲು ಈಗ ಕತ್ತಿ ಹಿಡಿದು ಹೋರಾಡಬೇಕಿಲ್ಲ. ಪ್ರಜಾಪ್ರಭುತ್ವದ ಮಾರ್ಗದಲ್ಲೇ ದೇಶವನ್ನು ರಕ್ಷಿಸೋಣ’ ಎಂದರು.

‘ಒಂದು ವೇಳೆ ಶಿವಾಜಿ ಈ ದೇಶದಲ್ಲಿ ಜನ್ಮತಾಳದೇ ಇದ್ದಿದ್ದರೆ ನಮ್ಮ ತಾಯಂದಿರ ಹಣೆಯ ಮೇಲೆ ಕುಂಕುಮವೇ ಇರುತ್ತಿರಲಿಲ್ಲ. ಉತ್ತರ ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಮತ್ತು ದಕ್ಷಿಣದ ಸುತ್ತಲೂ ಶಾಹಿಗಳ ಸಾಮ್ರಾಜ್ಯ ಇದ್ದ ಸಂದರ್ಭದಲ್ಲಿ ಹಿಂದವೀಸಾಮ್ರಾಜ್ಯವನ್ನು ಶಿವಾಜಿ ಏಕಾಂಗಿಯಾಗಿ ಕಟ್ಟಿ ತೋರಿಸಿದರು’ ಎಂದು ಹೇಳಿದರು.

‘ನಾವು ಮೊದಲು ಬಿಜೆಪಿ ಬಾವುಟ ಕಟ್ಟಿದಾಗ ನನ್ನ ತಂದೆಯೇ ಅದ್ಯಾವ ಪಕ್ಷ, ದೇವೇಗೌಡರ ಪಕ್ಷ ಸೇರಿಕೊ ಎಂದಿದ್ದರು. ಶಿವಾಜಿ ಪ್ರೇರಣೆ ಇದ್ದ ಕಾರಣಕ್ಕೆ ಬಿಜೆಪಿಯಲ್ಲೇ ಉಳಿದೆ, ರಾಜಕೀಯವಾಗಿ ಬೆಳೆದೆ’ ಎಂದರು.

‘ಮರಾಠ ಸಮುದಾಯವನ್ನು ಪ್ರವರ್ಗ–2ಎಗೆ ಸೇರ್ಪಡೆ ಮಾಡಬೇಕು. ಈ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ ₹100 ಕೋಟಿ ಮೀಸಲಿಡಬೇಕು ಎಂಬ ಮರಾಠ ಸಮುದಾಯದ ಮನವಿಯನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.

ವಿಯೆಟ್ನಾಂಗೂ ಶಿವಾಜಿ ಮಾದರಿ
‘ಬಲಾಢ್ಯ ಅಮೆರಿಕ ವಿರುದ್ಧ ವಿಯೆಟ್ನಾಂ ಜಯ ಗಳಿಸಲು ಪ್ರೇರಣೆಯಾಗಿದ್ದು ಕೂಡ ಶಿವಾಜಿ ಯುದ್ಧ ನೀತಿಗಳು’ ಎಂದು ಸಿ.ಟಿ. ರವಿ ಹೇಳಿದರು.

‘ಗೆರಿಲ್ಲಾ ಮಾದರಿಯ ಯುದ್ಧವನ್ನು ಮೊದಲು ಹುಟ್ಟುಹಾಕಿದ್ದೇ ಶಿವಾಜಿ ಮಹಾರಾಜರು. ಅಮೆರಿಕ ವಿರುದ್ಧ ಗೆಲ್ಲಲು ಸಾಧ್ಯವಾಗಿದ್ದೇ ಈ ನೀತಿ ಎಂದು ವಿಯೆಟ್ನಾಂ ಹೇಳಿಕೊಂಡಿದೆ’ ಎಂದರು.

ಶ್ರೀಮಂತ ಪಾಟೀಲರ ಮರಾಠಿ ಭಾಷಣ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜವಳಿ ಮತ್ತು ಕೈಮಗ್ಗ ಸಚಿವ ಶ್ರೀಮಂತ ಪಾಟೀಲ ಮರಾಠಿಯಲ್ಲಿ ಭಾಷಣ ಮಾಡಿದರು. ಮರಾಠಿಯಲ್ಲಿ ಭಾಷಣ ಆರಂಭಿಸಿ, ನಡುವೆ ಒಂದೆರಡು ಪದಗಳನ್ನು ಮಾತ್ರ ಕನ್ನಡದಲ್ಲಿ ಉಚ್ಚರಿಸಿದರು.

‘ಏಕಾಂಗಿಯಾಗಿ ಸಾಮ್ರಾಜ್ಯ ಕಟ್ಟಿದ ಶಿವಾಜಿ ತಮ್ಮ ಆಡಳಿತದಲ್ಲಿ ದಲಿತರು, ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT