ಭಾನುವಾರ, ಆಗಸ್ಟ್ 9, 2020
22 °C
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅಭಿಮತ l ಕೆಆರ್‌ಎಸ್ ಪಕ್ಷ ಉದ್ಘಾಟನೆ

‘ಹಿಂದುತ್ವ ಪ್ರತಿಪಾದನೆ: ಸಮಾನತೆಗೆ ತೊಡಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದಲ್ಲಿ ಸದ್ಯದ ಪರಿಸ್ಥಿತಿ ಆತಂಕವನ್ನು ಹುಟ್ಟಿಸುತ್ತಿದೆ. ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ ಸೇರಿದಂತೆ ವಿವಿಧ ಧರ್ಮದವರ ಮೇಲೆ ಹಿಂದುತ್ವ ಹೇರುವುದರಿಂದ ಸಮಾನತೆ ತರಲು ಸಾಧ್ಯವಿಲ್ಲ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅಭಿಪ್ರಾಯಪಟ್ಟರು. 

ನಗರದಲ್ಲಿ ಶನಿವಾರ, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಿಂದುತ್ವ ಪ್ರತಿಪಾದನೆ ಮಾಡಲಾಗುತ್ತಿದೆ’ ಎಂದರು. 

‘60–70ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಅಭಾವವಿದೆ. ಹಿಂದೆ ಪ್ರತಿ ರಾಜ್ಯದಲ್ಲಿ ಇಬ್ಬರು ರಾಷ್ಟ್ರಮಟ್ಟದ ನಾಯಕರು ಕಾಣಸಿಗುತ್ತಿದ್ದರು. ರಾಜಕಾರಣ ಹದಗೆಟ್ಟಿದ್ದು, ಪಕ್ಷದೊಳಗೆ ಅಧಿಕಾರಕ್ಕಾಗಿ ನಾಯಕರು ಪರಸ್ಪರ ಕತ್ತಿ ಮಸೆಯುತ್ತಿದ್ದಾರೆ. ರಾಜೀನಾಮೆ ನೀಡುವ ರಾಜಕಾರಣಿಗಳ ಕಾಲು ಹಿಡಿಯುವ ಮಟ್ಟಕ್ಕೆ ರಾಜಕಾರಣ ತಲುಪಿರುವುದು ಬೇಸರದ ಸಂಗತಿ’ ಎಂದರು. 

ಸಾಮಾಜಿಕ ಕಾರ್ಯಕರ್ತ ಎಸ್‌.ಆರ್. ಹಿರೇಮಠ, ‘ಅಭಿವೃದ್ಧಿಯ ಹೆಸರಿನಲ್ಲಿ ನಿಸರ್ಗದ ಮೇಲೆ ಪ್ರಹಾರ ಮಾಡುತ್ತಿರುವುದರಿಂದಲೇ ಪ್ರಾಕೃತಿಕ ವಿಕೋಪಗಳು ಕಾಣಿಸಿಕೊಳ್ಳುತ್ತಿವೆ. ವ್ಯವಸ್ಥೆಯಲ್ಲಿ  ಮೂಲಭೂತ ಬದಲಾವಣೆ ಆಗಬೇಕು. ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಆದ್ಯತೆ ನೀಡಿ, ಹೊಸ ಆರ್ಥಿಕ ನೀತಿ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು. 

ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ‘ರಾಜ್ಯದ ಸಮಗ್ರ ಅಭಿವೃದ್ಧಿಗೆ ನೀಲ ನಕ್ಷೆ ರೂಪಿಸಲಾಗಿದೆ. ಬಡತನ ನಿವಾರಣೆಗೆ ಸಂಪೂರ್ಣವಾಗಿ ಮದ್ಯ ನಿಷೇಧ, ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ನಿರುದ್ಯೋಗಿ ಪದವೀಧರರಿಗೆ ಮಾಸಾಶನ, ಬಿಬಿಎಂಪಿ ಕಚೇರಿಗಳಲ್ಲಿ ಪಾರದರ್ಶಕತೆ, ಭ್ರಷ್ಟಾಚಾರಕ್ಕೆ ಕಡಿವಾಣ, ನೀರಿನ ಸದ್ಬಳಕೆ ಸೇರಿದಂತೆ ವಿವಿಧ ಯೋಜನೆಗಳು ಇದರಲ್ಲಿ ಸೇರಿವೆ’ ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು