ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾತು, ಬರಹದಲ್ಲೂ ಎಚ್‌ಕೆಆರ್‌ ಪರಿಣಿತ: ಗುರುರಾಜ ಕರಜಗಿ

Published 8 ಆಗಸ್ಟ್ 2024, 23:02 IST
Last Updated 8 ಆಗಸ್ಟ್ 2024, 23:02 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವರು ಒಳ್ಳೆಯ ಮಾತುಗಾರರಾಗಿರುತ್ತಾರೆ, ಉತ್ತಮ ಬರಹಗಾರರಾಗಿರುವುದಿಲ್ಲ. ಇನ್ನು ಕೆಲವರು ಉತ್ತಮ ಬರಹಗಾರರಾಗಿರುತ್ತಾರೆ, ವಾಗ್ಮಿಗಳಾಗಿರುವುದಿಲ್ಲ. ಎಚ್‌.ಕೆ. ರಂಗನಾಥ ಅವರು ಎರಡೂ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದ್ದರು ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ತಿಳಿಸಿದರು.

ರಂಗ ಸಂಗ, ಭಾರತೀಯ ವಿದ್ಯಾಭವನ, ಕಲಾಗಂಗೋತ್ರಿ, ನವಚೇತನ ಟ್ರಸ್ಟ್‌ ಸಹಯೋಗದಲ್ಲಿ ಗುರುವಾರ ನಗರದಲ್ಲಿ ನಡೆದ ಎಚ್‌.ಕೆ. ರಂಗನಾಥ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ರಂಗಭೂಮಿ’ ಸೇರಿದಂತೆ ಅನೇಕ ಕೃತಿಗಳನ್ನು ವಿಶಿಷ್ಠ ಶೈಲಿಯಲ್ಲಿ ಬರೆದಿರುವ ಅವರು ಆಕರ್ಷಕ ಮಾತುಗಾರರೂ ಆಗಿದ್ದರು ಎಂದರು.

ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌. ಸುರೇಶ್‌ ಮಾತನಾಡಿ, ‘ಭಾರತೀಯ ವಿದ್ಯಾಭವನದಲ್ಲಿ 20 ವರ್ಷ ಅನೇಕ ಪ್ರಯೋಗಗಳನ್ನು ಎಚ್‌ಕೆಆರ್‌ ಮಾಡಿದ್ದರು. ಶಿಸ್ತು ಮತ್ತು ಸಮಯ ಪಾಲನೆಗೆ ಮಹತ್ವ ನೀಡುತ್ತಿದ್ದರು. ಅದ್ಭುತ ಸಂವಹನ ಕೌಶಲ ಹೊಂದಿದ್ದರು’ ಎಂದು ನೆನಪು ಮಾಡಿಕೊಂಡರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಮಾತನಾಡಿ, ‘ಎಚ್‌ಕೆಆರ್‌ ತಾನೊಬ್ಬನೇ ಬೆಳೆಯದೇ ಅನೇಕರನ್ನು ಬೆಳೆಸಿದರು. ಎಚ್‌. ನರಸಿಂಹಯ್ಯ, ಬಿ.ಚಂದ್ರಶೇಖರ್‌ ಜೊತೆಗೆ ಸೇರಿ ಅನೇಕ ರಂಗಚಟುವಟಿಕೆ ಮಾಡಿದ್ದಲ್ಲದೇ, ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು. ಅವರ ಕಾಲದ ರಂಗಭೂಮಿ ಮತ್ತು ಈಗಿನ ರಂಗಭೂಮಿಯ ಬಗ್ಗೆ ಚರ್ಚೆಗಳಾಗಬೇಕು. ಮರುಕಟ್ಟುವ ಕೆಲಸಗಳಾಗಬೇಕು’ ಎಂದು ಸಲಹೆ ನೀಡಿದರು.

ಹಾಸ್ಯ ಸಾಹಿತಿ ವೈ.ವಿ. ಗುಂಡೂರಾವ್‌ ಮಾತನಾಡಿ, ‘ಬರಹಗಾರನಾಗಿ, ಬೋಧಕನಾಗಿ, ಕಲಾವಿದನಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಧಾರವಾಡ ಆಕಾಶವಾಣಿ ಆರಂಭವಾಗಲು ಕಾರಣಕರ್ತರಾಗಿದ್ದರು. ಅವರು ರಂಗನಟರೂ ಆಗಿದ್ದರಿಂದ ವಾರ್ತಾವಾಚನವು ನಾಟಕದ ಭಾವ ಬರುವಂತೆ ಇರುತ್ತಿತ್ತು’ ಎಂದು ಬಣ್ಣಿಸಿದರು.

ರಂಗಸಂಗದ ಮುಖ್ಯಸ್ಥೆ ಅಂಜನಾ ಪ್ರಭಾಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನೂರು ಅನಂತಕೃಷ್ಣಶರ್ಮ ಮತ್ತು ತಂಡದಿಂದ ವಾದ್ಯವೃಂದ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT