ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಡಿ.ಜೆ.ಹಳ್ಳಿ ಗಲಭೆಗೆ ಸಾಮ್ಯತೆ: ಆರಗ ಜ್ಞಾನೇಂದ್ರ

Last Updated 22 ಏಪ್ರಿಲ್ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೂ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗೂ ಸಾಮ್ಯತೆ ಇದೆ. ಪೊಲೀಸರು ಸ್ವಲ್ಪ ನಿರ್ಲಕ್ಷ್ಯ ತೋರಿದ್ದರೂ ಇಡೀ ಹುಬ್ಬಳ್ಳಿಯೇ ಹೊತ್ತಿ ಉರಿಯುತ್ತಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟು ಜನರ ಮೇಲಿನ ಕೇಸ್‌ ವಾಪಸ್‌ ತೆಗೆದುಕೊಂಡ ಪರಿಣಾಮವನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಹಲವು ‘ಕಾಣದ ಕೈ’ಗಳು ಗಲಭೆಯ ಹಿಂದಿವೆ. ತನಿಖೆಯಿಂದ ಬಯಲಿಗೆ ಬರಲಿದೆ’ ಎಂದರು.

‘ಹುಬ್ಬಳ್ಳಿ, ಡಿ.ಜೆ.ಹಳ್ಳಿ ಮಾದರಿಯ ಗಲಭೆ ದೇಶದ ಹಲವು ಕಡೆಗಳಲ್ಲಿ ನಡೆದಿವೆ. ಇವು ಇದಕ್ಕಿದ್ದಂತೆ ಆದ ಗಲಭೆಗಳಂತೂ ಅಲ್ಲ. ಆದರೆ, ಪೊಲೀಸರು ಹುಬ್ಬಳ್ಳಿಯಲ್ಲಿ ಭಾರಿ ಅನಾಹುತ ಆಗುವುದನ್ನು ತಪ್ಪಿಸಿರುವುದರಿಂದ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರ ಹಿಂದಿರುವ ದೇಶದ್ರೋಹಿ ಸಂಘಟನೆಗಳು ಬಯಲಿಗೆ ಬರಲಿವೆ. ತಪ್ಪಿತ್ಥರನ್ನು ಮಾತ್ರ ಬಂಧಿಸಲಾಗುತ್ತಿದ್ದು, ತಪ್ಪು ಮಾಡದವರನ್ನು ಬಂಧಿಸುವುದಿಲ್ಲ’ ಎಂದು ಜ್ಞಾನೇಂದ್ರ ಹೇಳಿದರು.

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಗಲಭೆಗಳು ನಡೆದಾಗ ಇಷ್ಟೆಲ್ಲ ಬಂಧನ ಆಗುತ್ತಿತ್ತೇ? ಕಟ್ಟುನಿಟ್ಟಾದ ತನಿಖೆ ನಡೆಯುತ್ತಿತ್ತೆ ಎಂದು ಪ್ರಶ್ನಿಸಿದ ಅವರು, ವಿಡಿಯೊ ದೃಶ್ಯಾವಳಿಗಳನ್ನು ಆಧರಿಸಿ ಅಪರಾಧ ಎಸಗಿದವರನ್ನು ಪತ್ತೆ ಮಾಡಿ ಬಂಧಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ಸಣ್ಣ ದಾಖಲಾತಿ ಸಿಕ್ಕಿದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಯವರ ಅನುಮತಿ ಪಡೆದು ಸಿಐಡಿ ತಂಡವನ್ನು ರಚನೆ ಮಾಡಿದೆವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿಯನ್ನು ಬಂಧಿಸಲಾಗುವುದು. ಬಂಧಿಸದೇ ಬಿಟ್ಟರೆ ಅದು ವೈಫಲ್ಯವಾಗುತ್ತದೆ. ನಮ್ಮ ಆಡಳಿತದಲ್ಲಿ ಎಲ್ಲರಿಗೂ ಒಂದೇ ಕಾನೂನು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT