ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ನಷ್ಟದಿಂದಾಗಿ ಮುಚ್ಚಿದ 800 ಸಹಕಾರ ಸಂಘಗಳು: ಗೃಹ ಸಚಿವ ಆರಗ ಜ್ಞಾನೇಂದ್ರ

ಸಂಯುಕ್ತ ಸಹಕಾರಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
Last Updated 20 ಸೆಪ್ಟೆಂಬರ್ 2022, 4:57 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತದ ಚುಕ್ಕಾಣಿ ಹಿಡಿದವರು ಪ್ರಾಮಾಣಿಕವಾಗಿ ನಡೆದುಕೊಳ್ಳದಿದ್ದರೆ ಸಹಕಾರ ಸಂಸ್ಥೆಗಳು ಸಂಕಷ್ಟ ಎದುರಿಸುತ್ತವೆ. ಪ್ರಸಕ್ತ ರಾಜ್ಯದಲ್ಲಿ 800ಕ್ಕೂ ಹೆಚ್ಚು ಸಹಕಾರ ಸಂಘಗಳು ಬಾಗಿಲು ಮುಚ್ಚಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸೋಮವಾರ ಹಮ್ಮಿಕೊಂಡಿದ್ದ ಸಹಕಾರ ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸದ್ಯ 5,500ಕ್ಕೂ ಹೆಚ್ಚುಸಹಕಾರ ಸಂಘಗಳಿವೆ. ಬಹುತೇಕ ಸಂಘಗಳು ಲಾಭದಲ್ಲಿ ನಡೆಯುತ್ತಿವೆ. ಕೆಲವು ಸಂಘಗಳಲ್ಲಿ ಹಗರಣಗಳು ನಡೆದಿವೆ. ಅಂತಹ 50 ಸಂಘಗಳನ್ನು ಪತ್ತೆ ಹಚ್ಚಲಾಗಿದೆ. ಸಾಲ ಪಡೆದವರು ಮರುಪಾವತಿಸದ, ಅಸಮರ್ಪಕ ಆಡಳಿತ ನಿರ್ವಹಣೆಯ ಕಾರಣ 800 ಸಂಘಗಳು ಆರ್ಥಿಕ ನಷ್ಟ ಅನುಭವಿಸಿವೆ. ಇಂತಹ ಸಮಸ್ಯೆಗಳಿಗೆ ಸಹಕಾರಿಗಳು ಆಂತರಿಕವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೊರಗಿನ ಸಾಲ ಪಡೆಯದೇ, ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಸ್ವಾವಲಂಬನೆ ಸಾಧಿಸಲು ಸಹಕಾರ ಸಂಘಗಳು ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್‌. ಉಮಾಶಂಕರ್, ಸಹಕಾರ ಕ್ಷೇತ್ರ ಯಶಸ್ವಿಯಾಗಲು ಮಧ್ಯರ್ತಿಗಳ ಹಾವಳಿ ತಪ್ಪಬೇಕು. ಸರ್ಕಾರಗಳೂ ಅನವಶ್ಯಕವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ದೂರುಗಳು ಬಂದಾಗ, ಸಮಸ್ಯೆಗಳು ಎದುರಾದಾಗ ಸಾರ್ವಜನಿಕರ ಹಿತಾಸಕ್ತಿ ಸಂರಕ್ಷಿಸಲು ಸರ್ಕಾರ ಮಧ್ಯೆ ಪ್ರವೇಶಿಸುತ್ತದೆ. ಹಾಗಾಗಿ, ಆಡಳಿತ ಮಂಡಳಿ, ಅಧಿಕಾರಿಗಳು ಪಾರದರ್ಶಕವಾಗಿನಡೆದುಕೊಳ್ಳಬೇಕು. ಸಾಲ ವಸೂಲಾತಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಮಾಜಿ ಸಚಿವ ಎಸ್‌.ಎಸ್.ಪಾಟೀಲ, ಸಹಕಾರಿಗಳ ನಿಬಂಧಕ ಕ್ಯಾಪ್ಟನ್‌ ಕೆ.ರಾಜೇಂದ್ರಕುಮಾರ್, ನಿವೃತ್ತ ಅಧಿಕಾರಿ ಸಿ.ಎನ್‌.ಪರಶಿವಮೂರ್ತಿ, ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ, ಉಪಾಧ್ಯಕ್ಷ ಪ್ರಸನ್ನಕುಮಾರ್, ನಿರ್ದೇಶಕರಾದ ಬಿ.ಎಚ್.ಕೃಷ್ಣಾರೆಡ್ಡಿ, ಕೆ. ಶಿವಲಿಂಗಪ್ಪ, ಪ್ರಭುದೇವ್, ಮಲ್ಲಿಕಾರ್ಜುನ ಹೊರಕೇರಿ, ನಾಗರಾಜ ದೇಶಪಾಂಡೆ, ಜಗದೀಶ ಕವಟಗಿಮಠ, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT