ಶನಿವಾರ, ಜೂನ್ 25, 2022
25 °C
ವಿದ್ಯಾರಣ್ಯಪುರ: ಮೂವರು ಆರೋಪಿಗಳ ಬಂಧನ

ಹಗಲಿನಲ್ಲಿ ಮನೆ ಗುರುತು: ರಾತ್ರಿ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಹಗಲು ಸುತ್ತಾಡಿ ಮನೆಗಳನ್ನು ಗುರುತಿಸಿ ರಾತ್ರಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಮೂವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

‘ಯಶವಂತಪುರ ವಿನಾಯಕನಗರದ ಶ್ರೀನಿವಾಸ್ ಅಲಿಯಾಸ್ ಸಿಲಿಂಡರ್ (38), ರಾಜಾನುಕುಂಟೆಯ ಸತೀಶ್‌ಕುಮಾರ್ ಅಲಿಯಾಸ್ ಕೊಕ್ಕರೆ (34) ಹಾಗೂ ಹೊಸಕೋಟೆ ನಂದಗುಡಿಯ ಶಿವನಪುರದ ರಾಜಣ್ಣ ಅಲಿಯಾಸ್ ಕರಡಿ (38) ಬಂಧಿತ. ಇವರಿಂದ ₹ 824 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿದ್ಯಾರಣ್ಯಪುರದ ಮುನೇಶ್ವರ ಬಡಾವಣೆ ಹಾಗೂ ದೇವಪ್ಪ ಬಡಾವಣೆಯ ಎರಡು ಮನೆಗಳಲ್ಲಿ ಇತ್ತೀಚೆಗೆ ಕಳ್ಳತನವಾಗಿತ್ತು. ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿಗಳ ಸುಳಿವು ಸಿಕ್ಕಿತ್ತು’ ಎಂದೂ ತಿಳಿಸಿದರು.

26 ಪ್ರಕರಣದಲ್ಲಿ ಆರೋಪಿ: ‘ಬಂಧಿತ ಆರೋಪಿ ಶ್ರೀನಿವಾಸ್, ಪದೇ ಪದೇ ಅಪರಾಧ ಕೃತ್ಯ ಎಸಗುತ್ತಿದ್ದ. ಈತನ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 26 ಪ್ರಕರಣಗಳು ದಾಖಲಾಗಿದ್ದವು’ ಎಂದು ಪೊಲೀಸರು ಹೇಳಿದರು.

‘ಇನ್ನೊಬ್ಬ ಆರೋಪಿ ಸತೀಶ್ ವಿರುದ್ಧವೂ 20 ಪ್ರಕರಣಗಳು ದಾಖಲಾಗಿದ್ದವು. ಮತ್ತೊಬ್ಬ ಆರೋಪಿ ರಾಜಣ್ಣ, ಎರಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮೂವರು ತಂಡ ಕಟ್ಟಿಕೊಂಡು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು’ ಎಂದೂ ತಿಳಿಸಿದರು.

‘ನಗರದ ಹಲವೆಡೆ ಹಗಲಿನಲ್ಲಿ ಆರೋಪಿಗಳು ಸಂಚರಿಸುತ್ತಿದ್ದರು. ಬೀಗ ಹಾಕಿರುತ್ತಿದ್ದ, ಅಂಗಣದಲ್ಲಿ ಕಸ ಬಿದ್ದಿರುತ್ತಿದ್ದ ಹಾಗೂ ರಂಗೋಲಿ ಹಾಕಿರದ ಮನೆಗಳನ್ನು ಗುರುತಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ರಾತ್ರಿ ಮನೆಗಳ ಬೀಗ ಮುರಿದು ಒಳಗೆ ನುಗ್ಗುತ್ತಿದ್ದರು. ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು