ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲಿ ಮಧುಮಹೋತ್ಸವ

ಮೂರು ದಿನಗಳ ಕಾರ್ಯಾಗಾರ l ಪ್ರಗತಿಪರ ಜೇನು ಕೃಷಿಕರಿಗೆ ಸನ್ಮಾನ l ಗಮನಸೆಳೆದ ವಿವಿಧ ಯಂತ್ರಗಳು
Last Updated 28 ಡಿಸೆಂಬರ್ 2019, 5:35 IST
ಅಕ್ಷರ ಗಾತ್ರ

ಬೆಂಗಳೂರು: ತುಡುವೆ, ಹೊಂಗೆ, ನೇರಳೆ, ಮುಜಂಟಿ, ಮೆಲ್ಲಿಫೆರ... ಸೇರಿದಂತೆ ವಿವಿಧ ಜೇನುತುಪ್ಪ ಹಾಗೂ ಇತರ ಉತ್ಪನ್ನಗಳನ್ನು ಕಣ್ತುಂಬಿಕೊಂಡ ನಗರದ ಜನತೆ, ಮಧುವನ್ನೂ ಸವಿದರು.

ತೋಟಗಾರಿಕೆ ಇಲಾಖೆಯು ನಗರದ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ‘ಜೇನುಗಾರಿಕೆ ಕಾರ್ಯಾಗಾರ’ ಹಾಗೂ ‘ಮಧು ಮಹೋತ್ಸವ’ಕ್ಕೆ ಸಚಿವ ವಿ.ಸೋಮಣ್ಣ ಶುಕ್ರವಾರ ಚಾಲನೆ ನೀಡಿದರು.

20ಕ್ಕೂ ಅಧಿಕ ಮಳಿಗೆಗಳಲ್ಲಿ ನೈಸರ್ಗಿಕ ಜೇನುತುಪ್ಪ ಹಾಗೂ ಜೇನು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.

ಬೆಂಗಳೂರು, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಂಗ್ರಹಿಸಲಾದ ಜೇನುತುಪ್ಪಗಳು ಇಲ್ಲಿ ಲಭ್ಯವಿವೆ. ವೈವಿಧ್ಯಮಯ ಜೇನು ಪೆಟ್ಟಿಗೆಗಳು ಹಾಗೂ ಜೇನುತುಪ್ಪ ಶೋಧಿಸುವ ಯಂತ್ರಗಳೂ ಗಮನ ಸೆಳೆದವು.

ಸಹಕಾರಿ ಸಂಘಗಳ ಮಳಿಗೆಗಳು ರಿಯಾಯಿತಿ ದರದಲ್ಲಿ ಜೇನು ಉತ್ಪನ್ನಗಳನ್ನು ಮಾರಾಟ ಮಾಡಿದವು. ಹೊಂಗೆ, ನೇರಳೆ, ಗೇರು, ಮಾವು, ನೀಲಗಿರಿ ಹಾಗೂ ಮತ್ತಿ ಮತ್ತಿತರ ಹೂವುಗಳ ಮಕರಂದದಿಂದ ತಯಾರಿಸಲಾದ ಜೇನುತುಪ್ಪಗಳೂ ಇದ್ದವು. ಪ್ರತಿ ಕೆ.ಜಿ.ಗೆ ₹ 250 ರಿಂದ ₹ 500ವರೆಗೂ ದರವಿತ್ತು. ಜೇನುತುಪ್ಪ ಮಿಶ್ರಿತ ನೆಲ್ಲಿಕಾಯಿ, ಒಣಹಣ್ಣು ಮಿಶ್ರಿತ ಜೇನುತುಪ್ಪ, ಜೇನು ಮೇಣ ಹಾಗೂ ಜೇನು ಉತ್ಪನ್ನಗಳಿಂದ ತಯಾರಾದ ಸಾಬೂನು, ಸುಗಂಧ ದ್ರವ್ಯಗಳೂ ಮಾರಾಟಕ್ಕಿದ್ದವು.

ಮೆಲ್ಲಿಫೆರ ಜೇನುಹುಳು ಸಾಕಣೆಗೆ ಬಳಸುವ ಕೆನಡಾದ ಜೇನುಪೆಟ್ಟಿಗೆ ಗಮನ ಸೆಳೆಯಿತು. ‘ಈ ಪೆಟ್ಟಿಗೆಯಲ್ಲಿ 10 ಎರಿಗಳಿರಲಿದ್ದು (ಜೇನು ಹುಟ್ಟು), ಒಮ್ಮೆ ಸರಾಸರಿ 1.4 ಕೆ.ಜಿ. ತುಪ್ಪವನ್ನು ಸಂಗ್ರಹಿಸಬಹುದಾಗಿದೆ. ಈ ಪೆಟ್ಟಿಗೆಗೆ ₹10 ಸಾವಿರ ತಗುಲಲಿದೆ’ ಎಂದು ಶ್ರೀಅನ್ನಪೂರ್ಣೇಶ್ವರಿ ನ್ಯಾಚುರಲ್ಸ್‌ ಸಂಸ್ಥೆಯ ಡಾ.ಭಾರ್ಗವ್ ತಿಳಿಸಿದರು.

ಬಹುಪಯೋಗಿ ಜೇನು: ‘ಔಷಧೀಯ ಗುಣ ಹೊಂದಿರುವ ಜೇನುತುಪ್ಪ ಉತ್ತಮ ಆರೋಗ್ಯಕ್ಕೆ ಸಹಕಾರಿ. ಯಾರು ಬೇಕಾದರೂ ಉತ್ತಮ ಪರಿಸರದಲ್ಲಿ ಜೇನು ಕೃಷಿ ಮಾಡಬಹುದಾಗಿದೆ. ಜೇನುಹುಳುಗಳಿಂದ ಆಗುವ ಪರಾಗ ಸ್ಪರ್ಶದಿಂದಾಗಿ ಕೃಷಿ ಉತ್ಪನ್ನಗಳ ಇಳುವರಿಯೂ ಹೆಚ್ಚಲಿದೆ‘ ಎಂದು ತೋಟಗಾರಿಕೆ ಇಲಾಖೆ ಸಿಬ್ಬಂದಿ ರಾಮಚಂದ್ರ ವಿವರಿಸಿದರು.

‘ಸಂಗ್ರಹಿಸಿದ ಜೇನು ತುಪ್ಪಕ್ಕೆ ನೀರು ಹಾಗೂ ಗಾಳಿ ತಾಗದಂತೆ ನೋಡಿಕೊಂಡಲ್ಲಿ 5 ರಿಂದ 10ವರ್ಷ ಸಂಗ್ರಹಿಸಿಡಲು ಸಾಧ್ಯ. ಜೇನು ಮೇಣಕ್ಕೂ ಉತ್ತಮ ಬೇಡಿಕೆಯಿದ್ದು, ಪ್ರತಿ ಕೆ.ಜಿ.ಗೆ ₹ 600ರಿಂದ ₹ 800 ಇದೆ’ ಎಂದು ತಿಳಿಸಿದರು.

ಜೇನು ಸಾಕಣೆ, ಜೇನುತುಪ್ಪದ ಮಹತ್ವದ ಬಗ್ಗೆ ಜನರು ನೇರವಾಗಿ ಜೇನು ಕೃಷಿಕರಿಂದ ಮಾಹಿತಿ ಪಡೆದರು. ಪ್ರಗತಿಪರ ಜೇನು ಕೃಷಿಕರು ಹಾಗೂ ಸಹಕಾರಿ ಸಂಘಗಳನ್ನು ಗೌರವಿಸಲಾಯಿತು.

ಜೇನು ಕೃಷಿ ಸಾಧಕರಿಗೆ ಸನ್ಮಾನ

ಜೇನು ಕೃಷಿಕರು;ಸ್ಥಳ

ರಾಜಪ್ಪ;ಬೆಂಗಳೂರು

ಎನ್‌.ಮಂಜುನಾಥಗೌಡ ನಾಡಗೌಡ;ಬಳ್ಳಾರಿ

ರಾತಾಳಾ ಅರವಿಂದ;ಕುರುಗೋಡು

ಮಧುಕೇಶ್ವರ ಜನಕ ಹೆಗಡೆ;ಶಿರಸಿ

ಧರ್ಮೇಂದ್ರ ಗಣಪತಿ ಹೆಗಡೆ;ಶಿರಸಿ

ರಾಮಾ ಮರಾಠಿ;ಯಲ್ಲಾಪುರ

ರವೀಶ್;ತುಮಕೂರು

ಎ.ಮನಮೋಹನ್;ಪುತ್ತೂರು

ಪುಟ್ಟಣ್ಣ;ಸುಳ್ಯ

ರಾಧಾಕೃಷ್ಣ ದಾಸ್;ಸುಳ್ಯ

ಕೆ.ಸಿ.ಕುಸುಮಾಕರ್;ಮಡಿಕೇರಿ

ಪಿ.ಎ.ನಂದಕುಮಾರ್;ಮಡಿಕೇರಿ

ಎನ್‌.ರತ್ನಾಕರ ಗೋರೆ;ಕಾರ್ಕಳ

ಟಿ.ಕೆ.ವಿನಯ್ ಕುಮಾರ್;ಕೋಲಾರ

ಕೆ.ವಿ.ಪ್ರವೀಣ್;ಕೊಪ್ಪ

ಚಂದ್ರಶೇಖರ್;ಮೂಡಿಗೆರೆ

ಎಲ್.ವಿ.ಸತ್ಯನಾರಾಯಣ ಭಟ್;ತೀರ್ಥಹಳ್ಳಿ

ಲಕ್ಷ್ಮೇಗೌಡ;ಬೆಂಗಳೂರು ಗ್ರಾಮಾಂತರ

ಉತ್ತಮ ಜೇನು ಕೃಷಿ ಸಹಕಾರಿ ಸಂಘಗಳು

–ದಕ್ಷಿಣ ಕನ್ನಡ ಜೇನು ಕೃಷಿಕರ ಸಹಕಾರಿ ಸಂಘ

–ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರಿ ಸಂಘ

–ಹೊನ್ನಾವರ ಜೇನು ಸಾಕುವವರು ಮತ್ತು ಗ್ರಾಮೀಣ ಸಹಕಾರಿ ಸಂಘ

–ಜೇನು ಸಾಕುವವರ ಸಹಕಾರಿ ಉತ್ಪಾದಕ ಸಂಘ ಸಿದ್ದಾಪುರ

–ದೊಡ್ಡ ಪ್ರಮಾಣದ ಆದಿವಾಸಿ ವಿವಿಧೋದ್ದೇಶ ಸಹಕಾರ ಸಂಘ ಕೊಪ್ಪ

‘ಜೇನುತುಪ್ಪ ಕಲಬೆರಕೆ ತಡೆಗೆ ಕಾಯ್ದೆ’

‘ಇತ್ತೀಚಿನ ದಿನಗಳಲ್ಲಿ ಜೇನುತುಪ್ಪಕ್ಕೆ ಸಕ್ಕರೆಯನ್ನು ಮಿಶ್ರಣ ಮಾಡಲಾಗುತ್ತಿದ್ದು, ಇದರಿಂದಾಗಿ ಜೇನುಕೃಷಿಕರಿಗೆ ಅನ್ಯಾಯವಾಗುತ್ತಿದೆ. ಕಲಬೆರಕೆ ತಡೆಯಲು ಕಾಯ್ದೆಯನ್ನು ರೂಪಿಸಲಾಗುವುದು’ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

‘ಜೇನು ಸಂತತಿ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಶಿರಸಿ ತಾಲ್ಲೂಕಿನ ಮಧುಕೇಶ್ವರ ಹೆಗಡೆ ಎಂಬ ರೈತ ಕೇವಲ ₹ 20 ಸಾವಿರ ಬಂಡವಾಳ ಹೂಡಿ, ಈಗ ₹ 1.50 ಕೋಟಿ ವಹಿವಾಟು ಮಾಡುತ್ತಿದ್ದಾರೆ. ಮನಸ್ಸು ಮಾಡಿದರೆ ಯಾವುದೇ ಸಾಧನೆ ಸಾಧ್ಯ ಎಂಬುದಕ್ಕೆ ಅವರು ಉದಾಹರಣೆ’ ಎಂದರು.

ತೋಟಗಾರಿಕೆ ಇಲಾಖೆಯ ನಿರ್ದೇಶಕ ಬಿ.ವೆಂಕಟೇಶ್, ‘ಸರ್ಕಾರವು ಕಳೆದ ವರ್ಷ ಜೇನುಕೃಷಿಗೆ ₹ 4 ಕೋಟಿ ಅನುದಾನ ನೀಡಿತ್ತು. ಈ ವರ್ಷ ₹ 7 ಕೋಟಿಗೆ ಹೆಚ್ಚಿಸಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT