4

ಕಳ್ಳನ ಹಿಡಿದ ಕಾನ್‌ಸ್ಟೆಬಲ್‌ಗೆ ಹನಿಮೂನ್ ಪ್ಯಾಕೇಜ್‌

Published:
Updated:
ಕಾನ್‌ಸ್ಟೆಬಲ್‌ ವೆಂಕಟೇಶ್‌ ಅವರನ್ನು ವೈಟ್‌ಫೀಲ್ಡ್‌ ವಿಭಾಗದ ಪೊಲೀಸ್‌ ಅಧಿಕಾರಿಗಳು ಸನ್ಮಾನಿಸಿದರು

ಬೆಂಗಳೂರು: ಸಾರ್ವಜನಿಕರೊಬ್ಬರ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಬೆನ್ನಟ್ಟಿ ಹಿಡಿದ ಬೆಳ್ಳಂದೂರು ಠಾಣೆಯ ಕಾನ್‌ಸ್ಟೆಬಲ್‌ ಕೆ.ಇ.ವೆಂಕಟೇಶ್‌ (31) ಅವರಿಗೆ, ಬಹುಮಾನವಾಗಿ ಹನಿಮೂನ್ ಪ್ಯಾಕೇಜ್‌ ನೀಡಲಾಗಿದೆ.

‘ನಾಲ್ವರು ಆರೋಪಿಗಳನ್ನು ಒಬ್ಬಂಟಿಯಾಗಿಯೇ ವೆಂಕಟೇಶ್‌ ಬೆನ್ನಟ್ಟಿದ್ದರು. ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರ ಕೆಲಸವನ್ನು ಮೆಚ್ಚಿ ₹10 ಸಾವಿರ ನಗದು ಹಾಗೂ ರಜೆ ಸಹಿತ ಹನಿಮೂನ್ ಪ್ಯಾಕೇಜ್‌ ನೀಡಲಾಗಿದೆ’ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್‌ ಅಹದ್‌ ತಿಳಿಸಿದರು.

‘ಜುಲೈ 5ರ ನಸುಕಿನಲ್ಲಿ ಬೆಳ್ಳಂದೂರು ಸರ್ಜಾಪುರ ರಸ್ತೆಯ ಬಿಗ್‌ ಬಜಾರ್ ಬಳಿ ನಿಂತಿದ್ದ ಕೆಎಫ್‌ಸಿ ಉದ್ಯೋಗಿ ಹನುಮಂತ, ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಅದೇ ವೇಳೆ ಎರಡು ಬೈಕ್‌ಗಳಲ್ಲಿ ಸ್ಥಳಕ್ಕೆ ಹೋಗಿದ್ದ ನಾಲ್ವರು ದುಷ್ಕರ್ಮಿಗಳು, ಮೊಬೈಲ್‌ ಕಸಿದುಕೊಂಡು ಪರಾರಿಯಾದರು’.

‘ಆತಂಕಗೊಂಡ ಹನುಮಂತ, ‘ಕಳ್ಳ... ಕಳ್ಳ...’ ಎಂದು ಕೂಗಾಡಿದ್ದರು. ಅದನ್ನು ಕೇಳಿಸಿಕೊಂಡಿದ್ದ ಗಸ್ತಿನಲ್ಲಿದ್ದ ವೆಂಕಟೇಶ್‌, ತಮ್ಮ ಬೈಕ್‌ನಲ್ಲೇ ಕಳ್ಳರನ್ನು ಬೆನ್ನಟ್ಟಿದ್ದರು. 4 ಕಿ.ಮೀವರೆಗೆ ಸಾಗಿ, ಆರೋಪಿಗಳ ಎರಡೂ ಬೈಕ್‌ಗಳಿಗೆ ತಮ್ಮ ಬೈಕ್‌ ಗುದ್ದಿಸಿದ್ದರು. ಕೆಳಗೆ ಬಿದ್ದ ಆರೋಪಿ ಕೋರಮಂಗಲದ ಅರುಣ್ ದನ್ಯಾಳ್ (20) ಎಂಬಾತನನ್ನು ಹಿಡಿದುಕೊಂಡರು. ಉಳಿದವರು ಓಡಿಹೋದರು’ ಎಂದು ಡಿಸಿಪಿ ಹೇಳಿದರು.

‘ಅರುಣ್‌ನನ್ನು ಬಂಧಿಸಿ, ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದೇವೆ. ಪರಾರಿಯಾದ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ’ ಎಂದು ಅವರು ವಿವರಿಸಿದರು. 

ನವೆಂಬರ್‌ನಲ್ಲಿ ಮದುವೆಯಾಗಿದ್ದರು: ‘ವೆಂಕಟೇಶ್ ಅವರ ಕೆಲಸ, ಇಲಾಖೆಯ ಪ್ರತಿಯೊಬ್ಬರಿಗೂ ಸ್ಫೂರ್ತಿ ಇದ್ದಂತೆ. ಕಳೆದ ನವೆಂಬರ್‌ 2ರಂದು ವೆಂಕಟೇಶ್‌ ಅವರ ಮದುವೆಯಾಗಿದೆ. ಮದುವೆಗೂ ಅವರು ಹೆಚ್ಚು ರಜೆ ‍ಪ‍ಡೆದಿಲ್ಲ. ಹೀಗಾಗಿ, ಅವರನ್ನು ಕೇರಳಕ್ಕೆ ಹನಿಮೂನ್‌ಗೆ ಕಳುಹಿಸುತ್ತಿದ್ದೇವೆ’ ಎಂದು ಅಹದ್‌ ತಿಳಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ವೆಂಕಟೇಶ್, ‘ಅಧಿಕಾರಿಗಳು ನನ್ನ ಕೆಲಸವನ್ನು ಮೆಚ್ಚಿದ್ದಕ್ಕೆ ಖುಷಿ ಆಗಿದೆ. ಮತ್ತಷ್ಟು ಆರೋಪಿಗಳನ್ನು ಬಂಧಿಸಲು ಅದು ಸ್ಫೂರ್ತಿ’ ಎಂದರು.

ಬೈಕ್‌ ಕೊಟ್ಟಿದ್ದ ಡಿಸಿಪಿ ಚನ್ನಣ್ಣನವರ

ಕೆಲವು ದಿನಗಳ ಹಿಂದಷ್ಟೇ ಪಶ್ಚಿಮ ವಿಭಾಗದ ಕಾನ್‌ಸ್ಟೆಬಲ್‌ ಚಂದ್ರಕುಮಾರ್‌ ಎಂಬುವರು, ಸರಗಳ್ಳನೊಬ್ಬನನ್ನು ಬೆನ್ನಟ್ಟಿ ಹಿಡಿದಿದ್ದರು. ಅವರ ಕೆಲಸ ಮೆಚ್ಚಿದ ಡಿಸಿಪಿ ರವಿ ಚನ್ನಣ್ಣನವರ, ಕಾನ್‌ಸ್ಟೆಬಲ್‌ಗೆ ₹ 1 ಲಕ್ಷ ನಗದು, 150 ಸಿ.ಸಿಯ ಹೊಸ ಬಜಾಜ್ ಪಲ್ಸರ್ ಬೈಕ್ ಹಾಗೂ ಕುಟುಂಬದ ಜತೆ ದಕ್ಷಿಣ ಭಾರತ ಪ್ರವಾಸದ ಪ್ಯಾಕೇಜ್‌ನ್ನು ಬಹುಮಾನವಾಗಿ ನೀಡಿದ್ದರು. ಅದರ ಬೆನ್ನಲ್ಲೇ ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್ ಅಹದ್‌, ಹನಿಮೂನ್ ಪ್ಯಾಕೇಜ್‌ ನೀಡುವ ಮೂಲಕ ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 71

  Happy
 • 2

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !