ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಪ್‌ಕಾಮ್ಸ್‌ಗೆ ₹25 ಕೋಟಿ ನೆರವು: ತೋಟಗಾರಿಕೆ ಸಚಿವರ ಮನವಿ

ದ್ರಾಕ್ಷಿ–ಕಲ್ಲಂಗಡಿ ಮೇಳಕ್ಕೆ ಚಾಲನೆ * ಮಾರ್ಚ್ 31ರವರೆಗೊ ನಡೆಯುವ ಮೇಳ
Last Updated 19 ಫೆಬ್ರುವರಿ 2020, 22:22 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ‘ಹಾಪ್‌ಕಾಮ್ಸ್‌ ಅಭಿವೃದ್ಧಿ ಗಾಗಿ ₹25 ಕೋಟಿ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗುವುದು’ ಎಂದು ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಮ್ಸ್‌) ವತಿಯಿಂದ ಬುಧವಾರ ಆಯೋಜಿಸಿದ್ದ ‘ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ’ ಉದ್ಘಾಟಿಸಿ ಮಾತನಾಡಿದರು.

‘ನಗರದಲ್ಲಿ ಒಟ್ಟು 232 ಹಾಪ್‌ಕಾಮ್ಸ್ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. 20ಕ್ಕೂ ಹೆಚ್ಚು ಮಳಿಗೆಗಳು ಕಾರಣಾಂತರಗಳಿಂದ ಸ್ಥಗಿತಗೊಂಡಿವೆ. ಅವುಗಳನ್ನು ಅಭಿವೃದ್ಧಿಪಡಿಸಿ ಶೀಘ್ರವೇ ಕಾರ್ಯಾರಂಭ ಮಾಡಲಾಗುವುದು’ ಎಂದರು.

‘ಕಬ್ಬನ್ನು ಪ್ರಧಾನವಾಗಿ ಬೆಳೆಯುತ್ತಿರುವ ಮಂಡ್ಯ ಭಾಗದಲ್ಲೂ ದ್ರಾಕ್ಷಿ, ಕಲ್ಲಂಗಡಿ ಸೇರಿ ಇನ್ನಿತರೆ ಹಣ್ಣುಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಬೇಕು. ಈ ಭಾಗಗಳಲ್ಲೂ ಹಾಪ್‌ಕಾಮ್ಸ್‌ ವಿಸ್ತರಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು’ ಎಂದರು.

ಶಾಸಕ ರಾಮಲಿಂಗಾರೆಡ್ಡಿ, ‘ಎಲ್ಲ ವಾರ್ಡ್‌ಗಳಲ್ಲಿ ಹಾಪ್‌ಕಾಮ್ಸ್‌ ಮಳಿಗೆಗಳಿವೆ. ನಗರ ವಿಸ್ತರಣೆಯಾದಂತೆ ಹಾಪ್‌ಕಾಮ್ಸ್‌ ಮಳಿಗೆಗಳ ಸಂಖ್ಯೆಯೂ ಹೆಚ್ಚಾಗಲಿ’ ಎಂದರು.

ಹಾಪ್‌ಕಾಮ್ಸ್‌ ಅಧ್ಯಕ್ಷ ಚಂದ್ರೇಗೌಡ,‘ ಸಂಸ್ಥೆಯಡಿ ಪ್ರಸ್ತುತ ಒಂಬತ್ತು ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದು, 10 ಸಾವಿರ ನೋಂದಾಯಿತ ರೈತರಿದ್ದಾರೆ.‌ಆದರೆ, ಸಂಸ್ಥೆ ನಷ್ಟದಲ್ಲಿದೆ ಎಂದು ಗಾಳಿ ಸುದ್ದಿ ಹರಿದಾಡುತ್ತಿದೆ. ಅದು ಸತ್ಯಕ್ಕೆ ದೂರ’ ಎಂದು ತಿಳಿಸಿದರು.

ಮಾರ್ಚ್‌ 31ರವರೆಗೆ ನಡೆಯಲಿರುವ ದ್ರಾಕ್ಷಿ ಮತ್ತು ಕಲ್ಲಂಗಡಿಮೇಳದ ಅಂಗವಾಗಿಗ್ರಾಹಕರಿಗೆ ಶೇ 10ರಷ್ಟು ರಿಯಾಯಿತಿ ನೀಡ ಲಾಗಿದೆ.ಮೇಳದಲ್ಲಿ 15 ತಳಿಯ ದ್ರಾಕ್ಷಿ ಹಾಗೂ 5 ತಳಿಯ ಕಲ್ಲಂಗಡಿ ಮಾರಾಟಕ್ಕೆ ಲಭ್ಯ ಇವೆ.

ಪಂಚತಾರಾ ಹೋಟೆಲ್‌ಗಳಿಗೂ ಪೂರೈಕೆ?
‘ಹಾಪ್‌ಕಾಮ್ಸ್‌ ವತಿಯಿಂದ ಈಗಾಗಲೇ ಕೆಲವು ಹೋಟೆಲ್‌ಗಳಿಗೆ ತಾಜಾ ಹಣ್ಣು–ತರಕಾರಿ ಪೂರೈಕೆಯಾಗುತ್ತಿದೆ. ಎಲ್ಲ ಬೃಹತ್‌ ಹೋಟೆಲ್‌ಗಳು ಹಾಗೂ ಪಂಚತಾರಾ ಹೋಟೆಲ್‌ಗಳಿಗೂ ಸಂಸ್ಥೆ ವತಿಯಿಂದ ಹಣ್ಣು ತರಕಾರಿ ಪೂರೈಸುವ ಚಿಂತನೆ ನಡೆಸಿದ್ದೇವೆ’ ಎಂದುಸಚಿವ ನಾರಾಯಣಗೌಡ ತಿಳಿಸಿದರು.

‘ಈ ಬಗ್ಗೆ ಹಾಪ್‌ಕಾಮ್ಸ್‌ ಸಿಬ್ಬಂದಿ, ರೈತರು ಹಾಗೂ ಹೋಟೆಲ್‌ ಉದ್ದಿಮೆದಾರರೊಂದಿಗೆ ಚರ್ಚಿಸಲಾಗುವುದು. ಹಣ್ಣು, ತರಕಾರಿಗಳ ಗುಣಮಟ್ಟ, ಬೇಡಿಕೆ ಹಾಗೂ ಪೂರೈಕೆ ಪ್ರಮಾಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಮೇಳದಲ್ಲಿ ದ್ರಾಕ್ಷಿ ಸವಿದ ಬಾಲಕಿ –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT