ಬೆಂಗಳೂರು: ನಗರದ ಆಸಕ್ತ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಪ್ರವಾಸದ ಮೂಲಕ ತೋಟಗಾರಿಕೆ ಹಾಗೂ ಸ್ಥಳೀಯ ಸಸ್ಯ ಸಂಪನ್ಮೂಲಗಳನ್ನು ಪರಿಚಯಿಸಲು ‘ತೋಟಗಾರಿಕೆ ಪ್ರವಾಸೋದ್ಯಮ’ (ಹಾರ್ಟಿ-ಟೂರಿಸಂ) ಎಂಬ ಯೋಜನೆ ಅನುಷ್ಠಾನಕ್ಕೆ ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಗಳು ಮುಂದಾಗಿವೆ.
ಯೋಜನೆ ಅನುಷ್ಠಾನಕ್ಕೆ ಸಿದ್ಧತೆಗಳೂ ಆರಂಭವಾಗಿದ್ದು, ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ (ಟಿ.ಜಿ.ಹಳ್ಳಿ, 37 ಎಕರೆ) ಹಾಗೂ ತುಮಕೂರು ಜಿಲ್ಲೆಯ ದೊಡ್ಡಸಾಗ್ಗೆರೆಯಲ್ಲಿರುವ (250 ಎಕರೆ ಪ್ರದೇಶ) ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಎರಡೂ ಇಲಾಖೆಗಳು ಜಂಟಿಯಾಗಿ ಪ್ರವಾಸಿಗರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಿವೆ.
‘ಗಿಡ ಬೆಳೆಸುವುದು, ಆರೈಕೆ ಮಾಡುವುದು, ಕೈತೋಟದ ಸಿದ್ಧತೆ, ಕಾಂಪೋಸ್ಟ್ ತಯಾರಿಕೆ, ಕಸಿ ಕಟ್ಟುವ ವಿಧಾನಗಳನ್ನು ಪ್ರವಾಸದಲ್ಲಿ ಪರಿಚಯಿಸಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕೆ.ಎಂ. ಪರಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಟಿ.ಜಿ.ಹಳ್ಳಿ ಕ್ಷೇತ್ರದಲ್ಲಿ ಪ್ರವಾಸಿ ಸ್ನೇಹಿ ವಾತಾವರಣವಿದೆ. ದೊಡ್ಡಸಾಗ್ಗೆರೆಯಲ್ಲಿ ನೂರು ಎಕರೆಯಲ್ಲಿ ಸಸ್ಯ ಶಾಸ್ತ್ರೀಯ (ಬಟಾನಿಕಲ್ ಗಾರ್ಡನ್) ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಉಪಹಾರ ಮಂದಿರವನ್ನೂ ನಿರ್ಮಿಸಲಾಗುತ್ತದೆ’ ಎಂದು ವಿವರಿಸಿದರು.
ಕೈತೋಟ ಪ್ರಿಯರಿಗೆ ಸುಸ್ಥಿರ ಪ್ರವಾಸೋದ್ಯಮದ ಅರಿವು ಮೂಡಿಸುವುದು. ವಿದ್ಯಾರ್ಥಿಗಳಿಗೆ ಸ್ಥಳೀಯ ಸಸ್ಯಗಳು, ಹಣ್ಣಿನ ಬೆಳೆಗಳು, ತರಕಾರಿ ವೈವಿಧ್ಯದ ಬಗ್ಗೆ ಮಾಹಿತಿ ನೀಡುವುದು, ‘ಹಾರ್ಟಿ ಟೂರಿಸಂ’ ಮುಖ್ಯ ಉದ್ದೇಶವಾಗಿದೆ.
* ಪ್ರವಾಸದೊಂದಿಗೆ ‘ತೋಟಗಾರಿಕೆ ಕಲಿಕೆ’ * ವಿದ್ಯಾರ್ಥಿಗಳಿಗೆ ಕೃಷಿ ಸಂಸ್ಕೃತಿ ಪರಿಚಯ * ಒಂದು ದಿನ, ಎರಡು ತಾಣಕ್ಕೆ ಭೇಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.