ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಮೇಳ: ಭೌತಿಕ ವೀಕ್ಷಣೆಗೆ ಅವಕಾಶ ಇಲ್ಲ

ಆನ್‌ಲೈನ್‌ ವೇದಿಕೆಗಳಲ್ಲಿ ಮೇಳ ಪ್ರದರ್ಶಿಸಲು ಐಐಎಚ್ಆರ್ ಸಿದ್ಧತೆ
Last Updated 14 ಜನವರಿ 2022, 17:07 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ಆವರಣದಲ್ಲಿ ಈ ಬಾರಿಯ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ದ ಭೌತಿಕ ವೀಕ್ಷಣೆಯನ್ನು ಕೋವಿಡ್‌ ಕಾರಣದಿಂದ ರದ್ದು ಮಾಡಲಾಗಿದೆ.ಆನ್‌ಲೈನ್‌ ವೇದಿಕೆಗಳಲ್ಲೇ ಮೇಳ ಪ್ರದರ್ಶಿಸಲು ತಯಾರಿ ನಡೆದಿದೆ.

ಸಂಸ್ಥೆಯ ಆವರಣದಲ್ಲಿ ಪ್ರತಿ ವರ್ಷದಂತೆ ಮೇಳಕ್ಕೆ ಬೇಕಾದ ಅಗತ್ಯ ತಯಾರಿಗಳು ಈ ಬಾರಿಯೂ ನಡೆದಿದ್ದವು. ಫೆಬ್ರುವರಿ 24ರಿಂದ 27ರವೆರೆಗೆ ಮೇಳ ನಡೆಸಲು ದಿನಾಂಕ ನಿಗದಿಯಾಗಿತ್ತು. ಆದರೆ, ಕೋವಿಡ್ ಪ್ರಕರಣಗಳ ಏರಿಕೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೇಳಕ್ಕೆ ಜನರಿಗೆ ಪ್ರವೇಶ ನೀಡದಿರಲು ಐಐಎಚ್ಆರ್ ತೀರ್ಮಾನಿಸಿದೆ.

‘ಕೋವಿಡ್‌ ಪರಿಸ್ಥಿತಿಯಲ್ಲಿ ಲಕ್ಷಾಂತರ ಜನ ಸೇರುವ ತೋಟಗಾರಿಕೆ ಮೇಳ ಆಯೋಜನೆ ಸೂಕ್ತವಲ್ಲ. ಈ ಕಾರಣದಿಂದ ಮೇಳದ ಭೌತಿಕ ವೀಕ್ಷಣೆಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ. ಈ ಬಾರಿ ಆನ್‌ಲೈನ್‌ ಮೇಳಕ್ಕೆ ಆದ್ಯತೆ ನೀಡಿದ್ದೇವೆ’ ಎಂದುಐಐಎಚ್ಆರ್ ನಿರ್ದೇಶಕಬಿ.ಎನ್.ಎಸ್.ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷಿಕರಿಗೆ ನೆರವಾಗುವಂತೆ ಸಂಸ್ಥೆ ಈ ಬಾರಿಯೂ 14 ಕೃಷಿ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸಿದೆ. 10 ಹೊಸ ತಳಿಗಳನ್ನೂ ಹೊರತಂದಿದ್ದೇವೆ. ಇವುಗಳ ಪ್ರಾತ್ಯಕ್ಷಿಕೆಗಳು ಸಂಸ್ಥೆಯ ಆವರಣದಲ್ಲಿ ಈಗಾಗಲೇ ಸಿದ್ಧಗೊಂಡಿವೆ’ ಎಂದು ವಿವರಿಸಿದರು.

‘ಒಂದು ವೇಳೆ ಮೇಳ ನಿಗದಿಯಾಗಿರುವ ಸಮಯಕ್ಕೆ ಕೋವಿಡ್‌ ಪ್ರಭಾವ ತಗ್ಗಿದರೆ, ಸೀಮಿತ ಮಂದಿಗೆ ಮಾತ್ರ ಮೇಳಕ್ಕೆ ಪ್ರವೇಶ ನೀಡಲಿದ್ದೇವೆ. ಜಿಲ್ಲಾವಾರು ರೈತರಿಗೆ ನಿಗದಿತ ದಿನದಂದು ಮೇಳ ವೀಕ್ಷಣೆಗೆ ಅವಕಾಶ ಕಲ್ಪಿಸುವ ಚಿಂತನೆ ಇದೆ. ಮೇಳದಲ್ಲಿ ಪ್ರದರ್ಶನ ಮಳಿಗೆಗಳನ್ನು ಹಾಕಲು ಹಲವರು ಆಸಕ್ತಿ ತೋರಿದ್ದರು. ಭೌತಿಕ ಮೇಳ ರದ್ದಾಗಿರುವುದರಿಂದ ಅವರು ಮುಂಗಡವಾಗಿ ನೀಡಿದ್ದ ಹಣ ಹಿಂತಿರುಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT