ಹೊಸಹಳ್ಳಿಯ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ!

7
ದಟ್ಟಣೆ ಹೆಚ್ಚಾದರೂ ಬಳಕೆಗೆ ಅವಕಾಶವಿಲ್ಲ: ಸಾರ್ವಜನಿಕರ ತೀವ್ರ ಅಸಮಾಧಾನ

ಹೊಸಹಳ್ಳಿಯ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ!

Published:
Updated:
Deccan Herald

ಬೆಂಗಳೂರು: ನಗರದ ಹೊಸಹಳ್ಳಿಯ ಮೆಟ್ರೊ ನಿಲ್ದಾಣದ ಪಕ್ಕದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮುಂಭಾಗದ ಸರ್ವಿಸ್‌ ರಸ್ತೆಯಲ್ಲಿ ಪೊಲೀಸರು ವಾಹನ ಸಂಚಾರ ನಿರ್ಬಂಧಿಸಿದ್ದು, ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗಿದೆ.

ಆದಿಚುಂಚನಗಿರಿ ಮಠದ ಸಮುದಾಯ ಭವನದ ಕಡೆಯಿಂದ ಬರುವ ರಸ್ತೆಯು ಸರ್ವಿಸ್‌ ರಸ್ತೆಯನ್ನು ಸಂಪರ್ಕಿಸುತ್ತದೆ. ಇಲ್ಲಿ ಸಂಚಾರ ಪೊಲೀಸರು ಏಳೆಂಟು ತಿಂಗಳ ಹಿಂದೆಯೇ ಸರ್ವಿಸ್‌ ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್‌ಗಳನ್ನು ಇಟ್ಟಿದ್ದರು. ಆಗ ಒಂದು ಬದಿಯಿಂದ ವಾಹನಗಳು ಈ ರಸ್ತೆಗೆ ಬರುವುದು ಸ್ಥಗಿತಗೊಂಡಿತ್ತು.

ಎರಡು ತಿಂಗಳ ಹಿಂದೆ ಇದೇ ರಸ್ತೆಯ ಇನ್ನೊಂದು ಬದಿಗೂ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಮಹಾ ಗಣಪತಿ ಗಂಗಾಧರೇಶ್ವರ ಸ್ವಾಮಿ, ಪಾರ್ವತಿ ದೇವಿ ದೇವಸ್ಥಾನದ ಮುಂದೆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ ಹಾಕಲಾಗಿದೆ. ಹಾಗಾಗಿ ಈ ರಸ್ತೆಯ ಸುಮಾರು 300 ಮೀಟರ್‌ ಉದ್ದದಷ್ಟು ಭಾಗ ಸಾರ್ವಜನಿಕರ ಬಳಕೆಗೆ ಲಭ್ಯವೇ ಇಲ್ಲದಂತಾಗಿದೆ ಎಂದು ದೂರುತ್ತಾರೆ ಸ್ಥಳೀಯರು.

‘ಈ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿದ್ದಾಗ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚು ಇರಲಿಲ್ಲ. ಸಮುದಾಯ ಭವನದ ಕಡೆಯ ರಸ್ತೆ ಸೇರುವಲ್ಲಿ ಬ್ಯಾರಿಕೇಡ್‌ ಅಳವಡಿಸಿದಾಗ ಮೆಟ್ರೊ ಪ್ರಯಾಣಿಕರು ಈ 300 ಮೀಟರ್‌ ಉದ್ದದ ರಸ್ತೆಯನ್ನು ವಾಹನ ನಿಲ್ಲಿಸುವುದಕ್ಕೆ ಬಳಸಿಕೊಳ್ಳುತ್ತಿದ್ದರು. ಈಗ ಇಲ್ಲಿನ ಮಹಾಗಣಪತಿ ಗಂಗಾಧರೇಶ್ವರ ಸ್ವಾಮಿ, ಪಾರ್ವತಿದೇವಿ ದೇವಸ್ಥಾನದ ಎದುರು ಬ್ಯಾರಿಕೇಡ್‌ ಅಳವಡಿಸಿ ಅದಕ್ಕೂ ನಿರ್ಬಂಧ ವಿಧಿಸಲಾಗಿದೆ’ ಎಂದು ಆಟೊರಿಕ್ಷಾ ಚಾಲಕ ಅಯೂಬ್ ಖಾನ್‌ ಬೇಸರ ವ್ಯಕ್ತಪಡಿಸುತ್ತಾರೆ.

ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ಹೊಸಹಳ್ಳಿ ಬಳಿ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ವಾಹನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಸರ್ವಿಸ್‌ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರೆ ಸಮಸ್ಯೆ ನಿವಾರಣೆ ಆಗುತ್ತದೆ ಎನ್ನುತ್ತಾರೆ ಖಾನ್‌.

‘ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸುವಂತೆ ಮಠದ ವತಿಯಿಂದ ಸಂಚಾರ ಪೊಲೀಸರನ್ನು ಕೋರಿಲ್ಲ. ಅವರು ಸಂಚಾರ ದಟ್ಟಣೆ ನಿಯಂತ್ರಣದ ಸಲುವಾಗಿ ಈ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದಕ್ಕೆ ನಮ್ಮಿಂದ ಯಾವ ಆಕ್ಷೇಪವೂ ಇಲ್ಲ’ ಎಂದು ಮಠದ ಸೌಮ್ಯನಾಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

**

ಸರ್ವಿಸ್‌ ರಸ್ತೆಯ ಈ ಭಾಗವು ಮಠಕ್ಕೆ ಬರುವ ಗಣ್ಯರ ವಾಹನಗಳ ಸಂಚಾರಕ್ಕೆ ಸೀಮಿತವಾಗಿದೆ. ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು
– ವಸಂತ, ಸ್ಥಳೀಯ ನಿವಾಸಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !