ಗುರುವಾರ , ಅಕ್ಟೋಬರ್ 17, 2019
22 °C

ನೆಪ್ರೊ ಯುರಾಲಜಿ ಸಂಸ್ಥೆ: ಶೆಡ್‌ನಲ್ಲಿಯೇ ರಾತ್ರಿ ಕಳೆದ ರೋಗಿಗಳು

Published:
Updated:
Prajavani

ಬೆಂಗಳೂರು: ‘ಹಾಸಿಗೆಯಿಲ್ಲ ಎಂಬ ಕಾರಣ ನೀಡಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ್ದಾರೆ. ಇದರಿಂದಾಗಿ ಚಿಕಿತ್ಸೆಗಾಗಿ ಶೆಡ್‌ನಲ್ಲಿಯೇ ಕಾಲಕಳೆಯುತ್ತಿದ್ದೇವೆ’ ಎಂದು ಕೆಲ ರೋಗಿಗಳು ನೆಪ್ರೊ ಯುರಾಲಜಿ ಸಂಸ್ಥೆಯ ವಿರುದ್ಧ ಆರೋಪಿಸಿದ್ದಾರೆ.

ಸಂಸ್ಥೆಯ ಪಕ್ಕದಲ್ಲಿರುವ ಶೆಡ್‌ನಲ್ಲಿ 30ಕ್ಕೂ ಅಧಿಕ ಮಂದಿ ದಿನ ಕಳೆಯುತ್ತಿದ್ದಾರೆ. ಇದರಲ್ಲಿ 20 ಮಂದಿ
ರೋಗಿಗಳಾಗಿದ್ದಾರೆ.

‘ಬಳ್ಳಾರಿ, ಹೊಸಕೋಟೆ, ಕೋಲಾರ, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಚಿಕಿತ್ಸೆಗೆ ಬಂದಿದ್ದು, ಸಂಸ್ಥೆಯಲ್ಲಿ ಹಾಸಿಗೆ ಖಾಲಿಯಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ದಾರಿ ಕಾಣದೇ ಶೆಡ್‌ನಲ್ಲಿ ಮಲಗಿದ್ದೇವೆ. ಕೆಲವರು ಕಾರು ಪಾರ್ಕಿಂಗ್‌ ಸ್ಥಳದಲ್ಲಿ ದಿನ ಕಳೆಯುತ್ತಿದ್ದಾರೆ’ ಎಂದು ರೋಗಿಗಳ ಸಂಬಂಧಿಗಳು ದೂರಿದರು. 

‘ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ನಾಲ್ಕು ದಿನದ ಹಿಂದೆ ಸಿಂಧನೂರಿನಿಂದ ಬಂದಿದ್ದು, ಚಿಕಿತ್ಸೆಗಾಗಿ ಇವತ್ತು, ನಾಳೆ ಎಂದು ವೈದ್ಯರು ಸತಾಯಿಸುತ್ತಿದ್ದಾರೆ. ನೋವಿನ ಬಾಧೆ ತಾಳಲಾರದೆ ರಾತ್ರಿಯಿಡೀ ನಿದ್ದೆ ಬರುತ್ತಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಲು ನಮ್ಮ ಬಳಿ ಹಣ ಕೂಡಾ ಇಲ್ಲ’ ಎಂದು ರೋಗಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ. 

‘ರೋಗಿಗಳನ್ನು ರಸ್ತೆಯಲ್ಲಿಯೇ ಮಲಗಿಸುತ್ತಿದ್ದಾರೆ. ಆಸ್ಪತ್ರೆಯೊಳಗೆ ದಾಖಲಿಸಿಕೊಳ್ಳುತ್ತಿಲ್ಲ. ತಮ್ಮನನ್ನು ಅಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಬಂದಿದ್ದು, ಇದೀಗ ಮಳೆಯ ನಡುವೆಯೇ ಚಿಕಿತ್ಸೆಗಾಗಿ ಎದುರು ನೋಡುತ್ತಿದ್ದೇವೆ’ ಎಂದು ಹೊಸಕೋಟೆಯ ಅಮುದಾ ತಿಳಿಸಿದರು. 

‘ಸಂಸ್ಥೆಗೆ ಬಂದ ಯಾವುದೇ ರೋಗಿಯನ್ನು ಹೊರಗಡೆ ಮಲಗಿಸುವುದಿಲ್ಲ. 132 ಹಾಸಿಗೆಗಳಿದ್ದು, ಭರ್ತಿಯಾದಲ್ಲಿ ವಿಕ್ಟೋರಿಯಾ ತುರ್ತುಚಿಕಿತ್ಸಾ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಹೊರ ರೋಗಿಗಳಿಗೆ ಬೆಡ್‌ ಒದಗಿಸಲು ಅವಕಾಶವಿಲ್ಲ. ಹಾಗಾಗಿ ಶೆಡ್‌ನಲ್ಲಿ ಮಲಗಿದ್ದಾರೆ ಎನ್ನಲಾದವರು ಹೊರರೋಗಿಗಳಾಗಿರಬಹುದು’ ಎಂದು ಸಂಸ್ಥೆಯ ನಿರ್ದೇಶಕ ಡಾ. ಕೇಶವಮೂರ್ತಿ ಸ್ಪಷ್ಟಪಡಿಸಿದರು. 

‘ಹಗಲಿನ ವೇಳೆ ಚಿಕಿತ್ಸೆಗೆ ಬರುವ ರೋಗಿಗಳನ್ನು ಕಾಯಲು ಶೆಡ್‌ ನಿರ್ಮಿಸಲಾಗಿದೆ. ಕಾವಲುಗಾರರು ರಾತ್ರಿ ವೇಳೆ ಆ ಸ್ಥಳದಲ್ಲಿ ಮಲಗಿರುತ್ತಾರೆ’ ಎಂದು ತಿಳಿಸಿದರು.

Post Comments (+)