ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನ: ಚರ್ಚೆ’

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಭರವಸೆ
Published 31 ಆಗಸ್ಟ್ 2024, 21:30 IST
Last Updated 31 ಆಗಸ್ಟ್ 2024, 21:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹೋಟೆಲ್‌ಗಳಿಗೆ ಅಧಿಕೃತವಾಗಿ ಉದ್ಯಮದ ಸ್ಥಾನಮಾನ ನೀಡುವುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ನಗರದಲ್ಲಿ ಶನಿವಾರ ಹಮ್ಮಿಕೊಂಡ ಜಿಲ್ಲಾವಾರು ಸಂಘಗಳ ಸಂಘಟನಾ ಸಮ್ಮಿಲನ ಸಮಾರಂಭ ಉದ್ಘಾಟಿಸಿ, ಮಾತನಾಡಿದರು. 

‘ನಾವು ಮಾತನಾಡುವಾಗ ‘ಹೋಟೆಲ್ ಉದ್ಯಮ’ ಎಂದು ಹೇಳುವುದು ರೂಢಿಯಲ್ಲಿದೆ. ಆದರೆ, ಹೋಟೆಲ್ ನಡೆಸುವ ಚಟುವಟಿಕೆಗೆ ಇನ್ನೂ ಆ ಸ್ಥಾನಮಾನ ಅಧಿಕೃತವಾಗಿ ಸಿಕ್ಕಿಲ್ಲ. ಈ ವಿಷಯದಲ್ಲಿ ಸರ್ಕಾರವು ಹೋಟೆಲ್ ಮಾಲೀಕರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಪರಿಶೀಲನೆ ನಡೆಸಲಿದೆ. ಹೋಟೆಲ್ ಚಟುವಟಿಕೆಯು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುತ್ತಾ ಬಂದಿದೆ. ಇದು ಪ್ರವಾಸೋದ್ಯಮ ಬೆಳವಣಿಗೆಗೂ ಪೂರಕವಾಗಿದೆ’ ಎಂದು ಹೇಳಿದರು. 

‘ಹೋಟೆಲ್ ನಡೆಸುವವರು ಜನರ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಆಹಾರ ಒದಗಿಸುವುದರ ಬಗ್ಗೆಯೂ ಕಾಳಜಿ ವಹಿಸಬೇಕು. ಉತ್ತಮ ಎಣ್ಣೆ ಬಳಸಲು ಒತ್ತು ಕೊಡಬೇಕು. ಸ್ಪರ್ಧಾತ್ಮಕ ದರದಲ್ಲಿ ಆಹಾರ-ಪಾನೀಯಗಳು ಕೈಗೆಟುಕುವಂತೆ ಮಾಡಬೇಕು’ ಎಂದು ತಿಳಿಸಿದರು. 

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಪ್ರತಿ ನಿತ್ಯ 1 ಕೋಟಿ ಜನರಿಗೆ ಹೋಟೆಲ್‌ಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಹಾರವನ್ನು ಒದಗಿಸುತ್ತಿವೆ. ಲಕ್ಷಾಂತರ ಮಂದಿಗೆ ಉದ್ಯೋಗವಕಾಶಗಳನ್ನೂ ಸೃಷ್ಟಿಸಿವೆ. ಜನಸಾಮಾನ್ಯರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಗುಣಮಟ್ಟದ ಆಹಾರವನ್ನು ಹೋಟೆಲ್‌ಗಳು ನೀಡಬೇಕು’ ಎಂದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಕರಾವಳಿ ಹೋಟೆಲ್‌ಗಳು ಗುಣಮಟ್ಟದ ಆಹಾರವನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ಹೋಟೆಲ್ ಉದ್ದಿಮೆದಾರರು ಗ್ರಾಹಕರಿಗೆ ಗುಣಮಟ್ಟದ ಆಹಾರ ಒದಗಿಸಬೇಕು’ ಎಂದು ಹೇಳಿದರು. 

ಸಮಾರಂಭದಲ್ಲಿ ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಎಂ. ರಾಜೇಂದ್ರ, ಗೌರವ ಅಧ್ಯಕ್ಷ ಬಿ.ಚಂದ್ರಶೇಖರ್ ಹೆಬ್ಬಾರ್ ಹಾಗೂ ಹೋಟೆಲ್ ಉದ್ಯಮಿ ಆರ್.ಆರ್. ರಮಣರೆಡ್ಡಿ ಅವರನ್ನು ಸನ್ಮಾನಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT