ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಮನೆಗಳ ಸಕ್ರಮ | ನವೆಂಬರ್‌ನಲ್ಲಿ ಹಕ್ಕುಪತ್ರ ವಿತರಣೆ: ಸಚಿವ ಅಶೋಕ

Last Updated 11 ಸೆಪ್ಟೆಂಬರ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಕಾರ್ಯಕ್ಕೆ ಕಂದಾಯ ಇಲಾಖೆ ಚಾಲನೆ ನೀಡಿದ್ದು, ನವೆಂಬರ್ ಅಂತ್ಯದೊಳಗೆ 10 ಸಾವಿರ ಮಂದಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ.

ಸರ್ಕಾರಿ ಜಮೀನಿನಲ್ಲಿ30X40 ಅಡಿಗಳ ಮಿತಿಯ ಒಳಗೆ ನಿರ್ಮಿಸಿರುವ ವಾಸದ ಮನೆಗಳನ್ನು ಮಾತ್ರ ಸಕ್ರಮಗೊಳಿಸಿ, ಹಕ್ಕುಪತ್ರ ವಿತರಿಸಲಾಗುವುದು. ಕೇವಲ ₹50 ಶುಲ್ಕ ಪಡೆದು ಹಕ್ಕುಪತ್ರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಹೊರೆ ಇಲ್ಲದೆ, ಅತ್ಯಲ್ಪ ಮೊತ್ತದಲ್ಲಿ ಮನೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ಮನೆ ಹೊಂದಿದವರು 15 ವರ್ಷಗಳ ಕಾಲಮಾರಾಟ ಮಾಡುವಂತಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ತಿಳಿಸಿದರು. ‘ಮನೆಗಳ ಹಕ್ಕುಪತ್ರಗಳನ್ನು ನಕಲು ಮಾಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಹಕ್ಕುಪತ್ರದ ಮೂರು ಪ್ರತಿ ತಯಾರಿಸಿ, ಒಂದನ್ನು ಫಲಾನುಭವಿಗೆ ನೀಡಲಾಗುತ್ತದೆ. ಮತ್ತೊಂದನ್ನು ಉಪನೋಂದಣಾಧಿಕಾರಿ ಕಚೇರಿ ಹಾಗೂ ಇನ್ನೊಂದು ಪ್ರತಿಯನ್ನು ತಾಲ್ಲೂಕು ಕಚೇರಿಯಲ್ಲಿ ದಾಖಲೆಯಾಗಿ ಇಟ್ಟುಕೊಳ್ಳಲಾಗುತ್ತದೆ. ಇದರಿಂದ ನಕಲು ಮಾಡಿ ಮನೆ ಕಬಳಿಸುವುದನ್ನು ತಡೆಯಬಹುದು. ಜತೆಗೆ ಫಲಾನುಭವಿಗಳಿಗೆ ಮೋಸ ಆಗುವುದನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.

ಇಂತಹ ಯೋಜನೆ ಜಾರಿ ಮಾಡುವ ಸಮಯದಲ್ಲಿ ನಕಲು ಮಾಡುವವರು ಹುಟ್ಟಿಕೊಳ್ಳುತ್ತಾರೆ. ಇದನ್ನು ನಿಯಂತ್ರಿಸುವುದು ಸುಲಭದ ಮಾತಲ್ಲ. ಹಾಗಾಗಿಯೇ ಮೂರು ಹಕ್ಕುಪತ್ರ ಸಿದ್ಧಪಡಿಸಿ, ಸಂಬಂಧಿಸಿದ ಕಚೇರಿಯಲ್ಲಿ ದಾಖಲೆಯಾಗಿ ಇಟ್ಟುಕೊಳ್ಳಲಾಗುತ್ತದೆ ಎಂದು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಹಕ್ಕುಪತ್ರ ಸಿದ್ಧಪಡಿಸಲು ಉಪನೋಂದಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. ನವೆಂಬರ್‌ನಲ್ಲಿ ಸಮಾವೇಶ ಮಾಡಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದರು.

94ಸಿಸಿ ಅಡಿಯಲ್ಲಿ ಜಾರಿ

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಸಿಸಿಗೆ ತಿದ್ದುಪಡಿ ತಂದಿದ್ದು, ಈ ನಿಯಮದ ಅಡಿಯಲ್ಲಿ ನಗರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲಾಗುವುದು. ‘ಈ ನಿಯಮದ ಅನ್ವಯ ಒಂದು ಬಾರಿಗೆ ಮಾತ್ರ ಸಕ್ರಮಗೊಳಿಸಲಾಗುತ್ತಿದೆ’ ಎಂದು ಆರ್.ಅಶೋಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT